ಗಣೇಶ ಹಬ್ಬದ ಸಂಭ್ರಮದ ಬೆನ್ನಲ್ಲೇ ಮಳೆ-ಬೆಳೆ ಸಮೃದ್ಧಿಯಾಗಲಿ, ಜನರ ಸಂಕಷ್ಟಗಳು ದೂರವಾಗಲಿ ಎಂಬ ಆಶಯದೊಂದಿಗೆ ಜೋಕುಮಾರನ ಹಬ್ಬದ ಆಚರಣೆ ನಡೆಯುತ್ತಿದೆ.
ಫಕೃದ್ದೀನ್. ಎಂ.ಎನ್
ನವಲಗುಂದ:ಅಡ್ಡಡ್ಡ ಮಳಿ ಬಂದ.. ದೊಡ್ಡ ದೊಡ್ಡ ಕೆರೆ ತುಂಬಿ.. ಗೊಬ್ಬುಗಳೆಲ್ಲ ಹೈನಾಗಿ ಜೋಕುಮಾರ... ಎಂಬ ಮಹಿಳೆಯರ ಸಾಮೂಹಿಕ ಗಾಯನದೊಂದಿಗೆ ಬಿದಿರಿನ ಬುಟ್ಟಿಯಲ್ಲಿ ಬೇವಿನ ಎಲೆಗಳ ನಡುವೆ ಪ್ರತಿಷ್ಠಾಪಿಸಿರುವ ಜೋಕುಮಾರನನ್ನು ಮನೆ-ಮನೆಗೆ ಕೊಂಡೊಯ್ಯುವ ದೃಶ್ಯ ಗ್ರಾಮೀಣ ಸಂಸ್ಕೃತಿಯ ವೈಶಿಷ್ಟ್ಯವನ್ನು ಸಾರುತ್ತಿದೆ.
ಗಣೇಶ ಹಬ್ಬದ ಸಂಭ್ರಮದ ಬೆನ್ನಲ್ಲೇ ಮಳೆ-ಬೆಳೆ ಸಮೃದ್ಧಿಯಾಗಲಿ, ಜನರ ಸಂಕಷ್ಟಗಳು ದೂರವಾಗಲಿ ಎಂಬ ಆಶಯದೊಂದಿಗೆ ಪಟ್ಟಣವೂ ಸೇರಿ ತಾಲೂಕಿನ ಗ್ರಾಮಗಳಲ್ಲಿ ಜೋಕುಮಾರನ ಹಬ್ಬದ ಆಚರಣೆ ನಡೆಯುತ್ತಿದೆ.ಮನೆ-ಮನೆಗೆ ಜನಪದ:
ಗಂಗಾಮತಸ್ಥರ ಮನೆಯಲ್ಲಿ ಹುಟ್ಟುವ ಜೋಕುಮಾರನನ್ನು ಬಿದಿರಿನ ಬುಟ್ಟಿಯಲ್ಲಿ ಬೇವಿನ ಎಲೆಗಳ ಮಧ್ಯೆ ಪ್ರತಿಷ್ಠಾಪಿಸಲಾಗುತ್ತದೆ. ಬಳಿಕ ಗಂಗಾಮತಸ್ಥ ಹಾಗೂ ಭೋವಿ ಸಮಾಜದ ಮಹಿಳೆಯರ ತಂಡ ಜೋಕುಮಾರನ ಕುರಿತ ವಿಶಿಷ್ಟ ಜನಪದ ಹಾಡು ಹಾಡುತ್ತಾ ಮನೆ-ಮನೆಗೆ ತೆರಳುತ್ತದೆ. ಮನೆಯ ಮುಂದೆ ಜೋಕುಮಾರನಿಗೆ ಪೂಜೆ ಸಲ್ಲಿಸಿ, ಮನೆಯವರು ಆತನ ಬಾಯಿಗೆ ಬೆಣ್ಣೆ ಸವರಿ ಹರಕೆ ಸಲ್ಲಿಸುವುದು ಸಂಪ್ರದಾಯ. ಪೂಜೆ ಹಾಗೂ ಹರಕೆ ಸಲ್ಲಿಸಿದರೆ ಕುಟುಂಬದ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯೂ ಈ ಭಾಗದಲ್ಲಿ ಇದೆ.''''''''ಚರಗಾ'''''''' ಪ್ರಸಾದ:
