ಮಕ್ಕಳಿಗೆ ಬಾಲ್ಯದಲ್ಲೇ ನೀರಿನ ಮಹತ್ವ ತಿಳಿಸಿ

| Published : Mar 31 2024, 02:00 AM IST

ಮಕ್ಕಳಿಗೆ ಬಾಲ್ಯದಲ್ಲೇ ನೀರಿನ ಮಹತ್ವ ತಿಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿತಮಿತವಾಗಿ ನೀರು ಬಳಕೆಮಾಡಬೇಕು. ನಮಗೆ ಲಭ್ಯವಿರುವ ನೀರು ಸರಿಯಾಗಿ ಸದ್ಭಳಕೆಯಾಗಬೇಕು. ನೀರು ಇದೆ ಎಂದು ಎಗ್ಗಿಲ್ಲದೆ ಪೋಲಾಗದಂತೆ ಎಚ್ಚರ ವಹಿಸಬೇಕು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ನೀರು ಅತ್ಯಮೂಲ್ಯ ಸಂಪತ್ತು. ನೀರಿನ ಸಂರಕ್ಷಣೆ ಎಲ್ಲರ ಮೊದಲ ಅಧ್ಯತೆ ಆಗಬೇಕು. ಮಕ್ಕಳಿಗೆ ಬಾಲ್ಯದಿಂದಲೇ ನೀರಿನ ಮಹತ್ವದ ಕುರಿತು ತಿಳಿಹೇಳುವುದರಿಂದ ಅವರು ಮುಂದಿನ ದಿನಮಾನಗಳಲ್ಲಿ ನೀರಿನ ಬಗ್ಗೆ ಹೆಚ್ಚೆಚ್ಚು ಕಾಳಜಿ ವಹಿಸುತ್ತಾರೆ ಎಂದು ಬನಹಟ್ಟಿ ದಿವಾಣಿ ನ್ಯಾಯಾಧೀಶೆ ಸುಷ್ಮಾ ಟಿ. ಸಿ ಹೇಳಿದರು.

ಶನಿವಾರ ರಾಮಪುರದ ರಬಕವಿ-ಬನಹಟ್ಟಿ ನಗರಸಭೆ ಕಾರ್ಯಾಲಯದಲ್ಲಿ ವಿಶ್ವ ಜಲದಿನದ ನಿಮಿತ್ತ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೀರು ಜೀವಸಂಕುಲದ ಪ್ರತಿ ಜೀವಿಗೂ ಅತ್ಯಗತ್ಯವಾಗಿ ಬೇಕಿದೆ. ವಿಶ್ವದ ಶೇ.೧ರಷ್ಟು ನೀರು ಮಾತ್ರ ಕುಡಿಯಲು ಯೋಗ್ಯವಾಗಿದೆ. ಕಾರಣ ನೀರು ವಿಶ್ವದ ಅಮೂಲ್ಯ ಸಂಪತ್ತು. ನೀರಿನ ಮಹತ್ವದ ಬಗ್ಗೆ ತಾವು ತಿಳಿಯುವುದರ ಜೊತೆಗೆ ತಮ್ಮ ಸುತ್ತಮುತ್ತಲಿನವರಿಗೂ ತಿಳಿಹೇಳಬೇಕು ಎಂದು ತಿಳಿಸಿದರು.

ಹಿತಮಿತವಾಗಿ ನೀರು ಬಳಕೆಮಾಡಬೇಕು. ನಮಗೆ ಲಭ್ಯವಿರುವ ನೀರು ಸರಿಯಾಗಿ ಸದ್ಭಳಕೆಯಾಗಬೇಕು. ನೀರು ಇದೆ ಎಂದು ಎಗ್ಗಿಲ್ಲದೆ ಪೋಲಾಗದಂತೆ ಎಚ್ಚರ ವಹಿಸಬೇಕು. ಮನೆಗಳಲ್ಲಿ ಸೋರುವ ಟ್ಯಾಪ್‌ಗಳು, ಅನಗತ್ಯವಾಗಿ ಹೆಚ್ಚು ನೀರು ಬಯಸುವ ಬಟ್ಟೆ ತೊಳೆಯುವ ಯಂತ್ರಗಳು ಮತ್ತು ಬಳಕೆಯಾದ ನೀರು ಉದ್ಯಾನಗಳಿಗೆ ಪೂರೈಕೆಯಾಗುವಂತೆ ವ್ಯವಸ್ಥೆಯಾಗಬೇಕು. ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಎದುರಾಗುತ್ತದೆ. ಕೆಲವು ಕಡೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಜಲಮೂಲಗಳ ಸಂರಕ್ಷಣೆಗೆ ಮುಂದಾಗಬೇಕು. ನೀರಿನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಎಲ್ಲರಿಂದ ನಡೆಯಬೇಕು ಎಂದು ಹೇಳಿದರು.

