ಸ್ವಸಹಾಯ ಸಂಘ ಉತ್ಪನ್ನಗಳಿಗೆ ವಿಶ್ವ ಮಾರುಕಟ್ಟೆ: ಡಾ.ಪ್ರಭಾ ಭರವಸೆ

| Published : May 17 2025, 01:25 AM IST

ಸಾರಾಂಶ

ಸ್ವಸಹಾಯ ಸಂಘದ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸಲಾಗುವುದು. ಈ ಹಿನ್ನೆಲೆ ಉತ್ಪನ್ನಗಳನ್ನು ಹೈಜನಿಕ್ ಆಗಿ, ಗುಣಮಟ್ಟದಿಂದ ತಯಾರಿಸಬೇಕು. ಅಲ್ಲದೇ, ಗ್ರಾಹಕರ ಮನಸೆಳೆಯುವಂತೆ ಅವುಗಳ ಪ್ಯಾಕಿಂಗ್ ಮಾಡುವುದು ಸಹ ಅತಿ ಮುಖ್ಯ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

- ಗಾಜಿನ ಮನೆಯಲ್ಲಿ ಪಿಎಂಎಫ್‌ಎಂಇ ಫಲಾನುಭವಿಗಳ ಸಮಾಲೋಚನೆ, ಮಾರುಕಟ್ಟೆ ನೆರವು, ವ್ಯಾಪಾರ ಅಭಿವೃದ್ಧಿ ಕಾರ್ಯಾಗಾರ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸಲಾಗುವುದು. ಈ ಹಿನ್ನೆಲೆ ಉತ್ಪನ್ನಗಳನ್ನು ಹೈಜನಿಕ್ ಆಗಿ, ಗುಣಮಟ್ಟದಿಂದ ತಯಾರಿಸಬೇಕು. ಅಲ್ಲದೇ, ಗ್ರಾಹಕರ ಮನಸೆಳೆಯುವಂತೆ ಅವುಗಳ ಪ್ಯಾಕಿಂಗ್ ಮಾಡುವುದು ಸಹ ಅತಿ ಮುಖ್ಯ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದ ಗಾಜಿನ ಮನೆಯಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೃಷಿ ಇಲಾಖೆ, ಕೌಶಲ್ಯ ಅಭಿವೃದ್ಧಿ ಇಲಾಖೆ, ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಪಿಎಂಎಫ್‌ಎಂಇ ಫಲಾನುಭವಿಗಳ ಸಮಾಲೋಚನೆ, ಮಾರುಕಟ್ಟೆ ನೆರವು ಹಾಗೂ ವ್ಯಾಪಾರ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಸಹಾಯ ಸಂಘಗಳು ಸಿದ್ಧಪಡಿಸುವ ಉತ್ಪನ್ನಗಳಿಗೆ ವ್ಯಾಪಾರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕೆಲಸ ಆಗಲಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾದಯ ಅಭಿಯಾನದಡಿ ಗ್ರಾಮೀಣ ಮಹಿಳಾ ಸದಸ್ಯರನ್ನು ಒಗ್ಗೂಡಿಸಿ, ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ಇಂತಹ ಗುಂಪುಗಳ ಮಹಿಳೆಯರು ಜೀವನೋಪಾಯ ಚಟುವಟಿಕೆಯಲ್ಲಿ ತೊಡಗಲು ಅನೇಕ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಆರ್ಥಿಕವಾಗಿ ಕಡಿಮೆ ಬಡ್ಡಿ ದರದಲ್ಲಿ ಸಮುದಾಯ ಬಂಡವಾಳ ನಿಧಿ, ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ತರಬೇತಿ ಪಡೆದು, ಜೀವನೋಪಾಯ ಚಟುವಟಿಕೆಯಲ್ಲಿ ತೊಡಗಿದ ಮಹಿಳಾ ಸದಸ್ಯರಿಗೆ, ಗುಂಪುಗಳಿಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ವ್ಯಾಪಾರ ಅಭಿವೃದ್ಧಿಗೆ ಪೂರಕ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಕೃಷಿ ಇಲಾಖೆಯಿಂದ ಪ್ರಧಾನಮಂತ್ರಿ ಕಿರುಆಹಾರ ಉದ್ದಿಮೆಗಳ ಸಂಸ್ಕರಣೆ ನಿಯಮ ಬದ್ಧತೆ (ಪಿಎಂಎಫ್‌ಎಂಇ) ಯೋಜನೆಯಡಿ ಸಂಜೀವಿನಿ ಸ್ವಸಹಾಯ ಗುಂಪುಗಳ ಕಿರು ಮಹಿಳಾ ಉದ್ಯಮದಾರರಿಗೆ ಮಾರುಕಟ್ಟೆ ನೆರವು, ವ್ಯಾಪಾರ ಉತ್ತೇಜಿಸುವ ಕೆಲಸವಾಗುತ್ತಿದೆ ಎಂದರು.