ಜೋಕುಮಾರನ ಪೂಜೆಯ ಬಳಿಕ ಮಹಿಳೆಯರು ನೀಡುವ ''''''''ಚರಗಾ'''''''' ಪ್ರಸಾದವನ್ನು ರೈತರು ತಮ್ಮ ಹೊಲಗಳಲ್ಲಿ ಚೆಲ್ಲಿದರೆ ಬೆಳೆ ಹುಲುಸಾಗಿ ಬೆಳೆಯುತ್ತದೆ ಎಂಬುದು ಜನರ ನಂಬಿಕೆ. ಮಳೆ ಕೊರತೆಯಂತಹ ಸಂಕಷ್ಟದ ಸಂದರ್ಭದಲ್ಲೂ ಉತ್ತಮ ಮಳೆ ಸುರಿದು, ಕೆರೆ-ಕಟ್ಟೆ ತುಂಬಿ, ಹೊಲಗಳಲ್ಲಿ ಸಮೃದ್ಧ ಬೆಳೆ ಬರಲಿ ಎಂಬ ಪ್ರಾರ್ಥನೆಯೇ ಈ ಆಚರಣೆಯ ಹಿಂದಿರುವ ಪ್ರಮುಖ ಆಶಯವಾಗಿದೆ.ಏಳು ದಿನದ ಬದುಕು:
ಜೋಕಪ್ಪನನ್ನು ಹೊತ್ತು ಏಳು ದಿನ ಊರಿನ ವಿವಿಧ ಮನೆಗಳಿಗೆ ಸುತ್ತುತ್ತಾರೆ. ಹುಣ್ಣಿಮೆಯ ದಿನ ಅಂದರೆ ಏಳನೇ ದಿನಕ್ಕೆ ಜೋಕಪ್ಪ ಸಾಯುತ್ತಾನೆ. ನಂತರ ಆತನನ್ನು ಊರ ಹೊರಗೆ ಇರುವ ಅಗಸರು ಬಟ್ಟೆ ಒಗೆಯುವ ಬಂಡೆಯ ಅಡಿಯಲ್ಲಿ ಹಾಕಿ ಬರುತ್ತಾರೆ. ಇದು ಹುಣ್ಣಿಮೆಯಂದು ನಡೆಯುವುದರಿಂದ ಜೋಕುಮಾರ ಹುಣ್ಣಿಮೆ ಎಂದೂ ಕರೆಯುತ್ತಾರೆ.ಸರ್ಕಾರ ಧನಸಹಾಯ ನೀಡಲಿ:
ಹಿಂದೆ ಸಾಕಷ್ಟು ಪ್ರಮಾಣದಲ್ಲಿ ಜೋಳ, ಅಕ್ಕಿ, ಗೋದಿ, ಒಣ ಮೆಣಸಿನಕಾಯಿ, ಕಾಸು ದೊರೆಯುತ್ತಿತ್ತು. ಈಗ ಸಮರ್ಪಕ ಮಳೆಯೂ ಇಲ್ಲ, ಜನರ ಬಳಿ ಜಾನುವಾರುಗಳು ಕಡಿಮೆಯಾಗಿವೆ. ಜೋಕುಮಾರ ಸ್ವಾಮಿಯನ್ನು ಹೊತ್ತು ತಿರುಗುವವರೂ ಕಡಿಮೆಯಾಗಿದ್ದಾರೆ ಎಂಬುದು ಜೋಕಪ್ಪನನ್ನು ಹೊತ್ತು ತಿರುಗುವ ನೀಲಮ್ಮ ಭೋವಿ, ಯಲ್ಲಮ್ಮ ಭೋವಿ ಫಕ್ಕೀರಮ್ಮ ಭೋವಿ, ಪುಷ್ಪಾ ಭೋವಿ ಅವರ ನುಡಿ.