ಕುಸ್ತಿ ಪಟುಗಳಿಗೆ ಪ್ರೋತ್ಸಾಹ ಅಗತ್ಯ: ಕೃಷ್ಣಪ್ಪ

| Published : Dec 29 2024, 01:19 AM IST

ಸಾರಾಂಶ

ಕನಕಪುರ: ಯುವಕರ ನಿರ್ಲಕ್ಷ್ಯ ಹಾಗೂ ಪ್ರೋತ್ಸಾಹದ ಕೊರತೆಯಿಂದ ಕುಸ್ತಿ ಪಟುಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಪೈಲ್ವಾನ್ ಮಿಠಾಯಿ ಕೃಷ್ಣಪ್ಪ ವಿಷಾದಿಸಿದರು.

ಕನಕಪುರ: ಯುವಕರ ನಿರ್ಲಕ್ಷ್ಯ ಹಾಗೂ ಪ್ರೋತ್ಸಾಹದ ಕೊರತೆಯಿಂದ ಕುಸ್ತಿ ಪಟುಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಪೈಲ್ವಾನ್ ಮಿಠಾಯಿ ಕೃಷ್ಣಪ್ಪ ವಿಷಾದಿಸಿದರು.

ನಗರದ ಚಾವಡಿ ಗರಡಿಯಲ್ಲಿ ಹಮ್ಮಿಕೊಂಡಿದ್ದ ಮಟ್ಟಿ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರೋಗ್ಯದ ದೃಷ್ಟಿಯಿಂದಲೂ ಕುಸ್ತಿ ಒಳ್ಳೆಯ ಕ್ರೀಡೆ. ಇದು ದೇಹವನ್ನು ಲಘುವಾಗಿಸಿ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಗರಡಿ ಮನೆಯಲ್ಲಿ ಸಿಗುವ ಆನಂದ ಆಧುನಿಕ ಜಿಮ್‌ಗಳಲ್ಲಿ ಸಿಗಲು ಸಾಧ್ಯವೇ ಇಲ್ಲ. ಇಲ್ಲೊಂದು ಬಗೆಯ ಆಯಸ್ಕಾಂತದ ಗುಣವಿದೆ. ಮಟ್ಟಿಯ (ಅರಿಶಿಣ, ಕುಂಕುಮ, ತುಪ್ಪ ಮಿಶ್ರಿತ ಮಣ್ಣು) ಘಮಲಿನಲ್ಲಿ ಮಿಂದೆದ್ದರೆ ಸಾಕು ಮನಸ್ಸಿಗೆ ಹೊಸ ಹುರುಪು ಬರುತ್ತದೆ. ಹಾಗೆ ಇದು ಚರ್ಮವ್ಯಾಧಿಯನ್ನೂ ದೂರ ಇಡುತ್ತದೆ ಎಂದು ತಿಳಿಸಿದರು.

ಪೈಲ್ವಾನ್ ಚನ್ನಕೃಷ್ಣಪ್ಪ ಮಾತನಾಡಿ, ಈಗಲೂ ವಯಸ್ಸಾದವರು ಬೆಳಗಿನ ಜಾವ ಬಂದು ಯುವಕರೊಂದಿಗೆ ತಮ್ಮ ಕೈಲಾದಷ್ಟು ಕಸರತ್ತು ನಡೆಸುತ್ತಾರೆ. ಬೇಸರವೆನಿಸಿದಾಗ ಕಸರತ್ತು ನಡೆಸಿದ ಮನಸ್ಸಿನ ನೋವುಗಳೆಲ್ಲ ಕ್ಷಣಾರ್ಧದಲ್ಲಿ ಮರೆಯಾಗುತ್ತದೆ. ಯುವಕರು ಇಂದು ಕುಸ್ತಿ ಕಲೆ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಸರ್ಕಾರಗಳು ಕೂಡ ಕುಸ್ತಿ ಕಲೆ ಅಭಿವೃದ್ಧಿಗೆ ಯೋಜನೆಯನ್ನೂ ಹಮ್ಮಿಕೊಳ್ಳುವಂತೆ ಮನವಿ ಮಾಡಿದರು.

ಪೈಲ್ವಾನ್ ಹಾಗೂ ರಾಜ್ಯ ಕುಸ್ತಿಪಟುಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಮಾತನಾಡಿ, ಕುಸ್ತಿಪಟುಗಳು ದಿನನಿತ್ಯದ ಆಹಾರ ಸೇವನೆಗೆ ವಿಶೇಷ ಮಹತ್ವ ನೀಡಬೇಕು. ಬಾದಾಮಿ ಹಾಲು, ರಾಗಿಮುದ್ದೆ, ಬೆಲ್ಲ ಮತ್ತು ರವೆಯಿಂದ ಮಾಡಿದ ಸಿಹಿ ತಿನಿಸು, ಬೆಣ್ಣೆ, ತುಪ್ಪ ಸೇವಿಸಬೇಕು ಎಂದರು.

ಸುಮಾರು 80ರಿಂದ 100 ಯುವಕರು ಬರುತ್ತಿದ್ದ ಗರಡಿ ಮನೆಯಲ್ಲಿ ಹಿಂದಿದ್ದ ವೈಭವ ಈಗಿಲ್ಲ. ಆ ಕಾಲದಲ್ಲಿ ಸ್ಪರ್ಧಿಗಳ ನಡುವಿನ ಜಟಾಪಟಿ ಕಣ್ಣಿಗೆ ಮುದ ನೀಡುತ್ತಿತ್ತು. ಗರಡಿ ಮನೆಯೆಂದರೆ ಅಭಿಮಾನ, ಗೌರವ ಇತ್ತು. ಆದರೆ ಇಂದು ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮುಗಿಬಿದ್ದು, ಕುಸ್ತಿ ಕಲೆ ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಟ್ಟಿ ಪೂಜೆಯಲ್ಲಿ ಪೈಲ್ವಾನ್‌ಗಳಾದ ರಾಜಣ್ಣ, ಮಂಜಣ್ಣ, ಗುರು, ಭಗತ್ ರಾಮ್, ಶಿವು, ಕುಮಾರ್, ರಾಜು, ಗೌರಿ ಶಂಕರ್, ಅನಿಲ್, ಮಣಿಕಂಠ, ರಾಘು, ಭೀಮಣ್ಣ, ಶಿವು, ದರ್ಶನ್, ಮಹೇಶ್, ಕಿರಣ್, ಲೋಕೇಶ್, ಚಂದು, ರಾಕೇಶ್, ಹರೀಶ್ ಇತರರು ಭಾಗವಹಿಸಿದ್ದರು.

ಕೆ ಕೆ ಪಿ ಸುದ್ದಿ 3::

ಕನಕಪುರದ ಚಾವಡಿ ಗರಡಿಯಲ್ಲಿ ವಾರ್ಷಿಕ ಮಟ್ಟಿ ಪೂಜೆ ನೆರವೇರಿಸಲಾಯಿತು.