ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಆಯೋಗದ ಶಿಫಾರಸ್ಸಿನಂತೆ ಜಾತಿ ಸಮೀಕ್ಷೆ ನಡೆಸುವ ಸಮಯದಲ್ಲಿ ಆದಿ ಕರ್ನಾಟಕ ‘ಹೊಲಯ’ ಎಂದು ಬರೆಸುವಂತೆ ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್ಸ್ ನ ಅಧ್ಯಕ್ಷ ಎಚ್.ಜಿ.ಗಂಗರಾಜು ಹೇಳಿದರು.ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಯಲ್ಲಿ 101 ಜಾತಿಯನ್ನು ಗುರುತಿಸಿದೆ. ಅದರಂತೆ ಹೊಲಯ, ಬಲಗೈ, ಛಲವಾದಿ, ಮಹರ್ ಗುಂಪಿಗೆ ಸಂಬಂಧಿಸಿದ 37 ಜಾತಿಗಳು ‘ಹೊಲಯ’ ಜಾತಿಗೆ ಸೇರಿದೆ. ಆದ್ದರಿಂದ ಜಾತಿ ಗಣತಿ ವೇಳೆ ನಮ್ಮ ಮೂಲ ಉಪಜಾತಿಯಾದ ‘ಹೊಲಯ’ ಎಂದೇ ಕಡ್ಡಾಯವಾಗಿ ಬರೆಸುವಂತೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಎಸ್‌ಸಿ ಬಲಗೈ ಜನಾಂಗದ ಬಹುತೇಕ ಹಿರಿಯರು, ಮಹಿಳೆಯರು, ವಿದ್ಯಾರ್ಥಿಗಳು, ಯುವಕ-ಯುವತಿಯರು, ನೌಕರರು, ಕಾರ್ಮಿಕರು ತಮ್ಮ ಮೂಲ ಜಾತಿ ‘ಹೊಲಯ’ ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳಲು ಇಂದಿಗೂ ಮುಜುಗರಪಡುತ್ತಾರೆ. ‘ಹೊಲಯ’ ಎಂಬುದು ಅಸಂವಿಧಾನಿಕ ಪದ ಎಂದು ಭಾವಿಸಿದ್ದಾರೆ. ಆದರೆ, ‘ಹೊಲಯ’ ಎಂಬ ಪದದ ನಿಜವಾದ ಅರ್ಥ ಹೊಲದ ಒಡೆಯ ಎನ್ನುವುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಿದೆ ಎಂದರು.‘ಹೊಲಯ’ ಎಂಬುದು ಭಾರತೀಯ ಸಂವಿಧಾನದಲ್ಲಿ ದಾಖಲಾಗಿರುವ ಜಾತಿಯ ಪದ. ಜಾತಿ ಗಣತಿ ವೇಳೆ ಮೂಲ-ಉಪ ಜಾತಿಯ ಕಲಂನಲ್ಲಿ ‘ಹೊಲಯ’ ಎಂದೇ ಕಡ್ಡಾಯವಾಗಿ ಬರೆಸಬೇಕು. ನಾವು ಹೊಲಯ, ಬಲಗೈ, ಛಲವಾದಿ ಜಾತಿಗೆ ಸೇರಿದವರು ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳದೆ ಬೇರೆ ಜಾತಿಯವರ ಮನೆ ಬಾಡಿಗೆಗೆ ಅಥವಾ ಉದ್ಯೋಗ ಪಡೆದು ಜೀವನ ನಡೆಸುತ್ತಿದ್ದೇವೆ. ಅಂತಹವರು ಯಾವುದಕ್ಕೂ ಅಂಜದೇ ಮೇ 19ರಿಂದ 25ರ ನಡುವೆ ನಡೆಯುವ ಆನ್‌ಲೈನ್ ಸಮೀಕ್ಷೆಯಲ್ಲಿ ಆಧಾರ್ ಸಂಖ್ಯೆ ಮತ್ತು ಜಾತಿ ಪ್ರಮಾಣ ಪತ್ರದ ಆರ್.ಡಿ.ಸಂಖ್ಯೆಯನ್ನು ನಮೂದಿಸಿ ಗೌಪ್ಯವಾಗಿಯೇ ಹೊಲಯ, ಬಲಗೈ, ಛಲವಾದಿ ಎಂದು ತಮ್ಮ ಜಾತಿಯನ್ನು ಸ್ವಯಂ ಘೋಷಿಸಬಹುದು ಎಂದರು.
