ಸಾರಾಂಶ
ಯಲಬುರ್ಗಾ: ಪಟ್ಟಣದ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ತೀರ್ಥ ಸಾರ್ವಭೌಮರ ೩೫೪ನೇ ಆರಾಧನಾ ಮಹೋತ್ಸವ ನಿಮಿತ್ತ ಭಾನುವಾರ ಶ್ರೀ ಗುರುರಾಜರ ಪೂರ್ವಾರಾಧನೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಜರುಗಿತು.
ಗುರುರಾಜರ ಪೂರ್ವಾರಾಧನೆ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ, ಕನಕಾಭಿಷೇಕ ಅರ್ಚನೆ ಮಧ್ಯಾಹ್ನ ನೈವೇದ್ಯ, ಹಸ್ತೋದಕ, ಅಲಂಕಾರ, ತೀರ್ಥ ಪ್ರಸಾದ, ಸಂಜೆ ವೇಳೆ ದಾಸವಾಣಿ, ಭಜನೆ, ಪಾಲಕಿ ಸೇವಾ, ರಥೋತ್ಸವ, ಸ್ವಸ್ತವಾಚನ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.ರಾಯರ ಆರಾಧನೆ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ತುಮ್ಮರಗುದ್ದಿ, ತಲ್ಲೂರು, ವಜ್ರಬಡಿ, ಮಲಕಸಮುದ್ರ, ಗೆದಗೇರಿ, ಬಂಡಿಹಾಳ, ಮುರಡಿ, ಮುಧೋಳ, ಕುಡಗುಂಟಿ ಸೇರಿದಂತೆ ನಾನಾ ಕಡೆಯಿಂದ ಶ್ರೀಮಠಕ್ಕೆ ಆಗಮಿಸಿದ್ದ ಭಕ್ತರು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.
ಆರಾಧನೆಯಲ್ಲಿ ಪಾಲ್ಗೊಳ್ಳಿ: ರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷ ಸುನೀಲ ಕುಲಕರ್ಣಿ ಮಾತನಾಡಿ, ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು ಆಗಿ ಸರ್ವರ ಕಷ್ಟ ಪರಿಹರಿಸುವ ಮಹಾತ್ಮರಾಗಿದ್ದಾರೆ. ಗುರುರಾಘವೇಂದ್ರ ತೀರ್ಥರ ನಾಮ ಸ್ಮರಣೆಯೇ ಪರಮ ಮಂಗಳಕರವಾಗಿದೆ. ಅವರನ್ನು ಮನದಲ್ಲಿ ನೆನೆದರೆ ಸಾಕು ನಮ್ಮನ್ನು ಕಾಪಾಡುತ್ತಾನೆ. ಅವರು ಜಗತ್ತಿನ ದೊಡ್ಡ ದೈವಶಕ್ತಿಯಾಗಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದಾರೆ. ಗುರುರಾಯರನ್ನು ನಂಬಿದ ಭಕ್ತರಿಗೆ ಸದಾ ಒಳಿತಾಗಿದೆ. ಶ್ರೀಮಠದಲ್ಲಿ ನಡೆಯುವ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ರಾಯರ ಕೃಪೆಗೆ ಪಾತ್ರರಾಗಬೇಕು ಎಂದರು.ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿಗಳ ಮಠದ ಅರ್ಚಕ ಗುರುರಾಜ ಪುರೋಹಿತ, ಸುಧೀರ ಕೊರ್ಲಹಳ್ಳಿ, ರಾಘವೇಂದ್ರಾಚಾರ ಪುರೋಹಿತ, ರಮೇಶ ದೇಶಪಾಂಡೆ, ಗುರುರಾಜ ತುಮ್ಮರಗುದ್ದಿ, ಗೋವಿಂದಾಚಾರ ಹೇಮಾದ್ರಿ, ಪವನ ಪುರೋಹಿತ, ಗಿರಿಧರ ಪರವಾರಿ, ಪಾಂಡುರಂಗ ದೇಸಾಯಿ, ಶೇಷಗಿರಿದಾವ ಪಟವಾರಿ, ಮೋಹನರಾವ್ ಮುಕ್ತೇದಾರ, ನಾರಾಯಣ ಗಂಗಾಖೇಡ, ವಸಂತ ಕುಲಕರ್ಣಿ, ಜಗನ್ನಾಥರಾವ ದೇಸಾಯಿ, ಕಿಶನರಾವ್ ತುಮ್ಮರಗುದ್ದಿ, ಗುರುರಾಜ ದೇಸಾಯಿ ಬಂಡಿಹಾಳ, ಪ್ರಹ್ಲಾದರಾವ್ ಮುಕ್ತೇದಾರ, ವಿಜಯೇಂದ್ರ ದೇಸಾಯಿ, ಗುರುರಾಜರಾವ್ ಪಟವಾರಿ, ಶ್ರೀನಿವಾಸ ಕುಲಕರ್ಣಿ ಇದ್ದರು.ಇಂದು ಗುರುರಾಜರ ಮಧ್ಯಾರಾಧನೆ: ಆ. ೧೧ರಂದು ಶ್ರೀಗುರುರಾಜರ ಮಧ್ಯಾರಾಧನೆ ನಿಮಿತ್ತ ನಾನಾ ಧಾರ್ಮಿಕ ಕಾರ್ಯಗಳು ವಿಜೃಂಭಣೆಯಿಂದ ನಡೆಯಲಿವೆ. ಸಂಜೆ ೬ ಗಂಟೆಗೆ ಧಾರವಾಡದ ಅಮೃತ ಲಕ್ಷ್ಮೀ ಅವರಿಂದ ಭರತನಾಟ್ಯ ನಡೆಯಲಿದೆ. ಆ. ೧೨ರಂದು ಗುರುರಾಜರ ಉತ್ತರಾರಾಧನೆ ಅಂಗವಾಗಿ ಬೆಳಗ್ಗೆ ರಥಾಂಗ ಹೋಮ, ೧೦ ಗಂಟೆಗೆ ರಥೋತ್ಸವ ಜರುಗಲಿದೆ.
ಗುರುರಾಘವೇಂದ್ರ ತೀರ್ಥರ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ಮಠದಲ್ಲಿ ಮೂರು ದಿನಗಳ ಕಾಲ ನಾನಾ ಧಾರ್ಮಿಕ ಕಾರ್ಯಗಳ ಜತೆಗೆ ಭರತನಾಟ್ಯ, ಸಂಗೀತ ಕಾರ್ಯಕ್ರಮ ನಡೆಯಲಿವೆ. ಗುರುರಾಯರ ಆರಾಧನೆಯಿಂದ ಸಮಾಜಕ್ಕೆ ಒಳಿತಾಗಲಿ. ಹೆಚ್ಚಿನ ಸಂಖ್ಯೆಯ ಭಕ್ತರು ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷ ಸುನೀಲ ಕುಲಕರ್ಣಿ ತಿಳಿಸಿದ್ದಾರೆ.