ಆಗಸ್ಟ್ ತಿಂಗಳಲ್ಲಿ ಸೂಲ ಹುಣ್ಣಿಮೆಯ ನಂತರ ಬರುವ ಶುಭದಿನದಂದು ಅಮ್ಮನವರ ಮೂರ್ತಿ ತಯಾರಿಕೆಗೆ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಸಾನ್ನಿಧ್ಯದಲ್ಲಿ ಮೂಲ ಸನ್ನಿದಿಯಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀಗಳ ಸಮ್ಮುಖದಲ್ಲಿ ನೂರಾರು ಭಕ್ತರು ಪಾದಯಾತ್ರೆ ಮೂಲಕ ಪಂಚಲಿಂಗೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಇರುವ ತೋಟಕ್ಕೆ ತೆರಳಿದರು. ಬಳಿಕ ಮೃತ್ತಿಕೆ (ಮಣ್ಣು) ತರುವ ಸ್ಥಳದಲ್ಲಿ ಪದ್ಧತಿ ಪ್ರಕಾರ ಶ್ರೀಗಳ ಪಾದಪೂಜೆ ನೆರವೇರಿಸಿ ಮಣ್ಣನ್ನು ಸಂಗ್ರಹಿಸಲಾಯಿತು. ಅಲ್ಲಿಂದ ಶ್ರೀಗಳ ಸಮ್ಮುಖದಲ್ಲಿ ವಾಪಸ್ ಮೂಲ ಸನ್ನಿಧಿಗೆ ಮೆರವಣಿಗೆ ಮೂಲಕ ಬರಲಾಯಿತು.

ಕನ್ನಡಪ್ರಭ ವಾರ್ತೆ ಮಾಡಾಳು

ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೇವತೆಯಾಗಿರುವ ಗ್ರಾಮದ ಶ್ರೀ ಸ್ವರ್ಣಗೌರಿ ಅಮ್ಮನವರ 167ನೇ ವರ್ಷದಜಾತ್ರಾ ಮಹೋತ್ಸವಕ್ಕೆ ಭಾನುವಾರ ವಿದ್ಯುಕ್ತವಾಗಿ ಚಾಲನೆ ದೊರೆಯಿತು.ಆಗಸ್ಟ್ ತಿಂಗಳಲ್ಲಿ ಸೂಲ ಹುಣ್ಣಿಮೆಯ ನಂತರ ಬರುವ ಶುಭದಿನದಂದು ಅಮ್ಮನವರ ಮೂರ್ತಿ ತಯಾರಿಕೆಗೆ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಸಾನ್ನಿಧ್ಯದಲ್ಲಿ ಮೂಲ ಸನ್ನಿದಿಯಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀಗಳ ಸಮ್ಮುಖದಲ್ಲಿ ನೂರಾರು ಭಕ್ತರು ಪಾದಯಾತ್ರೆ ಮೂಲಕ ಪಂಚಲಿಂಗೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಇರುವ ತೋಟಕ್ಕೆ ತೆರಳಿದರು. ಬಳಿಕ ಮೃತ್ತಿಕೆ (ಮಣ್ಣು) ತರುವ ಸ್ಥಳದಲ್ಲಿ ಪದ್ಧತಿ ಪ್ರಕಾರ ಶ್ರೀಗಳ ಪಾದಪೂಜೆ ನೆರವೇರಿಸಿ ಮಣ್ಣನ್ನು ಸಂಗ್ರಹಿಸಲಾಯಿತು. ಅಲ್ಲಿಂದ ಶ್ರೀಗಳ ಸಮ್ಮುಖದಲ್ಲಿ ವಾಪಸ್ ಮೂಲ ಸನ್ನಿಧಿಗೆ ಮೆರವಣಿಗೆ ಮೂಲಕ ಬರಲಾಯಿತು. ಈ ಸಂದರ್ಭದಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಸ್ವಾಮೀಜಿ 167 ವರ್ಷಗಳ ಹಿಂದೆಯೇ ಕೋಡಿಮಠದ ಮಹಾ ತಪಸ್ವಿ ಶಿವಲಿಂಗಜ್ಜಯ್ಯ ಕೋಟಿ ಜಪ ಮಾಡಿ ಸ್ವರ್ಣ ಗೌರಿ ಅಮ್ಮನವರಿಗೆ ಮೂಗುತಿ ಧರಿಸಿ ಆಶೀರ್ವದಿಸಿದ್ದರಂತೆ. ಅಂದಿನಿಂದ ಇಂದಿನವರೆಗೂ ಸಂಪ್ರದಾಯದಂತೆ ಜಾತ್ರಾ ಮಹೋತ್ಸವವನ್ನು ಜಾತಿ, ಮತ ಭೇದಭಾವವಿಲ್ಲದೆ ಆಚರಿಸಿಕೊಂಡು ಬರುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.

ನಾಡಿನ ಎಲ್ಲಾ ಕಡೆ ಗಣಪತಿಯನ್ನು ಹೊತ್ತು ಮೆರೆದರೆ ಇಲ್ಲಿ ಗಣಪನ ಅಮ್ಮ ಗೌರಮ್ಮನಿಗೆ ಆದ್ಯತೆ ಹೆಚ್ಚು. ಗಣಪ ಗೌಣ ಮಾತ್ರ ಶ್ರೀಸ್ವರ್ಣ ಗೌರಿ ಅಮ್ಮನ ವರ ಮೂರ್ತಿಯನ್ನು ಶಿಲ್ಪಿ ಮಧು ಆಚಾರ್‌ ತಯಾರಿಸಲಿದ್ದು, ಭಾದ್ರಪದ ಮಾಸದ ತದಿಗೆ ದಿನದಂದು ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾ ದೇವಾಲಯದಲ್ಲಿ ಕೋಡಿಮಠ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಾಡಾಳು ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.