ಆಳ್ವಾಸ್ ಸೆಂಟ್ರಲ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಪೈ ಕೇವಲ15 ದಿನಗಳಲ್ಲಿ ಕರ್ನಾಟಕ 54 ವಿದ್ಯಾಸಂಸ್ಥೆಗಳ ಸುಮಾರು 4,500 ವಿದ್ಯಾರ್ಥಿಗಳಿಗೆ ಒತ್ತಡ ನಿಯಂತ್ರಣದ ಕುರಿತು ತರಬೇತಿ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವಿಶ್ವದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ವತಿಯಿಂದ ಪ್ರಮಾಣ ಪತ್ರ, ಪದಕ ಪ್ರದಾನ ಹಾಗೂ ಆಳ್ವಾಸ್ ಅಭಿನಂದನಾ ಕಾರ್ಯಕ್ರಮ ಗುರುವಾರ ಸಂಜೆ ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭವಾರ್ತೆ ಮೂಡುಬಿದಿರೆ

ಆಳ್ವಾಸ್ ಸೆಂಟ್ರಲ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಪೈ ಕೇವಲ15 ದಿನಗಳಲ್ಲಿ ಕರ್ನಾಟಕ 54 ವಿದ್ಯಾಸಂಸ್ಥೆಗಳ ಸುಮಾರು 4,500 ವಿದ್ಯಾರ್ಥಿಗಳಿಗೆ ಒತ್ತಡ ನಿಯಂತ್ರಣದ ಕುರಿತು ತರಬೇತಿ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವಿಶ್ವದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ವತಿಯಿಂದ ಪ್ರಮಾಣ ಪತ್ರ, ಪದಕ ಪ್ರದಾನ ಹಾಗೂ ಆಳ್ವಾಸ್ ಅಭಿನಂದನಾ ಕಾರ್ಯಕ್ರಮ ಗುರುವಾರ ಸಂಜೆ ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಿತು.

ಸಾಹಸಸಿಂಹ ಡಾ ವಿಷ್ಣುವರ್ಧನ್ ಪುತ್ರಿ ಕೀರ್ತಿ ವಿಷ್ಣುವರ್ಧನ್ ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ ತನ್ನ ಆಸಕ್ತಿ ಮತ್ತು ಪರಿಶ್ರಮಕ್ಕೆ ಹೆತ್ತವರು ಮತ್ತು ಕುಟುಂಬದ ಅಪೂರ್ವ ಬೆಂಬಲ ಇವೆಲ್ಲದರ ಕಾರಣದಿಂದ ಹದಿನೈದರ ಹರೆಯದಲ್ಲೇ ವಿಷ್ಣು ಪ್ರಿಯಾ ಪೈ ಇದೀಗ ವಿಶ್ವ ದಾಖಲೆ ತನ್ನದಾಗಿಸಿಕೊಂಡಿದ್ಧಾಳೆ. ಇದು ದೇವರ ಅನುಗ್ರಹವೂ ಹೌದು. ಈ ಗುಣಮಟ್ಟವನ್ನು ಕಾಯ್ದುಕೊಂಡು ಮುಂದೆ ದೊಡ್ಡ ಸಾಧಕಿಯಾಗಿ ಬೆಳೆಯಲಿ ಬೆಳಗಲಿ ಎಂದು ಹಾರೈಸಿದರು.

ಪೈ ಪರಿವಾರದ ಜತೆ ವಿಷ್ಣು ಕುಟುಂಬದ ದೀಘ ಕಾಲದ ಬಾಂಧವ್ಯ ಸ್ಮರಿಸಿಕೊಂಡ ಅವರು ಬಾಲಕಿಗೆ ವಿಷ್ಣು ಪ್ರಿಯಾ ಎಂದು ನಾಮಕರಣ ಮಾಡಿದ್ದ ಭಾರತೀ ವಿಷ್ಣುವರ್ಧನ್ ಅಂದು ವಿಷ್ಣು ಪ್ರಿಯ ವಿಶ್ವ ಪ್ರಿಯಳಾಗಲಿ ಎಂದು ಹಾರೈಸಿದನ್ನು ಸ್ಮರಿಸಿಕೊಂಡರು.

