ಕಾವೇರಿ ನದಿ ನೀರು ಹಂಚಿಕೆ ಅವೈಜ್ಞಾನಿಕವಾಗಿದ್ದು ನದಿ ನೀರಿನ ವಾಸ್ತವ ಅಂಶವನ್ನು ಸಂಗ್ರಹಿಸಿ ಸುಪ್ರೀಂ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಲು ತಯಾರಿ ನಡೆಸಲಾಗಿದೆ ಎಂದು ಕಾವೇರಿ ನದಿ ರಕ್ಷಣಾ ಸಮಿತಿ ಅಧ್ಯಕ್ಷ ಎಚ್ ಕೆ ರಾಮು ತಿಳಿಸಿದ್ದಾರೆ.

ಕುಶಾಲನಗರ: ಕಾವೇರಿ ನದಿ ನೀರು ಹಂಚಿಕೆ ಅವೈಜ್ಞಾನಿಕವಾಗಿದ್ದು ನದಿ ನೀರಿನ ವಾಸ್ತವ ಅಂಶವನ್ನು ಸಂಗ್ರಹಿಸಿ ಸುಪ್ರೀಂ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಲು ತಯಾರಿ ನಡೆಸಲಾಗಿದೆ ಎಂದು ಕಾವೇರಿ ನದಿ ರಕ್ಷಣಾ ಸಮಿತಿ ಅಧ್ಯಕ್ಷ ಎಚ್ ಕೆ ರಾಮು ತಿಳಿಸಿದ್ದಾರೆ.

ಕುಶಾಲನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಗೆ ಸಮಿತಿಯ ನೇತೃತ್ವದಲ್ಲಿ ಎರಡು ದಿನಗಳಿಂದ ತಜ್ಞರ ಸಮಿತಿ ಭೇಟಿ ನೀಡಿ ಸಮಗ್ರ ಮಾಹಿತಿ ಕಲೆಹಾಕಿದೆ. ಅಲ್ಲದೆ ಮೈಸೂರು ಮಂಡ್ಯ ಭಾಗಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಅಂಕಿ ಅಂಶಗಳೊಂದಿಗೆ ಸದ್ಯದಲ್ಲಿಯೇ ಅರ್ಜಿಯನ್ನು ಕೋರ್ಟಿಗೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ಜಿಲ್ಲೆಗೆ ಭೇಟಿ ನೀಡಿದ ನಿಯೋಗದಲ್ಲಿ ಪಾಲ್ಗೊಂಡಿದ್ದ ಆದಿಚುಂಚನಗಿರಿ ಮೈಸೂರು ಶಾಖಾ ಮಠಾಧೀಶ ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಕಾವೇರಿ ನದಿ ಹರಿಯುವ ಸ್ಥಳಗಳಿಗೆ ಭೇಟಿ ನೀಡಿ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಅವಲೋಕಿಸಿ ಕಾವೇರಿ ನದಿ ರಕ್ಷಣಾ ಸಮಿತಿ ಸುಪ್ರೀಂಕೋರ್ಟಿಗೆ ಸಮಗ್ರ ಮಾಹಿತಿ ನೀಡಲಿದೆ ಎಂದು ಹೇಳಿದರು.

ತಜ್ಞರ ಸಮಿತಿಯ ಮೂಲಕ ಕಾವೇರಿ ಜಲಾನಯನ ಪ್ರದೇಶಗಳ ರೈತರ ಸ್ಥಿತಿಗತಿ ಮತ್ತು ಅವರ ಸಮಸ್ಯೆಗಳ ಬಗ್ಗೆ ಅವಲೋಕಿಸಿ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಯತ್ನ ನಡೆಯಲಿದೆ ಎಂದರು. ಕೊಡಗು ಜಿಲ್ಲೆಗೆ ಭೇಟಿ ನೀಡಿದ ತಂಡ ತಲಕಾವೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ನಂತರ ಜಲಾನಯನ ಪ್ರದೇಶಗಳಲ್ಲಿ ಮತ್ತು ಹಾರಂಗಿ ಅಣೆಕಟ್ಟು ಪ್ರದೇಶಗಳಲ್ಲಿ ವೀಕ್ಷಣೆ ನಡೆಸಿದೆ ಎಂದು ಹೇಳಿದರು.