ಪ್ರತಿಯೊಬ್ಬರು ಆರೋಗ್ಯವಂತರಾಗಿರಲು ನೀರು ಅವಶ್ಯ. ಹೆಚ್ಚು ನೀರು ಸೇವನೆಯಿಂದ ಆರೋಗ್ಯವಂತರಾಗಿ ಜೀವನ ಸಾಗಿಸಲು ಸಾಧ್ಯ. ಒಬ್ಬ ವ್ಯಕ್ತಿ ನಿತ್ಯ 5 ರಿಂದ 6 ಲೀ. ನೀರು ಕುಡಿಯಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಆದ್ದರಿಂದ ಎಲ್ಲರೂ ಅಧಿಕ ನೀರು ಸೇವನೆ ಮಾಡುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಹಿರಿಯ ವಕೀಲ ಕೆ. ಡಿ. ತುಬಚಿಯವರು ಜಲದ ಮಹತ್ವ, ಜಲ ಸಂರಕ್ಷಣೆ ಕುರಿತು ಮಾತನಾಡಿ, ಸ್ಥಳೀಯ ಆಡಳಿತ ಸಂಸ್ಥೆಗಳು ನಾಗರಿಕರು ಬಳಸಿದ ಕೊಳೆಯುಕ್ತ ನೀರನ್ನು ನೇರವಾಗಿ ನದಿಗೆ ಬಿಡದೇ ಮಲೀನ ನೀರನ್ನು ಸಂಸ್ಕರಿಸಿ ಮರು ಬಳಕೆಗೆ ಯೋಗ್ಯವಾಗುವಂತೆ ವ್ಯವಸ್ಥೆಗೊಳಿಸಿದ್ದು, ಅದನ್ನು ಕಟ್ಟುನಿಟ್ಟಾಗಿ ಆಚರಣೆಗೆ ತರಬೇಕು. ನಮ್ಮ ಪ್ರಾಚೀನರಿಗೆ ನೀರಿನ ಮಹತ್ವ ಗೊತ್ತಿದ್ದರಿಂದಲೇ ಪಂಚ ಮಹಾಭೂತಗಳಲ್ಲಿ ನೀರಿಗೆ ಸ್ಥಾನ ಕಲ್ಪಿಸಿದ್ದರು. ಅಲ್ಲದೇ ಎಲ್ಲ ನದಿಗಳಿಗೆ ದೇವತೆಗಳ ಹೆಸರನ್ನಿಟ್ಟು ನೀರಿಗೆ ಪೂಜ್ಯನೀಯ ಸ್ಥಾನ ನೀಡಿದ್ದರು. ಅದನ್ನು ಈಗಿನ ಪರಿಸ್ಥಿತಿಯಲ್ಲಿ ಸ್ಮರಿಸಿಕೊಂಡು ಜಲಮೂಲಗಳ ಸ್ವಚ್ಛತೆ ಮತ್ತು ಬಳಕೆಯಲ್ಲಿ ಮಿತವ್ಯಯಗೊಳಿಸುವತ್ತ ನಾವೆಲ್ಲ ಬದ್ಧರಾಗಬೇಕೆಂದು ಉಪನ್ಯಾಸ ನೀಡಿದರು.

ನಗರಸಭೆ ಪೌರಾಯುಕ್ತ ಜಗದೀಶ ಈಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬನಹಟ್ಟಿ ವಕೀಲರ ಸಂಘದ ಕಾರ್ಯದರ್ಶಿ ಎಸ್. ಜಿ. ಸಲಬನ್ನವರ, ಜಂಟಿ ಕಾರ್ಯದರ್ಶಿ ಪಿ. ಜಿ. ಪಾಟೀಲ, ಉಪತಹಸೀಲ್ದಾರ ಎಸ್. ಎಲ್. ಕಾಗಿಯವರ, ಕ್ರೈಂ ಪಿಎಸ್‌ಐ ಡಿ. ಬಿ. ಕೋತ್ವಾಲ, ವಕೀಲರಾದ ಜಿ. ಡಿ. ಪಾಟೀಲ, ಸುಜಾತಾ ನಿಡೋನಿ, ಮಹೇಶ ಕಲಾದಗಿ, ಡಿ.ಎಂ. ಬೋಳಗೊಂಡ, ಬಸವರಾಜ ಕುಂಬಾರ, ನಗರಸಭೆಯ ಅಭಿಯಂತರ ರಾಘವೇಂದ್ರ ಕುಲಕರ್ಣಿ, ವ್ಯವಸ್ಥಾಪಕ ಸುರೇಶ ಬಾಗೇವಾಡಿ, ವಸಂತ ಪವಾರ, ಮುತ್ತಪ್ಪ ಚೌಡಕಿ, ಭೀಮು ಬಾಡಗಿ, ಬಸವರಾಜ ಮಠದ, ಶಿವಪುತ್ರ ಮೂಡಲಗಿ, ಎಂ. ಬಿ. ಮೋಕಾಶಿ, ಬಸವರಾಜ ಹೊಸೂರ, ಶೋಭಾ ಹೊಸಮನಿ, ಸಂಗೀತಾ ಕೋಳಿ ಸೇರಿದಂತೆ ಅನೇಕರು ಇದ್ದರು. ಸಿ.ಎಸ್.ಮಠಪತಿ ಸ್ವಾಗತಿಸಿ, ನಿರೂಪಿಸಿದರು. ಸುರೇಶ ಬಾಗೇವಾಡಿ ವಂದಿಸಿದರು.