ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಆಪರೇಷನ್ ಸಿಂದೂರ’ದ ಯಶಸ್ಸಿಗೆ ಶುಭ ಹಾರೈಸಿ, ಭಾರತೀಯ ಸೈನಿಕರ ಒಳಿತಿಗೆ ಪ್ರಾರ್ಥಿಸಿ ಶನಿವಾರವೂ ರಾಜ್ಯಾದ್ಯಂತ ದೇಗುಲಗಳಲ್ಲಿ ವಿಶೇಷ ಪೂಜೆ, ಹೋಮ-ಹವನಗಳು ನಡೆದವು. ಇದೇ ವೇಳೆ, ಮುಸ್ಲಿಮರು ಕೂಡ ಮಸೀದಿ, ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದಾವಣಗೆರೆಯ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಹಿರಿಯ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಅವರು ವಿಶೇಷ ಪೂಜೆ ಸಲ್ಲಿಸಿ, ಸೈನಿಕರ ಕ್ಷೇಮಕ್ಕೆ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ, ನಗರದ ಹಜರತ್ ಶಾ ವಲಿ ದರ್ಗಾದಲ್ಲಿ ಜವಾಹರ ಬಾಲ್‌ಮಂಚ್‌ನಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯ ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಸೈಯದ್ ಸಾದತ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಭೀಮರಾಯನ ಗುಡಿಯ ಬಲಭೀಮೇಶ್ವರ ದೇವಸ್ಥಾನದಲ್ಲಿ ತಹಶೀಲ್ದಾರ ಉಮಾಕಾಂತ ಹಳ್ಳೆ ಮತ್ತು ಸಿಬ್ಬಂದಿ ವಿಶೇಷ ಪೂಜೆ ಸಲ್ಲಿಸಿ, ಭಾರತೀಯ ಸೇನೆಯ ಕಾರ್ಯಾಚರಣೆಗೆ ಭಗವಂತ ಅಪಾರ ಬುದ್ಧಿ, ಶಕ್ತಿ ಒದಗಿಸಲಿ, ಪ್ರತಿ ಹೆಜ್ಜೆಯಲ್ಲೂ ವಿಜಯ ನಮ್ಮ ಸೈನಿಕರದ್ದಾಗಿರಲಿ ಎಂದು ಪ್ರಾರ್ಥಿಸಿದರು. ಇದೇ ವೇಳೆ, ಶಹಾಪುರ ತಾಲೂಕಿನ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಹೊಸಹೊಳಲಿನ ಕೋಟೆ ಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಚಿತ್ರದುರ್ಗದಲ್ಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಬಡಾಮಕಾನ್‍ನ ಮುಂಭಾಗ ವಿಜಯೋತ್ಸವ ಆಚರಿಸಿದರು. ಮಂಗಳೂರಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ನಗರದ ಪುರಭವನದ ಮುಂಭಾಗದ ರಾಜಾಜಿ ಪಾರ್ಕ್‌ನಲ್ಲಿ ಶನಿವಾರ ವಿವಿಧ ಧರ್ಮಗಳ ಧರ್ಮಗುರುಗಳು, ಮಾಜಿ ಸೈನಿಕರು, ವಿವಿಧ ಕ್ಷೇತ್ರಗಳ ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು ಸೇರಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಧಾರವಾಡದ ಮುದಿ ಮಾರುತಿ ದೇವಸ್ಥಾನದಲ್ಲಿ ಸೈನಿಕರ ಸುರಕ್ಷತೆಗಾಗಿ ಪ್ರಾರ್ಥನಾ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಕದನ ವಿರಾಮ ಘೋಷಣೆಯಾದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಾದಯಾತ್ರೆ ಮುಕ್ತಾಯಗೊಳಿಸಲಾಯಿತು. ಉಡುಪಿಯ ಕಾಪು ನವೀಕೃತ ಮಾರಿಯಮ್ಮ ಗುಡಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶೇಷ ಪೂಜೆ ಸಲ್ಲಿಸಿ, ದೇಶದ ಒಳಿತಿಗೆ ಪ್ರಾರ್ಥಿಸಿದರು. ಇದೇ ವೇಳೆ, ಶಿವಮೊಗ್ಗ, ಹಾನಗಲ್ ಕಲಬುರಗಿ, ಸಾಗರ, ರಾಯಚೂರು, ಬಳ್ಳಾರಿ, ಗದಗ ಸೇರಿ ರಾಜ್ಯದ ಇತರೆಡೆಯೂ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆದವು. ಫೋಟೊ-
ದಾವಣಗೆರೆಯಲ್ಲಿ ವಿಶೇಷ ಪೂಜೆ.