ದಾಖಲೆಯ ಗೌರವ: ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಏಷ್ಯಾ ವಿಭಾಗದ ಮುಖ್ಯಸ್ಥ ಡಾ. ಮನೀಷ್ ಬಿಷ್ಣೋಯಿ ವಿಷ್ಣು ಪ್ರಿಯಾ ಅವರಿಗೆ ವಿಶ್ವ ದಾಖಲೆಯ ಪ್ರಮಾಣ ಪತ್ರ ಪದಕ ವನ್ನು ಹಸ್ತಾಂತರಿಸಿ ಮಾತನಾಡಿ, ಭಾರತೀಯರಲ್ಲಿ ಅದರಲ್ಲೂ ಕರಾವಳಿಯ ದಕ್ಷಿಣ ಕನ್ನಡ ದಲ್ಲಿ ಶ್ರೇಷ್ಠ ಪ್ರತಿಭೆಗಳಿವೆ. ವಿಷ್ಣು ಪ್ರಿಯಾಳಿಗೆ ಉಜ್ವಲ ಭವಿಷ್ಯ ಮತ್ತು ಅವಕಾಶಗಳು ಒದಗಿ ಬರಲಿ ಎಂದು ಹಾರೈಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಡಾ. ಎಂ. ಮೋಹನ ಆಳ್ವ ಅವರು ವಿಷ್ಣು ಪ್ರಿಯಾಳನ್ನು ಗೌರವಿಸಿ ಅಭಿನಂದಿಸಿದರು. ಮಲ್ಲಿಗೆಯ ಜತೆ ದಾರಕ್ಕೂ ಗೌರವ ಎಂಬತೆ ವಿಷ್ಣು ಪ್ರಿಯಾಳ ಸಾಧನೆ ಆಳ್ವಾಸ್ ಸಹಿತ ಎಲ್ಲರಿಗೂ ಗೌರವ ತಂದಿದೆ. ಮುಂದಿನ ದಾರಿ ಮತ್ತು ಗುರಿಯಲ್ಲಿ ಸ್ಪಷ್ಟತೆಯಿರಲಿ. ವಿಷ್ಣುಪ್ರಿಯಾ ಬಯಸಿದಲ್ಲಿ ಪಿಯುಸಿ ಶಿಕ್ಷಣಕ್ಕೆ ಆಳ್ವಾಸ್ ಆಕೆಯನ್ನು ದತ್ತು ಸ್ವೀಕಾರದ ಮೂಲಕ ಪ್ರೋತ್ಸಾಹಿಸಲಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಷ್ಣುಪ್ರಿಯಾ ಪೈ, ಈ ಗೌರವವನ್ನು ತನ್ನ ಅಭಿಮಾನದ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಸಮರ್ಪಿಸುವುದಾಗಿ ತಿಳಿಸಿದರು. ತನ್ನ ಸಾಧನೆಗೆ ದೇವರ ದಯೆಯ ಜತೆಗೆ ಹೆತ್ತವರು, ಕುಟುಂಬ , ಶಾಲೆ, ಶಿಕ್ಷಕರು, ಸಹಕರಿಸಿದ ನಾಡಿನ ಶಾಲೆಗಳು, ವಿದ್ಯಾರ್ಥಿಗಳು, ಸಹಕಾರಿಗಳು ಎಲ್ಲರ ಕೊಡುಗೆ ಮರೆಯಲಾಗದ್ದು. ಮುಂದೆಯೂ ಎಲ್ಲರ ಪ್ರೋತ್ಸಾಹ ಇರಲಿ ಎಂದರು. ಡಾ ಮನೀಷ್ ಬಿಷ್ಣೊಯಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ತಮ್ಮ ಕ್ಷೇತ್ರದ ವಿದ್ಯಾರ್ಥಿನಿ ವಿಷ್ಣುಪ್ರಿಯಾಳ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಬಿಜೆಪಿ ನಾಯಕಿ ಸುಲೋಚನಾ ಜಿ. ಕೆ. ಭಟ್, ಉಡುಪಿ ಶಾರದಾ ರೆಸಿಡೆನ್ಶಿಯಲ್ ಕಾಲೇಜಿನ ಪ್ರಾಚಾರ್ಯ ವಿನ್ಸೆಂಟ್ ಡಿಸೋಜಾ, ಆಳ್ವಾಸ್ ಸೆಂಟ್ರಲ್ ಶಾಲಾ ಪ್ರಾಂಶುಪಾಲ ಮೊಹಮ್ಮದ್ ಶಫೀಶೇಖ್, ಶ್ರೀ ಸುಧೀಂದ್ರ ವಿಶ್ವತೀರ್ಥರು, ವಿಷ್ಣುಪ್ರಿಯಾ ಪೈ ಹೆತ್ತವರಾದ ವರದರಾಜ ಪೈ, ಸಂಧ್ಯಾ ವಿ.ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.