₹60 ಲಕ್ಷ ಬಿಡುಗಡೆ:

ಸಿರಿಧಾನ್ಯ ಉತ್ಪನ್ನಗಳು, ಉಪ್ಪಿನಕಾಯಿ, ಸಿಹಿ ಪದಾರ್ಥಗಳು, ಬೆಲ್ಲದ ಉತ್ಪನ್ನಗಳು, ಶೇಂಗಾ ಚಿಕ್ಕಿ ಇತ್ಯಾದಿ ಆಹಾರ ಪದಾರ್ಥಗಳನ್ನು ತಯಾರಿಸುವ 62 ಮಹಿಳಾ ಸ್ವಸಹಾಯ ಸಂಘದ ಕಿರು ಉದ್ಯಮದಾರಿಗೆ ಒಟ್ಟು ₹60 ಲಕ್ಷವನ್ನು ಕೃಷಿ ಇಲಾಖೆಯಿಂದ ಬ್ರಾಂಡಿಂಗ್‌, ಲೇಬಲಿಂಗ್ ಮಾಡಲೆಂದು ಸಂಘಗಳಿಗೆ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ 62 ಉದ್ದಿಮೆಗಳಿಗೆ ಬ್ರಾಂಡಿಂಗ್‌, ಲೇಬಲಿಂಗ್ ಮಾಡಿಕೊಡುವ ಜೊತೆಗೆ ವ್ಯಾಪಾರ ಅಭಿವೃದ್ಧಿಗೆ 3 ಹಂತದ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ಸಂಸದರು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್, ಸಂಪನ್ಮೂಲ ವ್ಯಕ್ತಿ ಶಿಜಿತ್, ತೋಟಗಾರಿಕೆ ಅಧಿಕಾರಿ ರೇಷ್ಮಾ ಕೌಸರ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್‌, ತಾಪಂ ಇಒ ರಾಮ ಭೋವಿ, ರಾಘವೇಂದ್ರ, ಷಣ್ಮುಖಪ್ಪ, ಅಧಿಕಾರಿಗಳು, ಸಿಬ್ಬಂದಿ, ಮಹಿಳಾ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಇದ್ದರು.

- - -

(ಬಾಕ್ಸ್‌) * ಹೊಸಪೇಟೆ ಸಮಾವೇಶಕ್ಕೆ ಬನ್ನಿ: ಡಾ.ಪ್ರಭಾ ಮಹಿಳೆಯರು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಮೇ 20ಕ್ಕೆ ರಾಜ್ಯ ಸರ್ಕಾರ 2 ವರ್ಷ ಪೂರೈಸಿದ ಹಿನ್ನೆಲೆ ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಆಯೋಜಿಸಲಾಗಿದೆ. ದಾವಣಗೆರೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕರೆ ನೀಡಿದರು. ಏಷ್ಯಾದಲ್ಲೇ 2ನೇ ಅತಿ ದೊಡ್ಡ ಗಾಜಿನ ಮನೆ ಖ್ಯಾತಿಯ ದಾವಣಗೆರೆ ನಗರದ ಗಾಜಿನ ಮನೆಯಲ್ಲಿ ಕಾರ್ಯಾಗಾರ ನಡೆಯುತ್ತಿರುವುದು ಖುಷಿ ತಂದಿದೆ. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಅವಧಿಯಲ್ಲಿ ಗಾಜಿನ ಮನೆ ನಿರ್ಮಾಣವಾಗಿದ್ದು ಹೆಮ್ಮೆಯ ಸಂಗತಿ. ಆಕರ್ಷಕ ಗಾಜಿನ ಮನೆ ವೀಕ್ಷಣೆಗೆ ಎಲ್ಲ ಕಡೆಯಿಂದಲೂ ಜನರು ಬರುತ್ತಿದ್ದಾರೆ. ಇದೊಂದು ಪ್ರವಾಸಿ ಸ್ಥಳ‍ವಾಗಿ ಪರಿವರ್ತನೆಯಾಗಿದ್ದು, ಇಲ್ಲಿ ಕಾರ್ಯಾಗಾರ ಆಯೋಜಿಸಿದ್ದು ಸೂಕ್ತವಾಗಿದೆ ಎಂದು ಶ್ಲಾಘಿಸಿದರು.

- - -

(ಕೋಟ್‌) ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ನಮ್ಮ ದಾವಣಗೆರೆ ಜಿಲ್ಲೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಇಂತಹ ಕಾರ್ಯಾಗಾರ ಮಾಡಿ, ಬ್ರಾಂಡಿಂಗ್‌, ಲೇಬಲಿಂಗ್ ತರಬೇತಿ ನೀಡುತ್ತಿರುವುದು ಉತ್ತಮ ಕಾರ್ಯ. ಜಿಲ್ಲೆಯಲ್ಲಿ 1,20,227 ಸದಸ್ಯರಿದ್ದು, ಮಹಿಳೆಯರು ಸಹ ಉತ್ತಮ ರೀತಿಯಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಸಬೇಕು. ಮುಂದಿನ ಸಲ ನಮ್ಮ ಮಹಿಳೆಯರು ತಯಾರಿಸುವ ಉತ್ಪನ್ನಗಳನ್ನೇ ದೆಹಲಿಯಲ್ಲಿ ನಮ್ಮ ಸಂಸದರಿಗೆ ಉಡುಗೊರೆಯಾಗಿ ನೀಡುತ್ತೇನೆ.

- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ

- - -

-16ಕೆಡಿವಿಜಿ1.ಜೆಪಿಜಿ:

ದಾವಣಗೆರೆ ಗಾಜಿನ ಮನೆಯಲ್ಲಿ ಶುಕ್ರವಾರ ಪಿಎಂಎಫ್‌ಎಂಇ ಫಲಾನುಭವಿಗಳ ಸಮಾಲೋಚನೆ, ಮಾರುಕಟ್ಟೆ ನೆರವು ಹಾಗೂ ವ್ಯಾಪಾರ ಅಭಿವೃದ್ಧಿ ಕಾರ್ಯಾಗಾರವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು. -16ಕೆಡಿವಿಜಿ2.ಜೆಪಿಜಿ:

ದಾವಣಗೆರೆ ಗಾಜಿನ ಮನೆಯಲ್ಲಿ ಶುಕ್ರವಾರ ಪಿಎಂಎಫ್‌ಎಂಇ ಫಲಾನುಭವಿಗಳ ಸಮಾಲೋಚನೆ, ಮಾರುಕಟ್ಟೆ ನೆರವು ಹಾಗೂ ವ್ಯಾಪಾರ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ.