ತಾಲೂಕಿನ ಯಡೋಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನುಶಿ ಹಿಡಿದ ಕಳಪೆ ತೊಗರಿ ಬೆಳೆ ಪತ್ತೆಯಾಗಿದ್ದು, ಶಾಲಾ ಬಿಸಿಯೂಟದ ಗುಣಮಟ್ಟ ಮತ್ತೊಮ್ಮೆ ಪ್ರಶ್ನಾರ್ಥಕವಾಗಿದೆ.
ಹಳಿಯಾಳ ಪಟ್ಟಣವಾಯಿತು ಈಗ ಗ್ರಾಮಾಂತರ ಭಾಗದಲ್ಲಿ ಕಂಡು ಬಂತು ಹುಳುಕು
ಕನ್ನಡಪ್ರಭ ವಾರ್ತೆ ಹಳಿಯಾಳತಾಲೂಕಿನ ಯಡೋಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನುಶಿ ಹಿಡಿದ ಕಳಪೆ ತೊಗರಿ ಬೆಳೆ ಪತ್ತೆಯಾಗಿದ್ದು, ಶಾಲಾ ಬಿಸಿಯೂಟದ ಗುಣಮಟ್ಟ ಮತ್ತೊಮ್ಮೆ ಪ್ರಶ್ನಾರ್ಥಕವಾಗಿದೆ.
ಕಳೆದ ತಿಂಗಳಾಂತ್ಯದಲ್ಲಿ ಹಳಿಯಾಳ ಪಟ್ಟಣದ ದೇಶಪಾಂಡೆ ಆಶ್ರಯ ನಗರದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಉರ್ದು ಪ್ರಾಥಮಿಕ ಶಾಲೆಯಲ್ಲಿ ನುಷಿ ಹುಳಗಳಿದ್ದ ತೊಗರಿ ಬೆಳೆ ಕಂಡು ಬಂದ ಹಿನ್ನೆಲೆ ಶಾಲಾಭಿವೃದ್ಧಿಯ ಸಮಿತಿಯ ಸದಸ್ಯರು ಆಕ್ಷೇಪಿಸಿದ್ದರಿಂದ ಈ ಸುದ್ದಿ ಇಡಿ ತಾಲೂಕಿನೆಲ್ಲೆಡೆ ಸದ್ದು ಮಾಡಿತ್ತು. ಇನ್ನೂ ಈ ಸುದ್ದಿ ಮರೆ ಮಾಚುವ ಮುನ್ನ ಈಗ ಇಂತಹುದೇ ಪ್ರಕರಣವೊಂದು ಯಡೋಗಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮರುಕಳಿಸಿದ್ದು, ಮಂಗಳವಾರ ಎಸ್‌ಡಿಎಂಸಿ ಸದಸ್ಯರು ಮತ್ತು ಸಾರ್ವಜನಿಕರು ಕಳಪೆ ತೊಗರಿ ಬೆಳೆಯ ಪ್ರಕರಣ ಬೆಳಕಿಗೆ ತಂದಿದ್ದಾರೆ.ಮಕ್ಕಳಿಗೆ ಕಳಪೆ ನುಶಿ ಮಿಶ್ರಿತ ತೊಗರಿ ಬೆಳೆಯಿಂದ ಸಿದ್ಧಪಡಿಸಿದ ಸಾರು ಮಾಡಿ ಬಡಿಸಲಾಗುತ್ತಿರುವ ಸುದ್ದಿ ತಿಳಿದು ಪಾಲಕರು ಶಾಲೆಗೆ ದಾವಿಸಿ ಪರಿಶೀಲನೆ ನಡೆಸಿದಾಗ ತೊಗರಿ ಬೆಳೆಯ ಹುಳುಕು ಹೊರಬಿದ್ದಿದೆ.
