ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಆದಿವಾಸಿಗಳನ್ನು ಕರೆತಂದು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಿರುವಂತಹ ಸಾಹಸಕ್ಕೆ ಮುಂದಾದ ಆರೋಗ್ಯ ಇಲಾಖೆಯ ಕಾರ್ಯವೈಖರಿಯು ಮೆಚ್ಚುವಂತದ್ದು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ನಡೆದ ಜಿಲ್ಲಾ ಮತ್ತು ತಾಲೂಕು ವಿಶ್ವ ಜನಸಂಖ್ಯಾ ದಿನಾಚರಣೆ ಮತ್ತು ಸಂತಾನಹರಣ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಆದಿವಾಸಿಗಳು ಆಸ್ಪತ್ರೆಗೆ ಬರುವುದು ಕಡಿಮೆ, ಶಸ್ತ್ರಚಿಕಿತ್ಸೆ ಎಂದಾಗ ಅವರು ಮೈಲಿ ದೂರ ತೆರಳುತ್ತಿದ್ದರು, ಅಂತಹವರ ಮನವೊಲಿಸಿ ಸಂತಾನಹರಣ ಚಿಕಿತ್ಸೆಗೊಳಪಡಿಸುತ್ತಿರುವುದು ಸಂತಸದ ವಿಚಾರ ಎಂದು ತಿಳಿಸಿದರು.ವರ್ಷವೊಂದರಲ್ಲಿ ಒಂದೂವರೆ ಕೋಟಿ ಮಕ್ಕಳು ಜನಿಸುತ್ತಿದ್ದು, ಜನಸಂಖ್ಯೆ ವೇಗವಾಗಿ ಬೆಳವಣಿಗೆಯಾಗುತ್ತಿದೆ, ಇದನ್ನು ತಡೆಗಟ್ಟಲು ಸಂತಾನಹರಣ ಚಿಕಿತ್ಸೆ ಉಪಯುಕ್ತವಾಗಿದೆ ಎಂದು ತಿಳಿಸಿದರು.
ಜಂಗಲ್ ಲಾಡ್ಜ್ ಸಿಎಸ್.ಆರ್. ನಿಧಿಯಿಂದ ಒಂದು ಆ್ಯಂಬುಲೆನ್ಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.ತಾಲೂಕಿನಲ್ಲಿ 45 ಡೆಂಘೀ ಪ್ರಕರಣ ಕಂಡು ಬಂದಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ, ಯಾವುದೇ ಸಾವು, ನೋವು ಕಂಡು ಬಂದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕುಮಾರಸ್ವಾಮಿ ಮಾತನಾಡಿ ತಾಲೂಕಿನಲ್ಲಿ 60 ಮಂದಿ ಆದಿವಾಸಿಗಳಿಗೆ ಸಂತಾನಹರಣ ಚಿಕಿತ್ಸೆಯ ಶಿಬಿರ ಮಾಡುತ್ತಿರುವುದು ರಾಜ್ಯದಲ್ಲಿ ಇದೇ ಮೊದಲ ಪ್ರಯತ್ನವಾಗಿದೆ ಎಂದು ತಿಳಿಸಿದರು.ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಮತ್ತು ಕುಷ್ಠರೋಗ ನಿರ್ಮೂಲನಾಧಿಕಾರಿ ಬೃಂದಾ ಮಾತನಾಡಿ, ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಿಕ್ಕಾಗಿ ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ವಿವೇಕಾನಂದ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಕುಮಾರ್ ಮಾತನಾಡಿದರು.ಕಳೆದ ಐದು ವರ್ಷದ ಹಿಂದೆ ಒಂದು ಸಾವಿರಕ್ಕೆ 64 ಮಕ್ಕಳು ಹೆರಿಗೆ ಸಮಯದಲ್ಲಿ ಮೃತಪಡುತ್ತಿದ್ದರು, ಆರೋಗ್ಯ ಇಲಾಖೆಯ ಶ್ರಮದಿಂದ ಈಗ ಆ ಪ್ರಮಾಣ 12 ಕ್ಕೆ ಇಳಿದಿದೆ ಎಂದರು.
ತಾಲೂಕಿನ 60 ಆದಿವಾಸಿ ಮಹಿಳೆಯರಿಗೆ ಸಂತಾನ ಹರಣ ಚಿಕಿತ್ಸೆ ಮಾಡಲಾಯಿತು. ಆಶಾ ಕಾರ್ಯಕರ್ತೆಯರಿಗೆ ಆಶಾ ಡೈರಿ ವಿತರಿಸಿದರು. ನಂತರ ಜನಸಂಖ್ಯೆ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.ತಹಸೀಲ್ದಾರ್ ಶ್ರೀನಿವಾಸ್, ತಾಪಂ ಇಒ ಧರಣೇಶ್, ವೈದ್ಯರಾದ ತಾಲೂಕು ಆರೋಗ್ಯಾಧಿಕಾರಿ ಟಿ. ರವಿಕುಮಾರ್, ಕೀರ್ತಿ, ಶರತ್, ಕೀರ್ತಿಕುಮಾರ್, ವಿವೇಕಾನಂದ ಆಸ್ಪತ್ರೆಯ ಮಕ್ಕಳ ತಜ್ಙ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಣೀಂದ್ರಮ್ಮ, ಪದ್ಮಾವತಿ, ಅಧಿಕಾರಿಗಳಾದ ಮಹೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ನಾಗೇಂದ್ರ, ರವಿರಾಜ್, ಪ್ರತಾಪ್, ಹಿರಿಯ ಪ್ರಾಥಮಿಕ ಆರೋಗ್ಯಾಧಿಕಾರಿ ಲಕ್ಷ್ಮಿಭಟ್, ರೇಖಾ, ಪ್ರತಾಪ್, ಜೀವಿಕಾ ಬಸವರಾಜು, ಅಧಿಕಾರಿಗಳಾದ ಮಹೇಶ್, ರಾಮಸ್ವಾಮಿ, ಮುಖಂಡರಾದ ಎಚ್.ಸಿ. ನರಸಿಂಹಮೂರ್ತಿ, ಚಿಕ್ಕವೀರನಾಯಕ, ಅಂತರಸಂತೆ ಅಶೋಕ್, ಸತೀಶ್ ಗೌಡ, ರಾಜೇಗೌಡ, ಶಿವಬಸಪ್ಪ, ನಯಾಜ್, ಸ್ವಾಮಿ, ಸೋಮಣ್ಣ, ಚಲುವರಾಜು ಇದ್ದರು.