ದೇಗುಲಗಳಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜಾ, ಕೈಂಕರ್ಯ ನಡೆದರೆ ಸಾರ್ಥಕ: ಎಂ.ಶ್ರೀನಿವಾಸ್‌

| Published : May 23 2025, 12:24 AM IST

ದೇಗುಲಗಳಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜಾ, ಕೈಂಕರ್ಯ ನಡೆದರೆ ಸಾರ್ಥಕ: ಎಂ.ಶ್ರೀನಿವಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ದೇವಸ್ಥಾನಗಳನ್ನು ನಿರ್ಮಿಸುವುದು ದೊಡ್ಡ ಮಾತಲ್ಲ. ಅಲ್ಲಿ ಪೂಜಾ, ಕೈಂಕರ್ಯ ಸರಿಯಾದ ರೀತಿಯಲ್ಲಿ ನಡೆದರೆ ಮಾತ್ರ ಸಾರ್ಥಕವಾಗುತ್ತದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.

ಕೋಟೆ ಮಾರಿಕಾಂಬ ಜಾತ್ರೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ದೇವಸ್ಥಾನಗಳನ್ನು ನಿರ್ಮಿಸುವುದು ದೊಡ್ಡ ಮಾತಲ್ಲ. ಅಲ್ಲಿ ಪೂಜಾ, ಕೈಂಕರ್ಯ ಸರಿಯಾದ ರೀತಿಯಲ್ಲಿ ನಡೆದರೆ ಮಾತ್ರ ಸಾರ್ಥಕವಾಗುತ್ತದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.

