ಶೃಂಗೇರಿ ಮಠಕ್ಕೆ ಮತ್ತು ಇಲ್ಲಿನ ದೇವಾಲಯಕ್ಕೆ ವಿಶೇಷ ಸಂಬಂಧವಿದೆ.
ಪವಿತ್ರ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನಿರಂತರ: ಶೃಂಗೇರಿಯ ಜಗದ್ಗುರು ಶ್ರೀವಿಧುಶೇಖರ ಭಾರತೀ ಶ್ರೀಗಳು
ಕನ್ನಡಪ್ರಭ ವಾರ್ತೆ ಗೋಕರ್ಣಕಲಿಯೋಗದಲ್ಲಿಯೂ ಧರ್ಮವು ಸುರಕ್ಷಿತವಾಗಿರುವ ಕ್ಷೇತ್ರ ಗೋಕರ್ಣ ಎಂಬುದನ್ನ ಶಂಕರಾಚಾರ್ಯರು ಉಲ್ಲೇಖಿಸಿದ್ದು, ಇದಕ್ಕೆ ಇಲ್ಲಿನ ಪರಂಪರಾಗತವಾಗಿ ಬಂದ ವೇದೋಕ್ತ ದೈವಿಕ ಕಾರ್ಯಗಳು ಕಾರಣ ಈಗಲೂ ಸಹ ಮುಂದುವರಿದಿದ್ದು, ಇಂತಹ ಪವಿತ್ರ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನಿರಂತರವಾಗಿರುತ್ತದೆ ಎಂದು ಶೃಂಗೇರಿಯ ಜಗದ್ಗುರು ಶ್ರೀವಿಧುಶೇಖರ ಭಾರತೀ ಶ್ರೀಗಳು ನುಡಿದರು.
ಸೋಮವಾರ ಸಂಜೆ ಮಹಾಬಲೇಶ್ವರ ಮಂದಿರದಲ್ಲಿ ಭಕ್ತರಿಗೆ ಪೂಜಾ ಸೇವೆಯನ್ನ ಪುನರಾರಂಭ ಹಾಗೂ ನೂತನ ಸೇವಾ ಶಂಕರ ಕೌಂಟರ್ ಲೋಕಾರ್ಪಣೆಗೊಳಿಸಿ ಆರ್ಶೀವಚನ ನೀಡಿದರು.ಶೃಂಗೇರಿ ಮಠಕ್ಕೆ ಮತ್ತು ಇಲ್ಲಿನ ದೇವಾಲಯಕ್ಕೆ ವಿಶೇಷ ಸಂಬಂಧವಿದೆ. ಇದರಿಂದ ಈ ವರ್ಷದಲ್ಲಿ ಎರಡನೇ ಬಾರಿ ಭೇಟಿ ನೀಡಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಭಗವಂತನ ಸೇವೆಯನ್ನ ಶ್ರದ್ಧೆಯಿಂದ ಮಾಡಬೇಕು, ಅಭಿವೃದ್ಧಿ ಎಂದರೆ ಸಾನಿಧ್ಯದ ಮೇಲೆ ಶ್ರದ್ಧೆ ಇರಬೇಕು, ಶ್ರದ್ಧೆಯಿಂದ ಮಾಡಿದ ಕಾರ್ಯವೇ ಅಭಿವೃದ್ಧಿಗೆ ಕಾರಣ ಎಂದ ಶ್ರೀಗಳು, ಮಹಾದೇವನ ಸೇವೆಯಲ್ಲಿ ಎಲ್ಲರೂ ಒಂದಾಗಬೇಕು ಎಂದರು.ದೇವಾಲಯದಲ್ಲಿನ ಹಿಂದೆ ನಡೆದುಕೊಂಡ ಪದ್ದತಿಯ ಕಾರ್ಯಗಳು ಮುಂದುವರಿದುಕೊಂಡು ಹೋಗಬೇಕು. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡುವ ಶಕ್ತಿ ದೇವಾಲಯದ ಆಡಳಿತ ಮಂಡಳಿಯವರಿಗೆ ನೀಡಲಿ ಎಂದರು,
