ವಿಶ್ವ ಬಾಯಿ ಆರೋಗ್ಯ ದಿನಾಚರಣೆ

| Published : Mar 23 2025, 01:37 AM IST

ಸಾರಾಂಶ

ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಸಂತೋಷಕರ ಬಾಯಿ ಸಂತೋಷಕರ ಮನಸ್ಸು ಎಂಬ ಘೋಷಣೆಯೊಂದಿಗೆ ನಡೆಯಿತು.

ಮಡಿಕೇರಿ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ ಮತ್ತು ದಂತ ಭಾಗ್ಯ ಯೋಜನೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಭೋಧಕ ಆಸ್ಪತ್ರೆಯ ದಂತ ವಿಭಾಗ ಅವರ ಸಹಯೋಗದೊಂದಿಗೆ ಗುರುವಾರ ವಿಶ್ವ ಬಾಯಿ ಆರೋಗ್ಯ ದಿನಾಚರಣೆಯು “ಸಂತೋಷಕರ ಬಾಯಿ ಸಂತೋಷಕರ ಮನಸ್ಸು” ಎಂಬ ಘೋಷಣೆಯೊಂದಿಗೆ ಬೋಧಕ ಆಸ್ಪತ್ರೆಯಲ್ಲಿ ನಡೆಯಿತು.

ಜಿಲ್ಲಾ ದಂತ ನೋಡಲ್ ಅಧಿಕಾರಿ ಡಾ.ರೇವಣ್ಣ ಜಿ.ಎಂ. ಅವರು ಬಾಯಿ ಆರೋಗ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ ಎಲ್ಲರನ್ನು ಸ್ವಾಗತಿಸಿದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯ ಡೀನ್ ಹಾಗೂ ನಿರ್ದೇಶಕರಾದ ಡಾ.ಲೋಕೇಶ್ ಎ.ಜೆ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಾಯಿ ಹಾಗೂ ದಂತ ಆರೋಗ್ಯದ ಕಾಳಜಿ ವಹಿಸಲು ಸಲಹೆ ಮತ್ತು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಕೆ.ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು ಕೊಡಗಿನಲ್ಲಿ ಬಾಯಿ ಆರೋಗ್ಯ ಅರಿವು, ಬಾಯಿ ತಪಾಸಣೆ ಹಾಗೂ ದಂತ ಚಿಕಿತ್ಸೆಗಳಂತಹ ಜನಸಂಪರ್ಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗದ ಡಾ.ರೂಪೇಶ್ ಗೋಪಾಲ್ ಅವರು ಬಾಯಿ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಸಂಬಂಧ ಅಂತರ ಇಲಾಖಾ ಸಂಬಂಧ ಹಾಗೂ ಮಾನಸಿಕ ಒತ್ತಡದಿಂದಾಗುವ ರೋಗಗಳ ಬಗ್ಗೆ ಉಪನ್ಯಾಸ ನೀಡಿದರು.

ಬಾಯಿ ಆರೋಗ್ಯ ಮತ್ತು ದೇಹದ ಆರೋಗ್ಯದ ಸಂಬಂಧ, ಬಾಯಿಯಲ್ಲಿ ಕಂಡುಬರುವ ರೋಗಲಕ್ಷಣಗಳು ಹಾಗೂ ಸ್ವಚ್ಛತೆಯ ಬಗ್ಗೆ ದಂತ ವಿಭಾಗ ಮುಖ್ಯಸ್ಥರಾದ ಡಾ.ಕೇದಾರನಾಥ ಎನ್.ಎಸ್. ಅವರು ಮಾಹಿತಿ ನೀಡಿದರು.

ಡಾ. ಅಫ್ರೀನ್ ಅವರು ನಿರೂಪಿಸಿದರು. ಕೊ.ವೈ,ವಿ,ಸಂಸ್ಥೆಯ ಸ್ಥಾನೀಯ ವೈದ್ಯಾಧಿಕಾರಿ ಡಾ.ಸತೀಶ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಸನತ್ ಕುಮಾರ್, ದಂತ ಆರೋಗ್ಯಾಧಿಕಾರಿ ಡಾ. ಅಮೂಲ್ಯ, ಡಾ.ಬಿಪಿನ್ ಜೋಷ್, ಡಾ.ಯಶ್ವಿನ್, ಡಾ.ನೂರ್ ಫಾತಿಮಾ ಮತ್ತು ದಂತ ಹೈಜಿನಿಸ್ಟ್ ಚೇತನ್ ಮತ್ತು ಕೊ.ವೈ,ವಿ,ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.