ಮೌಲ್ಯಯುತ ಬದುಕು ಪ್ರತಿಯೊಬ್ಬರ ಕರ್ತವ್ಯ: ಕೊಪ್ಪಳ

| Published : Nov 15 2024, 12:37 AM IST

ಸಾರಾಂಶ

ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿದ್ದು ಯುವ ಸಮೂಹವು ಸಹ ಜೀವನ ಆರ್ಥಿಕವಾಗಿ ಸದೃಢವಾಗಿರಬೇಕು

ಗಜೇಂದ್ರಗಡ: ಹಣದಿಂದ ಎಲ್ಲವು ಎನ್ನುವ ಮನಸ್ಥಿತಿಯಿಂದ ಸಮಾಜ ಹೊರಬಂದು ಮೌಲ್ಯಯುತ ಬದುಕು ರೂಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕೊಪ್ಪಳ ಜಿಲ್ಲಾ ಮುಕ್ತಿ ವಾಹಿನಿ ಆತ್ಮಕಲ್ಯಾಣ ಅಭಿಯಾನದ ಸಂಸ್ಥಾಪಕ ಅಧ್ಯಕ್ಷ ಸಿದ್ದರಾಮೇಶ್ವರ ಕೊಪ್ಪಳ ಹೇಳಿದರು.

ಪಟ್ಟಣದ ಸೇವಾಲಾಲ್ ಬಡಾವಣೆಯಲ್ಲಿ ಮುಕ್ತಿ ವಾಹಿನಿ ಆತ್ಮ ಕಲ್ಯಾಣ ಅಭಿಯಾನದಿಂದ ನಡೆದ ಆಲಯದೊಳ್ ಅರವಿನಾಲಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಹಣ, ಆಸ್ತಿ, ಬಂಗಾರವನ್ನು ನಿಜವಾದ ಆಸ್ತಿ ಎಂದು ಭಾವಿಸಿರುವ ಮನುಷ್ಯನು ತೃಪ್ತಿ ಇಲ್ಲದ ಬದುಕನ್ನು ಕಟ್ಟಿಕೊಳ್ಳಲು ಪರದಾಡುತ್ತಿದ್ದೇನೆ. ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿದ್ದು ಯುವ ಸಮೂಹವು ಸಹ ಜೀವನ ಆರ್ಥಿಕವಾಗಿ ಸದೃಢವಾಗಿರಬೇಕು ಎಂದು ಬಿಡುವಿಲ್ಲದೆ ಓಡುತ್ತಿದ್ದಾನೆ. ಹೀಗಾಗಿ ನೆಮ್ಮದಿಯ ಜೀವನಕ್ಕೆ ಹಣವೇ ಎಲ್ಲವು ಅಲ್ಲ. ಮನಸ್ಸಿಗೆ ಶಾಂತಿ, ನೆಮ್ಮದಿ ಇರಬೇಕಾದರೆ ಮೌಲ್ಯಯುತ ಜೀವನ ಅಳವಡಿಸಿಕೊಳ್ಳಬೇಕು ಎನ್ನುವುದನ್ನು ನಾವೆಲ್ಲರು ಅರ್ಥ ಮಾಡಿಕೊಳ್ಳಬೇಕಿದೆ. ಈ ದೆಸೆಯಲ್ಲಿ ಮುಕ್ತಿ ವಾಹಿನಿ ಆತ್ಮ ಕಲ್ಯಾಣ ಅಭಿಯಾನದಿಂದ ಮೌಲ್ಯ ಹಾಗೂ ಸಂಸ್ಕಾರಯುತ ಜೀವನದ ಅರ್ಥ ಜಾಗೃತಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದಲ್ಲಿ ಮೌಲ್ಯಯುತ ಜೀವನ ನಡೆಸುತ್ತಿರುವ ಸಾಧಕರನ್ನು ಗುರುತಿಸಿ ಸನ್ಮಾನ ಹಾಗೂ ಪ್ರೋತ್ಸಾಹ ನೀಡುವ ಕಾರ್ಯ ನಡೆಸುತ್ತಿದೆ ಎಂದರು.

ಈ ವೇಳೆ ಡಾಕ್ಟರೇಟ್ ಪಡೆದಿರುವ ಬಿ.ಕೆ. ಮಾದಿ ಅವರನ್ನು ಮುಕ್ತಿ ವಾಹಿನಿ ಆತ್ಮ ಕಲ್ಯಾಣ ಅಭಿಯಾನದಿಂದ ಸನ್ಮಾನಿಸಲಾಯಿತು.

ಮುಖ್ಯ ಕಾರ್ಯನಿರ್ವಾಹಕ ಶರಣಪ್ಪ ದೇವರಮನೆ, ಮಂಜುನಾಥ, ತ್ರಿಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕ ಶರಣಪ್ಪ ಚಲವಾದಿ, ವಕೀಲ ಚಂದ್ರಶೇಖರ್ ಓಜನಹಳ್ಳಿ, ಗದಗ ಜಿಲ್ಲಾ ಪತ್ರಕರ್ತರ ಮುತ್ತು ಭಿಕ್ಷಾವತ್ತಿಮಠ, ನೀಲಪ್ಪ ಕವಳಕೇರಿ, ಮಾರುತಿ ಬ್ಯಾಡಗೌಡರ್ ಸೇರಿದಂತೆ ಇತರರು ಇದ್ದರು.