ಸಾರಾಂಶ
ಗದಗ: ಭಾರತೀಯ ಸಂಸ್ಕೃತಿ, ಸಂಸ್ಕಾರ ಪರಂಪರೆಗಳು ವಿಶ್ವ ಮಾನ್ಯತೆಯನ್ನು ಪಡೆದಿವೆ. ಈ ಪರಂಪರೆಯನ್ನು ಸಂವರ್ಧನಗೊಳಿಸುವ ಕಾರ್ಯವನ್ನು ನಾವಿಂದು ಮುಂದುವರೆಸಬೇಕಿದೆ ಎಂದು ಸವದತ್ತಿಯ ಮೂಲಿಮಠ, ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಕಳಸಾಪೂರ ರಸ್ತೆಯ ವಿಶ್ವೇಶ್ವರಯ್ಯ ನಗರದ ವಿಘ್ನೇಶ್ವರ ಸೇವಾ ಸಮಿತಿಯು ಆಂಜನೇಯಸ್ವಾಮಿ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಭಾರತೀಯ ಪರಂಪರೆಯಲ್ಲಿ ದೇವರ ಬಗ್ಗೆ ಪೌರಾಣಿಕ ಕತೆಗಳಿವೆ. ಈ ಕತೆಗಳ ಮೂಲಕ ಆದರ್ಶ ಮೌಲ್ಯಗಳನ್ನು ಬೆಳೆಸುವ ಕಾರ್ಯವನ್ನು ಹಿರಿಯರು ಮಾಡಿಕೊಂಡು ಬಂದಿದ್ದಾರೆ. ಧರ್ಮ, ದೇವಸ್ಥಾನ, ದೇವರು ಎಂದು ಭಕ್ತರಲ್ಲಿ ಭಕ್ತಿಯನ್ನು ಸ್ಪುರಿಸಿ ಪರಿವರ್ತನೆ, ವಿಕಸನದ ಮಾರ್ಗಗಳಲ್ಲಿ ಕಂಡುಕೊಳ್ಳಲಾಗಿದೆ ಎಂದರು.ಶ್ರೀರಾಮನಿಗೆ ಹನುಮಂತ ದೈವಿ ಗುಣಗಳನ್ನು ಅಳವಡಿಸಿಕೊಂಡು ಭಕ್ತನಾಗಿದ್ದರೆ, ಹನುಮಂತನಿಗೆ ನಾವುಗಳ ಭಕ್ತರಾರುವ ಮೂಲಕ ಹನುಮಂತನನ್ನು ದೇವರನ್ನಾಗಿಸಿದ್ದೇವೆ. ನಿರ್ಮಲವಾದ ಅಚಲ ಭಕ್ತಿಯನ್ನು ಶ್ರೀರಾಮನಲ್ಲಿ ಹೊಂದಿದ್ದ ಹನುಮಂತ ಬಲವಂತ, ಗುಣವಂತ, ಬುದ್ಧಿವಂತ ಎನ್ನಿಸಿದ್ದಾನೆ. ಶ್ರದ್ಧಾಭಕ್ತಿಯೊಂದಿಗೆ ಆರಾಧಿಸುವ ಭಕ್ತರಿಗೆ ಬೇಡಿದ್ದನ್ನು ದಯಪಾಲಿಸುವ ಕಲ್ಪವೃಕ್ಷ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ಆಂಜನೇಯಸ್ವಾಮಿ ಜಯಂತ್ಯುತ್ಸವದ ಅಂಗವಾಗಿ ಧರ್ಮಸಭೆ ಏರ್ಪಡಿಸಿ ಧರ್ಮ ಜಾಗೃತಿ, ವೈಚಾರಿಕತೆಯನ್ನು ಮೂಡಿಸುವಂತಹ ಕಾರ್ಯಕ್ರಮ ಏರ್ಪಡಿಸಿದ್ದು ಸ್ತುತ್ಯ. ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವ ಮೂಲಕ ಅವರಲ್ಲಿ ಧಾರ್ಮಿಕ, ವೈಚಾರಿಕ, ಸಂಸ್ಕಾರ, ಸಂಸ್ಕೃತಿಯನ್ನು ವೃದ್ಧಿಸುವ ಕಾರ್ಯ ಮಾಡುತ್ತಿರುವದು ಅಭಿನಂದನೀಯ ಎಂದರು.