ಈಜುಕೊಳದಲ್ಲಿ ಪಲ್ಟಿ ಹೊಡೆದು ವಿಶ್ವ ದಾಖಲೆ:

| Published : Oct 18 2024, 12:02 AM IST

ಸಾರಾಂಶ

15 ವರ್ಷದೊಳಗಿನ ವಯೋಮಾನದಲ್ಲಿ ನೀರೊಳಗಿನ ಪಲ್ಟಿ ಸಾಹಸ ಮಾಡಿರುವ ಪ್ರಪ್ರಥಮ ದಾಖಲೆಯಾಗಿದೆ. ಮುಂದೆ ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸುವ ಕನಸನ್ನು ಹ್ಯಾಡ್ರಿಯನ್ ಇರಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಈಜುಕೊಳದ ಒಳಗೆ ಉಸಿರು ಬಿಗಿ ಹಿಡಿದು 37 ಸೆಕೆಂಡ್ಸ್‌ಗಳಲ್ಲಿ 26 ಸೋಮರ್‌ಸಾಲ್ಟ್ಸ್‌(ಪಲ್ಟಿ) ಮೂಲಕ ನೊಬೆಲ್‌ ವಿಶ್ವ ದಾಖಲೆ ನಿರ್ಮಿಸಿರುವ ಮಂಗಳೂರಿನ 13ರ ಹರೆಯದ ಬಾಲಕ ಹ್ಯಾಡ್ರಿಯನ್‌ ವೇಗಸ್‌ನನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಸನ್ಮಾನಿಸಿದ್ದಾರೆ.ಕಾರ್ಮೆಲ್‌ ಸಿಬಿಎಸ್‌ಸಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಹ್ಯಾಡ್ರಿಯನ್‌ ವೇಗಸ್‌ ಮಂಗಳೂರಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಈ ಸಾಧನೆಯನ್ನು ಮಾಡಿ ಗಮನ ಸೆಳೆದಿದ್ದಾನೆ. 15 ವರ್ಷದೊಳಗಿನ ವಯೋಮಾನದಲ್ಲಿ ನೀರೊಳಗಿನ ಪಲ್ಟಿ ಸಾಹಸ ಮಾಡಿರುವ ಪ್ರಪ್ರಥಮ ದಾಖಲೆಯಾಗಿದೆ. ಮುಂದೆ ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸುವ ಕನಸನ್ನು ಹ್ಯಾಡ್ರಿಯನ್ ಇರಿಸಿಕೊಂಡಿದ್ದಾರೆ.ಸಾಮಾನ್ಯವಾಗಿ ಈಜುಕೊಳದ ಅಂಚು ಹಿಡಿದುಕೊಂಡು ಪಲ್ಟಿ ಹಾಕಲಾಗುತ್ತದೆ. ಆದರೆ ಈಜುಕೊಳದ ಮಧ್ಯ ಭಾಗದ ನೀರಿನಲ್ಲಿ ಏಕಕಾಲಕ್ಕೆ 26 ಪಲ್ಟಿ ಹೊಡೆಯುವುದು ಹ್ಯಾಡ್ರಿಯನ್‌ ದಾಖಲೆಯಾಗಿದ್ದು, ಈ ಅಪರೂಪದ ಸಾಧನೆ ಬಗ್ಗೆ ಮಾಹಿತಿ ಪಡೆದುಕೊಂಡ ಸಂಸದ ಕ್ಯಾ. ಚೌಟ ಅವರು ದಕ್ಷಿಣ ಕನ್ನಡದ ಬಾಲಕನ ಸಾಧನೆಗೆ ಕಾರಣರಾಗಿರುವ ಸ್ವಿಮ್ಮಿಂಗ್‌ ಕೋಚ್‌ ಅರೋಮಲ್‌ ಎ.ಎಸ್‌. ಹಾಗೂ ಪೋಷಕರ ಪರಿಶ್ರಮ ಹಾಗೂ ಪ್ರೋತ್ಸಾಹವನ್ನು ಶ್ಲಾಘಿಸಿದ್ದಾರೆ.