ಜಾನುವಾರುಗಳಿಗೆ ಸಹ ತಿನ್ನಲು ಅಯೋಗ್ಯವಾದ ಧಾನ್ಯವನ್ನು ಮುಗ್ದ ಮಕ್ಕಳಿಗೆ ಬಡಿಸುತ್ತಿದ್ದಾರೆಂಬ, ತೀವ್ರ ಅಸಮಾಧಾನ ಪಾಲಕ-ಪೋಷಕರಲ್ಲಿ ಮಡುಗಟ್ಟಿದೆ.ಕಳಪೆ ತೊಗರಿ ಬೆಳೆಯಿಂದ ಬಿಸಿಯೂಟ ಸಿದ್ಧಪಡಿಸಿದ ಕುರಿತು ಶಾಲಾ ಮುಖ್ಯೋಧ್ಯಾಕರು ಹಾಗೂ ಬಿಸಿಯೂಟದ ಸಹಾಯಕಿ ನೀಡಿದ ಉತ್ತರ ತದ್ವಿರುದ್ಧವಾಗಿರುವುದು ಪ್ರಕರಣದ ಪರಿಶೀಲನೆಗೆ ಬಂದ ಪಾಲಕ ಹಾಗೂ ಪೋಷಕರನ್ನು ಕೆರಳಿಸಿದೆ.
ಪಾಲಕರ ಗುಂಪು ಶಾಲೆಗೆ ಬಂದು ವಾದ-ವಿವಾದ ಚರ್ಚೆ ಆರಂಭಿಸಿದ್ದರಿಂದ ಬಿಸಿಯೂಟದ ಸಿಬ್ಬಂದಿ ಅನ್ನವನ್ನು ಬಸಿಯಲು ವಿಳಂಬ ಮಾಡಿದ್ದರಿಂದ ಅನ್ನ ಬೆಂದು ತೊಪ್ಪೆಯಾಗಿತೆಂದು ಕೆಲವು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.ವಿದ್ಯಾರ್ಥಿಗಳ ಪೋಷಕರು ಸಾರ್ವಜನಿಕವಾಗಿ ಶಾಲೆಯು ತೋರಿಸುವುದು ಒಳ್ಳೆಯ ಧಾನ್ಯ, ಅಡುಗೆಗೆ ಬಳಸುವುದು ಹಾಳಾದ ತೊಗರಿ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಳಪೆ ತೊಗರಿ ಹಿನ್ನೆಲೆ ಗ್ರಾಮಸ್ಥರು ಬಿಸಿಯೂಟ ಬೇಡ, ಮಕ್ಕಳು ಮನೆಯಲ್ಲಿ ಊಟ ಮಾಡಲಿ. ನಮಗೆ ವಿಶ್ವಾಸವಿಲ್ಲ. ಹೊಸ ಬೇಳೆ ಬರುವವರೆಗೆ ಬಿಸಿಯೂಟ ನಿಲ್ಲಿಸಿ ಎಂದು ಬೇಡಿಕೆ ಇಟ್ಟಿದ್ದಾರೆ. ಮಕ್ಕಳಿಗೆ ಏನಾದರೂ ಆರೋಗ್ಯದಲ್ಲಿ ಏರುಪೇರಾದರೆ ಜವಾಬ್ದಾರಿ ಯಾರದು? ಎಂಬ ಪ್ರಶ್ನೆಯೂ ಕೇಳಿಬಂದಿದೆ.ಈ ಮಧ್ಯೆ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಇಲಾಖೆ ಮತ್ತು ಅಕ್ಷರದಾಸೋಹ ವಿಭಾಗದ ಪ್ರತಿನಿಧಿಗಳ ನಿಯೋಗವು ಪರಿಶೀಲನೆ ನಡೆಸಿ ಶಾಲಾ ಮತ್ತು ಬಿಸಿಯೂಟದ ಸಿಬ್ಬಂದಿ ಹೇಳಿಕೆಯನ್ನು ದಾಖಲು ಮಾಡಿ ಬಿಇಒಗೆ ಸಲ್ಲಿಸಿದೆ.
ತಾಲೂಕಿನೆಲ್ಲೆಡೆ ಪೂರೈಸಲ್ಪಟ್ಟಿರುವ ಕಳಪೆ ತೊಗರಿ ಬೆಳೆ ಹಾಗೂ ಅದನ್ನು ಪರಿಶೀಲಿಸದೇ ಒಮ್ಮತದಿಂದ ಸ್ವೀಕರಿಸಿದ ಶಿಕ್ಷಣ ಇಲಾಖೆ ಹಾಗೂ ಅಕ್ಷರ ದಾಸೋಹ ಇಲಾಖೆಯ ವಿರುದ್ಧ ದೂರನ್ನು ಕೊಡಲು ಇಡಿ ತಾಲೂಕಿನ ಪಾಲಕರು ಮತ್ತು ಪೋಷಕರು ಸಿದ್ಧತೆ ನಡೆಸಿದ್ದಾರೆನ್ನಲಾಗಿದೆ.