ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಇಲ್ಲೊಂದು ಮಗು ಅಂಬೆಗಾಲಿಡುವ ವಯಸ್ಸಿನಲ್ಲಿ ತನಗೇ ಗೊತ್ತಿಲ್ಲದಂತೆ ನೊಬೆಲ್ ವರ್ಲ್ಡ್ ರೆಕಾರ್ಡ್ ಪುಟ ಸೇರಿ ಸಾಧನೆ ಮಾಡಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 422 ವಸ್ತುಗಳನ್ನು ಗುರುತಿಸುವ ಮೂಲಕ ಅವಿಸ್ಮರಣೀಯ ಸಾಧನೆ ಮಾಡಿ ತೋರಿಸಿದ್ದಾಳೆ. ಈ ಮೂಲಕ 9 ತಿಂಗಳ (2024 ಫೆಬ್ರುವರಿ 2ರಂದು ಜನನ) ಹೆಣ್ಣು ಮಗುವೊಂದು ನೊಬೆಲ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ದಾಖಲು ಮಾಡಿದ್ದಾಳೆ.ನಗರದ ನಿವಾಸಿ ದೀಪಕ ಕಟ್ಟಿ ಹಾಗೂ ಅನೂಶಾ ಕಟ್ಟಿ ದಂಪತಿಯ 9 ತಿಂಗಳ ಮಗಳು ಈ ಸಾಧನೆ ಮಾಡಿದೆ. ಕೇವಲ 9 ತಿಂಗಳ ಗಮನಾರ್ಹ ವಯಸ್ಸಿನಲ್ಲಿ, ಐರಾ ದೀಪಕ ಕಟ್ಟಿ ಫ್ಲ್ಯಾಶ್ ಕಾರ್ಡ್‌ಗಳನ್ನು ಬಳಸಿಕೊಂಡು ವಿವಿಧ ವರ್ಗಗಳಲ್ಲಿ ಒಟ್ಟು 422 ವಸ್ತುಗಳನ್ನು ಗುರುತಿಸುವ ಅಸಾಧಾರಣ ಸಾಮರ್ಥ್ಯ ಹೊಂದಿದ್ದಾಳೆ.
ಐರಾಳ ಅದ್ಭುತ ಸಾಧನೆಯ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ದಾಖಲೆ ಬರೆದಿದೆ. ಅವಳ ನೆನಪಿನ ಶಕ್ತಿ, ಅಸಾಧಾರಣ ಕಲಿಕಾ ಕೌಶಲ್ಯ ಮತ್ತು ಸುಧಾರಿತ ಅರಿವಿನ ಸಾಮರ್ಥ್ಯಗಳನ್ನು ತೋರಿಸುತ್ತದೆ. ಬೇರೆ ಮಕ್ಕಳೆಲ್ಲ ಅಂಬೆಗಾಲಿಡುವ ಈ ವಯಸ್ಸಿನಲ್ಲಿ ಐರಾ ಬೆಟ್ಟದಂತಹ ಸಾಧನೆಯನ್ನೇ ಮಾಡಿದ್ದಾಳೆ.ಏನೇನು ಗುರುತಿಸುತ್ತಾಳೆ ಐರಾ?:
ಹಣ್ಣುಗಳು: 24, ಸಾಕು ಪ್ರಾಣಿಗಳು: 20, ಸಾರಿಗೆ ವಿಧಾನಗಳು: 24, ದೇಹದ ಭಾಗಗಳು: 24, ತರಕಾರಿಗಳು: 24, ಪಕ್ಷಿಗಳು: 24, ಆಕಾರಗಳು: 13, ಬಣ್ಣಗಳು: 11, ವರ್ಣಮಾಲೆಗಳು: 26, ಸಂಖ್ಯೆಗಳು: 24, ಏಷ್ಯನ್ ದೇಶದ ಧ್ವಜಗಳು: 48 (24+24), ಸ್ವಾತಂತ್ರ್ಯ ಹೋರಾಟಗಾರರು: 28, ಹೂವುಗಳು: 24, ಕಾರ್ಯಗಳು: 24, ಸಮುದ್ರ ಜೀವಿಗಳು: 12, ಸಮುದಾಯ ಕಾರ್ಯಕರ್ತರು: 12, ವೃತ್ತಿಪರರು: 12, ಭಾರತದ ಪ್ರಸಿದ್ಧ ಸ್ಥಳಗಳು: 12, ಮನೆಯಲ್ಲಿರುವ ವಸ್ತುಗಳು: 12, ಕಾಡು ಪ್ರಾಣಿಗಳು: 24 ಇವುಗಳನ್ನು ಐರಾ ಗುರುತಿಸುತ್ತಾಳೆ.ಕೇವಲ 9ತಿಂಗಳ ಮಗು ಇಷ್ಟೆಲ್ಲ ಗುರುತಿಸುವುದನ್ನು ಕಂಡ ಐರಾ ತಂದೆ-ತಾಯಿ ಆಕೆಯ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿ ನೊಬೆಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಗೆ ಕಳುಹಿಸಿದ್ದಾರೆ. ಇದೆಲ್ಲವನ್ನೂ ಗಮನಿಸಿದ ನೊಬೆಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆ-2024 ಡಿಸೆಂಬರ್ 26ರಂದು ಈಕೆಗೆ ಯಂಗೆಸ್ಟ್ ಚೈಲ್ಡ್ ಟು ಐಡೆಂಟಿಫೈ ದಿ ಮೋಸ್ಟ್ ನಂಬರ್ ಆಫ್ ಐಟಮ್ಸ್ ಆಟ್ ದಿ ಏಜ್ ಆಫ್ 9 ಮಂಥ್ಸ್ ಸರ್ಟಿಫಿಕೇಟ್ ನೀಡಿದೆ.
