ಸಾರಾಂಶ
ಶಿರಸಿ: ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಎಚ್.ಎನ್. ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗ ರಚಿಸಿದ್ದು, ಸಮೀಕ್ಷೆಗೆ ಬಂದ ಸಂದರ್ಭದಲ್ಲಿ ಉಪ ಜಾತಿಯಲ್ಲಿ ಚನ್ನಯ್ಯ ಹೆಸರು, ಬಲಗೈ ಗುಂಪು ಎಂದು ಬರೆಸಬೇಕು ಎಂದು ಅಖಿಲ ಕರ್ನಾಟಕ ಚನ್ನಯ್ಯ ಅಭಿವೃದ್ಧಿ (ಬಲಗೈ) ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ದೊಡ್ಮನಿ ಹೇಳಿದರು.
ಅವರು ಭಾನುವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಯೋಗವು ಸದ್ಯದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸುವ ಸಲುವಾಗಿ ಪರಿಶಿಷ್ಟ ಜಾತಿಯ ೧೦೧ ಜಾತಿಗಳನ್ನು ಪ್ರತ್ಯೇಕವಾಗಿ ಜಾತಿ ಜನಸಂಖ್ಯೆಯನ್ನು ಗಣತಿ ಮಾಡಿ ಆ ಮೂಲಕ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಕಾರ್ಯ ಪ್ರವೃತ್ತವಾಗಿದೆ. ಸಂವಿಧಾನವು ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಶೇ.೧೭ ಮೀಸಲಾತಿಯನ್ನು ೧೦೧ ಜಾತಿಗಳಿಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಾತಿಗೆ ಹೆಚ್ಚಿಗೆ ಪಾಲನ್ನು ನೀಡಲಾಗುವುದು ಮತ್ತು ಜಾತಿಗಳಲ್ಲಿ ಎಡಗೈ ಮತ್ತು ಬಲಗೈ ಎಂದು ವಿಂಗಡಿಸಿ ಮೀಸಲು ಪಾಲನ್ನು ಹಂಚುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಚನ್ನಯ್ಯ ಜಾತಿಯವರು ಸರಿಯಾದ ಮಾಹಿತಿಯನ್ನು ನೀಡುವುದು ತೀರಾ ಅವಶ್ಯಕತೆ ಇದೆ ಎಂದರು.ಚನ್ನಯ್ಯ ಜಾತಿಯವರು ಜಾತಿ ಪ್ರಮಾಣಪತ್ರ ಪಡೆಯುವಾಗ ಶಾಲಾ ದಾಖಲಾತಿ ತಪ್ಪಿನಿಂದಾಗಿ ಹರಿಜನ, ಹೊಲೆಯ, ಮಾದಿಗ, ಆದಿ ಕರ್ನಾಟಕ, ಆದಿದ್ರಾವಿಡ, ಆದಿಜಾಂಬವ, ಆದಿ ಆಂಧ್ರ ಜಾತಿ ಪ್ರಮಾಣಪತ್ರಗಳನ್ನು ಪಡೆಯಲಾಗಿದೆ. ಹೀಗಾಗಿ ಸಮೀಕ್ಷೆಗಾಗಿ ಗಣತಿದಾರರು ತಮ್ಮ ಮನೆಗಳಿಗೆ ಬಂದಾಗ ನಿಮ್ಮ ಕುಟುಂಬದ ಎಲ್ಲ ಸದಸ್ಯರ ಹೆಸರನ್ನು ಸರಿಯಾಗಿ ನಮೂದಿಸಿ ಜಾತಿ ಕಾಲಂನ ಉಪಜಾತಿ ಕಾಲಂನಲ್ಲಿ ಚನ್ನಯ್ಯ ಜಾತಿ ಹಾಗೂ ಬಲಗೈ ಗುಂಪು ಎಂದು ಹೇಳಿ ಬರೆಯಿಸಿ ಖಾತ್ರಿ ಪಡಿಸಿಕೊಳ್ಳಬೇಕು. ಒಂದು ವೇಳೆ ನಾವು ಗಣತಿದಾರರಿಗೆ ಸರಿಯಾದ ಮಾಹಿತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಚನ್ನಯ್ಯ ಜಾತಿಯವರು ಶಿಕ್ಷಣ, ಉದ್ಯೋಗ, ಇನ್ನಿತರೆ ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಬಸವಂತಪ್ಪ ಕೋಟೆ ಸೊರಬ, ಉಪಾಧ್ಯಕ್ಷ ರಂಗಪ್ಪ, ಪ್ರಮುಖರಾದ ಎಚ್.ಕೆ. ಶಿವಾನಂದ, ಹೊಳೆಲಿಂಗ ಬಿ.ಎಚ್., ಈರಪ್ಪ ಭಾಶಿ, ಮಂಜಪ್ಪ ಚನ್ನಯ್ಯ, ಷಣ್ಮುಖಪ್ಪ ತಳವಾರ, ಸದಾನಂದ ತಿಗಣಿ, ಶಿವರಾಮ ಬೆಳ್ಳಟ್ಟೆ, ಆನಂದಪ್ಪ ಚನ್ನಯ್ಯ ಇದ್ದರು.