ಶಂಕರಾಚಾರ್ಯರು ಭೇಟಿ ನೀಡಿದ ಎಲ್ಲೆಡೆ ಅವರ ಸನ್ನಿಧಾನವನ್ನ ನಿರ್ಮಿಸಬೇಕು ಎಂಬ ಉದ್ದೇಶದಿಂದ ಆರಂಭಿಸಿದ ಶಂಕರಜ್ಯೋತಿ ಕಾರ್ಯಕ್ರಮವನ್ನ ಶ್ರೀಮಠ ಆರಂಭಿಸಿದ್ದು, ಅದರಂತೆ ಇಲ್ಲಿಯೂ ಶಂಕರಾಚಾರ್ಯರು ತಪ್ಪಸ್ಸು ಗೈದ ಸ್ಥಳವನ್ನ ಅಭಿವೃದ್ಧಿಪಡಿಸುತ್ತೇವೆ ಎಂದರು.ಮಂದಿರದ ಅರ್ಚಕ ವೇ. ಗಣಪತಿ ಹಿರೇ ಪ್ರಸ್ತಾವಿಕವಾಗಿ ಮಾತನಾಡಿದರು. ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ.ಗಣಪತಿ ಹಿರೇ.ವೇ ಪರಮೇಶ್ವರ ರಮಣಿಪ್ರಸಾದ, ವೇ. ಸುಬ್ರಹ್ಮಣ್ಯ ಅಡಿ, ಮಹೇಶ ಹಿರೇಗಂಗೆ , ಅನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ವೇ. ರಾಜಗೋಪಾಲ ಅಡಿ ಹಾಗೂ ಪದಾಧಿಕಾರಿಗಳು, ಸದಸ್ಯರು ಮಂದಿರದ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಹಾಗೂ ಅಪಾರ ಸಂಖ್ಯೆಯಲ್ಲಿ ಶಿಷ್ಯವೃಂದವರು ಉಪಸ್ಥಿತರಿದ್ದರು.
ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ಶ್ರೀಗಳು:ಮಂಗಳವಾರ ಮುಂಜಾನೆ ಶ್ರೀಗಳು ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕರಾದ ವೇ. ವಿಶ್ವೇಶ್ವರ ಅಡಿ ಪೂಜಾ ಕೈಂಕರ್ಯ ನೆರವೇರಿಸಿದರು. ಅರ್ಚಕರಾದ ವೇ. ಗಣಪತಿ ಹಿರೇ, ವೇ.ಕೃಷ್ಣ ಅಡಿ, ವೇ. ರಾಜಗೋಪಾಲ ಅಡಿ, ವೈದಿಕ ವೃಂದವರು ಸಹಕರಿಸಿದರು. ಇದಕ್ಕೊ ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ಶ್ರೀಗಳು ಪೂಜೆ ನೆರವೇರಿಸಿದರು. ಇವೆರಡು ದೇವಾಲಯದ ಭೇಟಿ ಬಳಿಕ ತಾಮ್ರಗೌರಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದೇ ವೇಳೆ ಮಂದಿರದ ಹೊರಪ್ರಾಕಾರದ ನೆಲಹಾಸು ಹಾಗೂ ಇತರೆ ಅಭಿವೃದ್ದಿ ಕಾರ್ಯಕ್ಕೆ ಶ್ರೀಗಳು ಶುಭಾರಂಭಗೊಳಿಸಿದರು.ಮಧ್ಯಾಹ್ನ ಭಿಮಕೊಂಡ ಹಾಗೂ ಗೋಗರ್ಭಕ್ಕೆ ಭೇಟಿ ನೀಡಿ ಬಳಿಕ ಮೇಲಿನಕೇರಿಯಲ್ಲಿರುವ ಶಂಕರ ಮಠಕ್ಕೆ ಚಿತ್ತೈಸಿ ಆರ್ಯವೈಶ್ಯ ಸಮಾಜದವರಿಂದ ಶ್ರೀಗಳಿಗೆ ಭೀಕ್ಷಾ ಸೇವೆ ನೆರವೇರಿತು. ಶೃಂಗೇರಿ ಶಾರದಾಂಬ ಮಂದಿರಕ್ಕೆ ಭೇಟಿ ನೀಡಿದರು.