ತಾಯಿಯಿಂದ ತರಬೇತಿಎಂಬಿಎ ಓದಿರುವ ಅನೂಶಾ ಬ್ರೇನ್ ಟ್ರೈನರ್ ಆಗಿದ್ದು, ತಮ್ಮ ಮಗುವಿನಲ್ಲಿ ಗ್ರಹಿಕಾ ಶಕ್ತಿ ಇರುವುದನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ಮೊದಲು ತಾವು ತರಬೇತಿ ಪಡೆದಿದ್ದಾರೆ. ಬಳಿಕ ಮಗುವಿಗೆ ತರಬೇತಿ ನೀಡಿ 9 ತಿಂಗಳು ಇರುವಾಗಲೇ ಕಳೆದ ನವ್ಹೆಂಬರ್ ನಲ್ಲಿ ದಾಖಲೆಗಾಗಿ ಅಪ್ಲೈ ಮಾಡಿದ್ದಾರೆ. ಲಖನೌ ನಲ್ಲಿರುವ ನೊಬೆಲ್ ವರ್ಲ್ಡ್ ರೆಕಾರ್ಡ್ ಕಚೇರಿಗೆ ದಾಖಲೆಗಳನ್ನು ಕಳಿಸಿದ ಬಳಿಕ ಸಂಸ್ಥೆಯಿಂದ ಅಧಿಕಾರಿಯೊಬ್ಬರು ಬಂದು ಪರಿಶೀಲನೆ ನಡೆಸಿದರು. ಬಳಿಕ ಸರ್ಟಿಫಿಕೇಟ್ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಮೆಚ್ಚುಗೆಮಗು ಐರಾ ನೊಬೆಲ್ ವರ್ಲ್ಡ್ ರೆಕಾರ್ಡ್ ಮಾಡಿದ ಕುರಿತು ದಂಪತಿ ಸಿಎಂ ಸಿದ್ಧರಾಮಯ್ಯ ಅವರಿಗೆ ಮೇಲ್ ಮೂಲಕ ಮಾಹಿತಿ ನೀಡಿದ್ದರು. ಅದನ್ನು ಗಮನಿಸಿ ಸಿಎಂ ಕಚೇರಿಯಿಂದ ಕರೆ ಮಾಡಿ, ಅಧಿವೇಶನದ ಸಮಯದಲ್ಲಿ ಬೆಳಗಾವಿಗೆ ಕರೆದು, ಸ್ವತಃ ಸಿಎಂ ಅವರೇ ಭೇಟಿಯಾಗಿದ್ದಾರೆ. ಮಗುವಿನ ಪ್ರತಿಭೆ ಕಂಡು ಆಕೆಗೆ ಸನ್ಮಾನಿಸಿ ಶುಭ ಹಾರೈಸಿದ್ದಾರೆ.
---------ಕೋಟ್:
ಉತ್ತಮ ಪ್ರತಿಭೆಯುಳ್ಳ ನಮ್ಮ ಮಗುವಿಗೆ ಏನಾದರು ತರಬೇತಿ ಕೊಡಬೇಕು ಎಂದು 3 ತಿಂಗಳ ಮಗು ಇದ್ದಾಗಲೇ ಅದಕ್ಕೆ ಗ್ರಹಿಕೆ ಶಕ್ತಿ ಹೆಚ್ಚಾಗುವಂತಹ ತರಬೇತಿ ನೀಡಿದೆ. ನಾನು ತರಬೇತಿ ನೀಡಿದಂತೆಲ್ಲ ಐರಾ ವಸ್ತುಗಳನ್ನು ಗ್ರಹಿಕೆ ಮಾಡಲು ಶುರು ಮಾಡಿದಳು. ಆರಂಭದಲ್ಲಿ ಪ್ರತಿ ವಾರಕ್ಕೆ 10 ವಸ್ತುಗಳ ಗುರುತಿಸುವಿಕೆಯಿಂದ ಶುರುವಾಗಿ ವಾರಕ್ಕೆ 30 ವಸ್ತುಗಳ ಗ್ರಹಿಕಾ ಶಕ್ತಿ ಆಕೆಗೆ ಬಂದಿದೆ. ಹೀಗಾಗಿ ಆಕೆಯ ಸಾಧನೆ ದಾಖಲೆ ಬರೆದಿದೆ.ಅನೂಶಾ ಕಟ್ಟಿ, ಮಗುವಿನ ತಾಯಿ