ತಂಡದಲ್ಲಿ ಉಪಸ್ಥಿತರಿದ್ದ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಸಮಿತಿ ಹಿರಿಯ ನಿವೃತ್ತ ಅಧಿಕಾರಿಗಳು ತಜ್ಞರು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಕಾವೇರಿ ನದಿ ಜಲಾನಯನ ಪ್ರದೇಶಗಳಲ್ಲಿ ಪ್ರವಾಸ ಮಾಡಿ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸುತ್ತದೆ. ನಂತರ ಸುಪ್ರೀಂಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸುತ್ತದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಕಾವೇರಿ ನೀರಿನ ವ್ಯಾಜ್ಯದಿಂದ ಕುಡಿಯುವ ನೀರಿಗೆ ಕೂಡ ಹಾಹಾಕಾರ ಉಂಟಾಗಿದೆ ಎಂದು ಸ್ವಾಮೀಜಿ ಹೇಳಿದರು. ಮೇಕೆದಾಟು ಯೋಜನೆ ಕೂಡಲೇ ಜಾರಿಗೆ ಬರಬೇಕು , ತಮಿಳುನಾಡು ಸರ್ಕಾರ ಸೇರಿದಂತೆ ಕೇಂದ್ರ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಬೇಕು. ಕಾವೇರಿ ವ್ಯಾಜ್ಯದಲ್ಲಿ ಹಳೆಯ ತೀರ್ಮಾನಗಳನ್ನು ಒಪ್ಪಲು ಸಾಧ್ಯವಿಲ್ಲ. ಇದರಿಂದ ರಾಜ್ಯಕ್ಕೆ ರಾಜ್ಯದ ರೈತರಿಗೆ ನೀರಿನ ಕಂಟಕ ಉಂಟಾಗಿದೆ ಎಂದರು.

ಬೆಟ್ಟದಪುರ ಕನ್ನಡ ಮಠಾಧೀಶರಾದ ಶ್ರೀ ಚನ್ನಬಸವ ಸ್ವಾಮೀಜಿ ಸಮಿತಿಯ ಹೋರಾಟಕ್ಕೆ ಯಶಸ್ಸು ಕೋರಿದರು. ಹಿರಿಯ ಸಾಹಿತಿ, ಪ್ರಧಾನ ಗುರುದತ್ ಮಾತನಾಡಿ ರಾಜ್ಯದ ಪರವಾಗಿ ಸಮರ್ಪಕ ವಾದವಾಗದೆ ನೀರಿನ ಪಾಲಿನಲ್ಲಿ ಅನ್ಯಾಯ ಉಂಟಾಗಿದೆ ಎಂದರಲ್ಲದೆ ರಾಜಕೀಯ ಪಕ್ಷಗಳು ರಾಜ್ಯದ ಹಿತ ಕಾಪಾಡುವಲ್ಲಿ ವಿಫಲವಾಗಿವೆ ಎಂದರು.

ಕಾವೇರಿ ನದಿ ರಕ್ಷಣಾ ಸಮಿತಿಯ ಪ್ರಮುಖರು ಕುಶಾಲನಗರದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕರಾದ ಎಂ ಎನ್ ಚಂದ್ರಮೋಹನ್ ಅವರನ್ನು ಗೌರವಿಸಿದರು.ಸೋಮವಾರ ಜಿಲ್ಲೆಗೆ ಭೇಟಿ ನೀಡಿದ 50ಕ್ಕೂ ಅಧಿಕ ಸಂಘ ಸಂಸ್ಥೆಗಳ ಪ್ರಮುಖರು ಮಂಗಳವಾರ ಬೆಳಗ್ಗೆ ತಲಕಾವೇರಿ ಕ್ಷೇತ್ರಕ್ಕೆ ತೆರಳಿ ಪೂಜೆ ನೆರವೇರಿಸಿ ರಾಜ್ಯದ ಸುಭಿಕ್ಷೆಗೆ ಪ್ರಾರ್ಥನೆ ಸಲ್ಲಿಸಿದರು.

ವಿವಿಧ ಶಾಖಾ ಮಠಾಧೀಶರು, ಸಮಿತಿಯ ಕಾರ್ಯಾಧ್ಯಕ್ಷ ಕೆ ಟಿ ಚಂದ್ರು, ಖಜಾಂಚಿ ಸಿ ಜಗದೀಶ್, ಉಪಾಧ್ಯಕ್ಷರಾದ ಪ್ರಶಾಂತ್, ಅಂದಾನಪ್ಪ ಮಾಲತೇಶ್ ಎಚ್ ಎನ್ ರಾಜು, ಅರುಣ, ಮಾಜಿ ಮೇಯರ್ ಪ್ರಕಾಶ್ ಮತ್ತಿತರರು ಇದ್ದರು.