ಡಿ.3ರಂದು ನಡೆಯುವ ಹನುಮ ಜಯಂತಿ, ಸಂಕೀರ್ತನ ಯಾತ್ರೆ ಜೊತೆಗೆ ಡಿ.2ರಂದು ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಮಂಡ್ಯ, ಮೈಸೂರು, ಚಾಮರಾಜ ನಗರ, ಉಡುಪಿ, ಮಂಗಳೂರು ದಕ್ಷಿಣ ಕನ್ನಡ ಹಾಗೂ ಹಾಸನ ಕುಸ್ತಿ ಪಟುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಹನುಮ ಜಯಂತಿ ನಿಮಿತ್ತ ಹಿಂದೂ ಜಾಗರಣ ವೇದಿಕೆ ಕಾರ್ಯರ್ಕತರ ನೇತೃತ್ವದಲ್ಲಿ ಶ್ರೀಮೂಡಲ ಬಾಗಿಲು ಆಂಜನೇಯಸ್ವಾಮಿ ಕುಸ್ತಿ ಬಳಗದಿಂದ ಮೈಸೂರು ವಿಭಾಗ ಮಟ್ಟದ ಮಹಿಳೆ ಹಾಗೂ ಪುರುಷರ ಪಾಯಿಂಟ್ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕುಸ್ತಿ ಸಮಿತಿ ಸದಸ್ಯರು ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.3ರಂದು ನಡೆಯುವ ಹನುಮ ಜಯಂತಿ, ಸಂಕೀರ್ತನ ಯಾತ್ರೆ ಜೊತೆಗೆ ಡಿ.2ರಂದು ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಮಂಡ್ಯ, ಮೈಸೂರು, ಚಾಮರಾಜ ನಗರ, ಉಡುಪಿ, ಮಂಗಳೂರು ದಕ್ಷಿಣ ಕನ್ನಡ ಹಾಗೂ ಹಾಸನ ಕುಸ್ತಿ ಪಟುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.

ಪುರುಷ ಕುಸ್ತಿ ಪಂದ್ಯಾವಳಿಯಲ್ಲಿ ಪಟುಗಳ ತೂಕ ಹಾಗೂ ಪ್ರಶಸ್ತಿಗಳ ವಿವರ 57, 61,63 ಕೆ.ಜಿ. ವಿಭಾಗದಲ್ಲಿ ಕುಸ್ತಿಗಳನ್ನು ಬಿಡಲಾಗುತ್ತದೆ. ನಂತರ 70 ಕೆ.ಜಿ ವಿಭಾಗದ ಶ್ರೀರಂಗ ಕಿಶೋರ್ 2025, 71+ ಕೆ.ಜಿಯ ಶ್ರೀರಂಗ ಕುಮಾರ್ 2025ರ ಪ್ರಶಸ್ತಿಗಳ ಜೊತೆ ನಗದು, 79 ಕೆ.ಜಿ ವಿಭಾಗದಲ್ಲಿ ಶ್ರೀರಂಗ ಕೆಸರಿ 2025, 79+ ಕೆಜಿ ವಿಭಾಗದಲ್ಲಿ ರಣಧೀರ ಕಂಠೀರವ 2025ರ ಪ್ರಶಸ್ತಿಗಳ ಜೊತೆ ನಗದು ನೀಡಲಾಗುವುದು ಎಂದರು.

ಮಹಿಳೆಯರಿಗೆ ಓಪನ್ ಪೈಟ್:

50 ಕೆ.ಜಿ ವಿಭಾಗದಲ್ಲಿ ಮಹಾರಾಣಿ ಲಕ್ಷ್ಮಮ್ಮಣ್ಣಿ ಅಮ್ಮನವರ ಪ್ರಶಸ್ತಿ 2025, 37 ಕೆ.ಜಿ ವಿಭಾಗದಲ್ಲಿ ರಾಜಮಾತೆ ಕೆಂಪಮ್ಮಣ್ಣಿ ದೇವಿ ಪ್ರಶಸ್ತಿ 2025 ಹಾಗೂ 61 ಕೆ.ಜಿ ವಿಭಾಗದಲ್ಲಿ ಒನಕೆ ಓಬವ್ವ 2025ರ ಮೂರು ವಿಭಾಗದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿದ್ದು, ಪಂದ್ಯಾವಳಿಯಲ್ಲಿ ವಿಜೇತರಿಗೆ ಪ್ರಶಸ್ತಿ ಜೊತೆ ನಗದು ನೀಡಲಾಗುತ್ತದೆ ಎಂದರು.

ಭಾಗವಹಿಸುವ ಕುಸ್ತಿ ಪಟುಗಳು ಡಿ.2ರ ಬೆಳಗ್ಗೆ 8 ಗಂಟೆಗೆ ವೇದಿಕೆ ಬಳಿಯಲ್ಲಿ ತಮ್ಮ ತೂಕವನ್ನು ನೀಡಿ ತಮ್ಮ ಹೆಸರನ್ನು ಆಯೋಜಕರ ಬಳಿ ನೊಂದಾಯಿಸಬೇಕು. ಮೊದಲು ಬಂದವರಿಗೆ ಮೊದಲ ಆಧ್ಯತೆ. ನಂತರ ಬಂದವರಿಗೆ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಕುಸ್ತಿ ಆಯೋಜಕರು ತಿಳಿಸಿದರು.

ಪೈನಲ್ ತಲುಪಿದ ಕುಸ್ತಿ ಪಟುಗಳಿಗೆ ಡಿ.3ರಂದು ಸಮಯ ನಿಗಧಿ ಮಾಡಿ ಪೈನಲ್ ಪಂದ್ಯಾವಳಿ ಕುಸ್ತಿಗೆ ಬಿಡಲಾಗುವುದು. ಇದರ ಜೊತೆ ನಾಡ ಕುಸ್ತಿಗಳು ಸಹ ನಡೆಯಲಿವೆ ಎಂದರು.

ಕುಸ್ತಿ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ಕುಸ್ತಿ ಪಟುಗಳು ಭಾಗವಹಿಸಲಿದ್ದಾರೆ. ಕುಸ್ತಿ ಪಟುಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಜೊತೆಗೆ ವಸತಿ, ಊಟದ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳ ಕಲ್ಪಿಸಲಾಗುತ್ತದೆ. ಈ ಪಂದ್ಯಾವಳಿ ಹೆಸರಾಂತ ಪೈಲ್ವಾನ್ ಶ್ರೀನಿವಾಸೇಗೌಡ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಯೋಜಕ ಪೈಲ್ವಾನ್‌ರಾದ ವಸ್ತಾದ್ ಸುರೇಶ್, ಗಂಜಾಂ ಬಾಲು, ಕಿರಂಗೂರು ಸುರೇಶ್, ರಾಘು ಸೇರಿದಂತೆ ಇತರರಿದ್ದರು. ಇದೇ ವೇಳೆ ಕುಸ್ತಿ ಪಂದ್ಯಾವಳಿ ಪೋಸ್ಟರ್‌ ಬಿಡುಗಡೆಗೊಳಿಸಿದರು.