ಸಮೀಕ್ಷೆ ವೇಳೆ ‘ಹೊಲಯ’ ಉಪ ಜಾತಿಯನ್ನು ಬರೆಸಿದರೆ ಮಾತ್ರ ಯುವ ಪೀಳಿಗೆ ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಜಾತಿ ಸಂಖ್ಯೆಯಲ್ಲಿ ಏರುಪೇರಾದರೆ ಕೇಂದ್ರ- ರಾಜ್ಯ ಸರ್ಕಾರದಿಂದ ಸಿಗುವ ಶಿಕ್ಷಣ, ಉದ್ಯೋಗ, ರಾಜಕೀಯ ಮೀಸಲಾತಿ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಎಚ್.ಎನ್.ನರಸಿಂಹಮೂರ್ತಿ, ಚೌಧರಿ, ನಾಗೇಶ, ಜೆ.ರಾಮಯ್ಯ, ದೇವರಾಜು, ನಿತ್ಯಾನಂದ ಇತರರಿದ್ದರು.
ಜಾತಿ ಸಮೀಕ್ಷೆಯಲ್ಲಿ ‘ಮಾದಿಗ’ ಎಂದು ಬರೆಸಿ: ಚಂದ್ರಶೇಖರ್ಕನ್ನಡಪ್ರಭ ವಾರ್ತೆ ಮಂಡ್ಯ
ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಆಯೋಗ ಜಾತಿ ಸಮೀಕ್ಷೆ ನಡೆಸುವ ವೇಳೆ ಪರಿಶಿಷ್ಟ ಜಾತಿಯ ಮೂಲ ಜಾತಿಪಟ್ಟಿಯ ಕ್ರಮ ಸಂಖ್ಯೆ 061 ‘ಮಾದಿಗ’ ಎಂದು ಹೇಳಿ ಬರೆಸುವಂತೆ ಅಖಿಲ ಕರ್ನಾಟಕ ಡಾ.ಬಾಬು ಜಗಜೀವನ್‌ರಾಮ್ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಆರ್.ಚಂದ್ರಶೇಖರ್ ಮನವಿ ಮಾಡಿದಿರು.ಜಿಲ್ಲೆಯ ಆದಿಜಾಂಬವ, ಆದಿ ಕರ್ನಾಟಕ, ಆದಿ ದ್ರಾವಿಡ, ಮಾದಿಗ ಜಾತಿ ದೃಢೀಕರಣ ಪತ್ರ ಪಪಡೆದಿದ್ದರೂ ಎಕೆ, ಎಡಿ ಗೊಂದಲ ನಿವಾರಣೆಗಾಗಿ ಆದಿ ಕರ್ನಾಟಕ, ಆದಿ ದ್ರಾವಿಡ ಎಡಗೈ ಎಂದು ಹೇಳದೆ ನೇರವಾಗಿ ಪರಿಶಿಷ್ಟ ಜಾತಿ ಮೂಲ ಜಾತಿ ಪಟ್ಟಿಯ ಕ್ರಮ ಸಂಖ್ಯೆ 061 ‘ಮಾದಿಗ’ ಎಂದು ಹೇಳಿ ಬರೆಸುವ ಮೂಲಕ ಒಳ ಮೀಸಲಾತಿ ಪಡೆಯಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲ ಬಾರಿಗೆ ಮೊಬೈಲ್ ಆಪ್ ಮೂಲಕ ಸಮೀಕ್ಷೆಯಾಗಿದ್ದು, ಇದರಿಂದ ಮೂಲ ಜಾತಿ ಸಂಖ್ಯೆ ತಿಳಿದುಕೊಳ್ಳಲು ಆಯೋಗಕ್ಕೆ ಅನುಕೂಲವಾಗಲಿದೆ. ಸಮೀಕ್ಷೆದಾರರ ಜೊತೆ ಸಹಕಾರ ನೀಡಿ ಆಧಾರ್ ಸಂಖ್ಯೆ, ಪಡಿತರ ಚೀಟಿ, ಜಾತಿ ದೃಢೀಕರಣ ಪತ್ರ ತೋರಿಸಿ ಮಾಹಿತಿ ನೀಡಬೇಕು. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರಿ ಸವಲತ್ತು, ಉದ್ಯೋಗ, ಶಿಕ್ಷಣ, ರಾಜಕೀಯದಲ್ಲಿ ಒಳ ಮೀಸಲಿಗಾಗಿ ನೀವೇ ಸಂಕೋಚ ಪಡದೆ ನಿರ್ಭಯವಾಗಿ ‘ಮಾದಿಗ’ ಎಂದು ಹೇಳಿ ಬರೆಸುವಂತೆ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಿ.ಕೆಂಪಯ್ಯ, ಚಾಮನಹಳ್ಳಿ ಮಂಜು, ಬಾಳೆಹೊನ್ನಿಗ ಕುಮಾರ್, ಎಂ.ಪಿ.ಚಂದ್ರಶೇಖರ್, ಶಾಂಭವಿ, ಎನ್.ಎಸ್.ಸಿದ್ದರಾಜು, ಕೆ.ಬಿ.ಬೋರಯ್ಯ, ಬಿ.ನರಸಿಂಹಮೂರ್ತಿ ಇತರರಿದ್ದರು.