ಸಾರಾಂಶ
- ದೇಗುಲಗಳಲ್ಲೂ ವಿಶೇಷ ಅಲಂಕಾರ, ಪೂಜೆ । ಮನೆಗಳಲ್ಲಿ ಮಹಿಳೆಯರಿಗೆ ಉಡಿ ತುಂಬಿ, ಬಾಗಿನ ಅರ್ಪಿಸಿ ಸಂಭ್ರಮ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಶ್ರಾವಣ ಮಾಸದ ಶುಭ ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ಹಬ್ಬದಂದು ಎಲ್ಲರ ಮನೆಗಳಲ್ಲಿ ಲಕ್ಷ್ಮೀ ಪೂಜಾ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು. ಮಹಿಳೆಯರ ಅಚ್ಚುಮೆಚ್ಚಿನ ಹಬ್ಬವೆಂದೇ ಗುರುತಿಸಲಾಗುವ ವರಮಹಾಲಕ್ಷ್ಮೀ ಆರಾಧನೆಯಿಂದ ಜಿಲ್ಲಾದ್ಯಂತ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು.ನಗರದೇವತೆ ಶ್ರೀ ದುಗ್ಗಮ್ಮ ದೇವಸ್ಥಾನ, ವಿನೋಬ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನ, ನಿಟ್ಟುವಳ್ಳಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಯಲ್ಲಮ್ಮ ನಗರದ ಯಲ್ಲಮ್ಮ ದೇವಸ್ಥಾನ, ಕಾಳಿಕಾ ದೇವಿ ರಸ್ತೆಯ ಶ್ರೀ ಕಾಳಿಕಾಂಬ ದೇವಸ್ಥಾನ, ದೇವರಾಜ ಅರಸು ಬಡಾವಣೆಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆಗಳು ನಡೆದವು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಕುಟುಂಬಸಹಿತ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ದಾವಣಗೆರೆ ಸೇರಿದಂತೆ ಗ್ರಾಮೀಣ ಪ್ರದೇಶಗಳ ಮನೆ ಮನೆಗಳಲ್ಲಿ ಶ್ರದ್ಧಾ ಭಕ್ತಿಯಿಂದ ಹಬ್ಬ ಆಚರಿಸಲಾಯಿತು. ಹಬ್ಬಕ್ಕಾಗಿ ಮನೆಗಳ ಮುಂದೆ ರಂಗುರಂಗಿನ ರಂಗೋಲಿಗಳನ್ನು ಬಿಡಿಸಿ, ಬಾಗಿಲಿಗೆ ತಳಿರು ತೋರಣ, ಹೂವುಗಳಿಂದ ಅಲಂಕರಿಸಲಾಗಿತ್ತು. ಮಹಾಲಕ್ಷ್ಮೀಯ ಮೂರ್ತಿ, ಕೆಲವೆಡೆ ಬೆಳ್ಳಿಯ ಮುಖವನ್ನಿಟ್ಟು ಲಕ್ಷಣವಾಗಿ ಸೀರೆ ಉಡಿಸಿ, ಚಿನ್ನ-ಬೆಳ್ಳಿ ಆಭರಣಗಳಿಂದ ಹಾಗೂ ಬಗೆಬಗೆಯ ಹೂವುಗಳಿಂದ ದೇವಿಯನ್ನು ಅಲಂಕರಿಸಲಾಗಿತ್ತು. ಹೊಸ ನೋಟು, ನಾಣ್ಯಗಳನ್ನು ಸಹ ಪೂಜೆಗೆ ಇಟ್ಟು ಶ್ರದ್ಧೆ ಮೆರೆಯಲಾಯಿತು. ಮಕ್ಕಳು ಹೊಸ ಬಟ್ಟೆಗಳ ಧರಿಸಿದ್ದರೆ, ಹೊಸ ಸೀರೆಯನ್ನುಟ್ಟ ಹೆಂಗಳೆಯರು ದೇವಿಗೆ ಪೂಜೆ ಸಲ್ಲಿಸಿದರು.ಐಶ್ವರ್ಯದ ಅಧಿದೇವತೆಯಾದ ವರಮಹಾಲಕ್ಷ್ಮೀಗೆ ಇಷ್ಟವಾದ ಹೋಳಿಗೆ, ಕರಿಗಡಬು, ಶೇಂಗಾ, ಎಳ್ಳಿನ ಉಂಡೆ ಸೇರಿದಂತೆ ತರಹೇವಾರಿ ಸಿಹಿ ತಿನಿಸುಗಳ ತಯಾರಿಸಿ, ವಿಶೇಷವಾಗಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿದರು. ಬಂಧುಗಳ, ಅಕ್ಕಪಕ್ಕದವರ ಮನೆಗಳಿಗೆ ತೆರಳಿ ಅರಿಶಿಣ ಕುಂಕುಮ, ಫಲ ತಾಂಬೂಲ ಉಡಿ ತುಂಬಿಸಿಕೊಳ್ಳುವ ದೃಶ್ಯ ಕಂಡುಬಂದಿತು. ಹೊಸದಾಗಿ ಮದುವೆಯಾದ ಗೃಹಿಣಿಯರು ಮುತೈದೆಯರಿಗೆ ಬಾಗಿನ ನೀಡಿ ಹೋಳಿಗೆ, ಸಿಹಿ ಊಟ ಉಣಬಡಿಸಿದರು.
- - --8ಕೆಡಿವಿಜಿ36.ಜೆಪಿಜಿ: ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದಂದು ಅಮ್ಮನವರಿಗೆ ವಿಶೇಷ ಅಲಂಕಾರ ನೆರವೇರಿತು. -8ಕೆಡಿವಿಜಿ37, 38.ಜೆಪಿಜಿ: ದಾವಣಗೆರೆಯಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದಂದು ಭಕ್ತರು ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ ಭಕ್ತಿ ಸಮರ್ಪಿಸಿದರು. -8ಕೆಡಿವಿಜಿ39.ಜೆಪಿಜಿ: ಶ್ರಾವಣ ಮಾಸದ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ದಾವಣಗೆರೆಯ ವೆಂಕಾಬೋವಿ ಕಾಲೋನಿಯಲ್ಲಿರುವ ಶ್ರೀ ಗಾಳಿ ದುರ್ಗಾಂಬಿಕಾ ದೇವಿಗೆ ಭಕ್ತರು ವಿಶೇಷ ಅಲಂಕಾರ ನೆರವೇರಿಸಿದರು.