ಬುಧವಾರ ರಾತ್ರಿ ಶ್ರೀ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ 2 ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ನೂತನವಾಗಿ ನಿರ್ಮಿಸಿದ ದೇವಸ್ಥಾನಗಳಲ್ಲಿ ಪೂಜೆಗಳು ಶ್ರದ್ಧಾ ಭಕ್ತಿಯಿಂದ ನಡೆಯಬೇಕು. ಈ ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಕೆ.ವಿ.ವಸಂತ್‌ಕುಮಾರ್ ಕೊಡುಗೆ ಅಪಾರವಾಗಿದೆ. ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗಬೇಕು. ಧಾರ್ಮಿಕ ಕೇಂದ್ರಗಳಲ್ಲಿ ಧಾರ್ಮಿಕ ಆಚರಣೆಗಳು ನಡೆಯುತ್ತಿರಬೇಕು. ದೇವಾಲಯದಲ್ಲಿ ಶಾಂತಿ, ನೆಮ್ಮದಿ ದೊರಕುತ್ತದೆ ಎಂದರು. ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಉದ್ಘಾಟಿಸಿ ಮಾತನಾಡಿ, ಈ ಊರಿನ ಮೂಲ ಹೆಸರು ಎಡೆಹಳ್ಳಿ. ಈ ಊರಿಗೆ ಐತಿಹಾಸಿಕ ಹಿನ್ನೆಲೆಯಿದೆ. ಕೆಳದಿ, ಇಕ್ಕೇರಿ ಪಾಳೆಗಾರರು ಆಳ್ವಿಕೆ ಮಾಡಿದ ಪುರಾವೆಗಳಿವೆ. ಅನಾದಿ ಕಾಲದಿಂದಲೂ ಮಾರಿಕಾಂಬ ದೇವಿ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಮೈಸೂರಿನ ನರಸಿಂಹರಾಜ ಒಡೆಯರ್ ಈ ಊರಿಗೆ ಬಂದು ಗ್ರಂಥಾಲಯ ಕಟ್ಟಡ ಉದ್ಘಾಟನೆ ಮಾಡಿದ್ದರು. ಅವರು ಬಂದು ಹೋದ ನಂತರದಲ್ಲಿ ಊರಿನಲ್ಲಿ ಉತ್ತಮ ಮಳೆ, ಮಳೆ ಆಗಿ, ಊರು ಸಮೃದ್ಧಿ ಹೊಂದಿತು. ಅದಕ್ಕಾಗಿ ನರಸಿಂಹರಾಜಪುರ ಎಂದು ನಾಮಾಂಕಿತಗೊಂಡಿತು. ಎಂ.ಶ್ರೀನಿವಾಸ್ ಅವರು ಹುಟ್ಟೂರಿನ ಅಭಿಮಾನಕ್ಕೋಸ್ಕರ ಹಿಂದು, ಕ್ರೆಸ್ತ , ಮುಸ್ಲಿಂ, ಜೈನ ದೇವಾಲಯಗಳನ್ನು ವೈಯಕ್ತಿಕ ಗಮನ ಹರಿಸಿ ಜೀರ್ಣೋದ್ಧಾರ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನ ನಿರ್ಮಾಣಕ್ಕೆ ಎಂ.ಶ್ರೀನಿವಾಸ್ ಅವರು ಅಪಾರ ಕೊಡುಗೆ ನೀಡಿದ್ದಾರೆ. ಜೊತೆಗೆ ಕೆ.ವಿ.ವಸಂತ್‌ಕುಮಾರ್ ಕೂಡ ದೇವಾಲಯ ನಿರ್ಮಾಣಕ್ಕೆ ಪರಿಶ್ರಮ ಪಟ್ಟಿದ್ದಾರೆ. ಮಾರಿಕಾಂಬ ದೇವಿಗೆ ಅಗಾಧ ಶಕ್ತಿ ಇದೆ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುತ್ತಾಳೆ. ಈ ಊರಿನ ಅಭಿವೃದ್ದಿಗೆ ಶ್ರಮಿಸುತ್ತಿರುವ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಶ್ರಮ ಸಾರ್ಥಕವಾಗುತ್ತಿದೆ ಎಂದರು.ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್.ಎಸ್.ಶೆಟ್ಟಿ ಮಾತನಾಡಿ, ಕ್ಷೇತ್ರದಲ್ಲಿ ಎಲ್ಲಿಯೂ ಕೂಡ ನಿರುದ್ಯೋಗ ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಠಿಸುವ ಯಾವುದೇ ಯೋಜನೆಗಳಿಲ್ಲ. ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪನೆ ಆಗಬೇಕು. ಈ ನಿಟ್ಟಿನಲ್ಲಿ ಟಿ.ಡಿ.ರಾಜೇಗೌಡ ಹಾಗೂ ಎಂ.ಶ್ರೀನಿವಾಸ್ ಗಮನ ಹರಿಸಬೇಕು. ಊರುಗಳಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದರೆ ಊರಿನ ಜನರಿಗೂ, ಊರಿಗೂ ಶ್ರೇಯಸ್ಸು ಲಭಿಸುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಕೋಟೆ ಮಾರಿಕಾಂಬ ಜಾತ್ರಾ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಜಾತ್ರೆ ಯಶಸ್ವಿಯಾಗಲು ಊರಿನ ಎಲ್ಲಾ ಧರ್ಮೀಯರೂ ಕೂಡ ಕೈ ಜೋಡಿಸಿದ್ದಾರೆ. ಜಾತ್ರೆ ಹಬ್ಬದ ವಾತಾವರಣ ಸೃಷ್ಟಿಸಲು ಭಕ್ತಾಧಿಗಳೇ ಕಾರಣ. ಹಿಂದೂ ಧರ್ಮದ ಸಂಪ್ರದಾಯ, ಆಚಾರ ವಿಚಾರಗಳನ್ನು ಜನರು ಪಾಲಿಸಬೇಕು ಎಂದು ಕರೆ ನೀಡಿದರು. ಈ ಬಾರಿಯ ಜಾತ್ರಾ ಮಹೋತ್ಸವ ಮಾರಿಕಾಂಬ ವಿಗ್ರಹ ದಾನಿಗಳಾದ ನಾಗಚಂದ್ರ ಪ್ರತಿಷ್ಠಾನದ ಅಧ್ಯಕ್ಷ ಕಣಿವೆವಿನಯ್ ಹಾಗೂ ಅನ್ನ ಸಂತರ್ಪಣೆ ದಾನಿಗಳಾದ ಬೆಂಗಳೂರಿನ ಉದ್ಯಮಿ ಗದ್ದೇಮನೆ ಶಶಿ, ಶಾಸಕ ಟಿ.ಡಿ.ರಾಜೇಗೌಡ, ಎಂ. ಶ್ರೀನಿವಾಸ್, ಮಾಜಿ ಸಚಿವ ಡಿ.ಎನ್.ಜೀವರಾಜ್, ಸುಧಾಕರ್.ಎಸ್.ಶೆಟ್ಟಿ ಅವರನ್ನು ಗೌರವಿಸಲಾಯಿತು.ನಂತರ ಬೃಹತ್ತಾದ ವೇದಿಕೆಯಲ್ಲಿ ಕೊಪ್ಪ ತಾಜ್ ಈವೆಂಟ್ಸ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ, ಜಾತ್ರಾ ಸಮಿತಿ ಪದಾಧಿಕಾರಿ ಎಚ್.ಎನ್. ರವಿಶಂಕರ್, ಪಿ.ಆರ್.ಸುಕುಮಾರ್, ಎನ್.ಎಂ.ಕಾರ್ತಿಕ್, ಈಚಿಕೆರೆಸುಂದರೇಶ್, ಸುನೀಲ್‌ಕುಮಾರ್ ಇದ್ದರು.