ನಿವೃತ್ತ ಶಿಕ್ಷಕ ಬಿ.ಎಸ್. ಬೆಂತೂರ ಅವರು, ಪೌರಾಣಿಕ ಕತೆಗಳಲ್ಲಿ ಆಂಜನೇಯಸ್ವಾಮಿಯ ಮಹಿಮೆ, ಪರಾಕ್ರಮ, ಸ್ವಾಮಿನಿಷ್ಠೆಯನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಘ್ನೇಶ್ವರ ಸೇವಾ ಸಮಿತಿ ಅಧ್ಯಕ್ಷ ರವೀಂದ್ರರಡ್ಡಿ ಇನಾಮತಿ ಮಾತನಾಡಿ, ಆಂಜನೇಯಸ್ವಾಮಿ ಜಯಂತ್ಯುತ್ಸವವನ್ನು ಪ್ರತಿವರ್ಷ ವೈವಿಧ್ಯಮಯವಾಗಿ ಆಚರಿಸಿಕೊಂಡು ಬಂದಿದ್ದು ಭಕ್ತರಲ್ಲಿ ಭಕ್ತಿಯನ್ನು, ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಇದಕ್ಕೆ ಈ ನಗರದ ಗುರು-ಹಿರಿಯರು ಸಹಕಾರ ನೀಡುತ್ತಿದ್ದಾರೆ ಎಂದರು.ಪ್ರಸಾದ ಸೇವೆ ವಹಿಸಿದ್ದ ಬೆಂಗಳೂರಿನ ಕೆಎಚ್‌ಬಿ ಕಂದಾಯ ಅಧಿಕಾರಿ ಉಮೇಶ ಗಡ್ಡಿ, ಅಲಂಕಾರ ಸೇವೆ ವಹಿಸಿಕೊಂಡಿದ್ದ ರಮೇಶ ಹೆಗಡಿಕಟ್ಟಿ ಹಾಗೂ ಸೇವಾಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿವಸಿಂಪಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸೋಮು ಲಮಾಣಿ ಸ್ವಾಗತಿಸಿ, ಪರಿಚಯಿಸಿದರು. ನಿವೃತ್ತ ಪ್ರಾಚಾರ್ಯ ಪ್ರೊ.ಸಿ. ಲಿಂಗಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಚ್. ಹುಲ್ಲೂರ ನಿರೂಪಿಸಿದರು. ಎಸ್.ಕೆ. ಖಂಡಪ್ಪಗೌಡ್ರ ವಂದಿಸಿದರು.ನಂತರ ಸ್ಥಾವರಮಠ ಸ್ಕಿಲ್ಸ್ ಅಕಾಡೆಮಿ ಹಾಗೂ ಚಂದ್ರಕಲಾ ನೃತ್ಯ ವಿಹಾರ ತಂಡದಿಂದ ಜರುಗಿದ ನೃತ್ಯ ಪ್ರದರ್ಶನ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.
ಬೆಳಗ್ಗೆ ಆಂಜನೇಯಸ್ವಾಮಿಗೆ ಮಹಾರುದ್ರಾಭಿಷೇಕ, ತೊಟ್ಟಿಲೋತ್ಸವ, ಜೋಗುಳ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ ಮಹಾಪ್ರಸಾದ ಸಂಜೆ ಪಲ್ಲಕ್ಕಿ ಉತ್ಸವ ಜರುಗಿತು.