ಜಾತಿ ಸಮೀಕ್ಷೆಯಲ್ಲಿ ನಾಯಕ ಎಂದೇ ಬರೆಸಿ

| Published : Sep 23 2025, 01:03 AM IST

ಸಾರಾಂಶ

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಸೋಮವಾರದಿಂದ ಆರಂಭವಾಗಿರುವ ಜಾತಿ ಸಮೀಕ್ಷೆ, ಆರ್ಥಿಕ-ಶೈಕ್ಷಣಿಕ ಮಾಹಿತಿ ಸಂಗ್ರಹ ಕಾರ್ಯದ ವೇಳೆ ವಾಲ್ಮೀಕಿ ನಾಯಕ ಸಮುದಾಯದ ಎಲ್ಲರೂ ಜಾತಿ ಕಲಂನಲ್ಲಿ ನಾಯಕ ಎಂದೇ ಬರೆಸುವಂತೆ ಸಂಘದ ತಾಲೂಕು ಅಧ್ಯಕ್ಷ ಪ್ರೇಮ್‌ಕುಮಾರ್‌ ಹೇಳಿದರು.

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಸೋಮವಾರದಿಂದ ಆರಂಭವಾಗಿರುವ ಜಾತಿ ಸಮೀಕ್ಷೆ, ಆರ್ಥಿಕ-ಶೈಕ್ಷಣಿಕ ಮಾಹಿತಿ ಸಂಗ್ರಹ ಕಾರ್ಯದ ವೇಳೆ ವಾಲ್ಮೀಕಿ ನಾಯಕ ಸಮುದಾಯದ ಎಲ್ಲರೂ ಜಾತಿ ಕಲಂನಲ್ಲಿ ನಾಯಕ ಎಂದೇ ಬರೆಸುವಂತೆ ಸಂಘದ ತಾಲೂಕು ಅಧ್ಯಕ್ಷ ಪ್ರೇಮ್‌ಕುಮಾರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯ ಜಾತಿಯನ್ನು ನಾಯಕ ಎಂದೂ, ಮೀಸಲಾತಿಯನ್ನು ಪರಿಶಿಷ್ಟ ವರ್ಗ ಎಂದೂ ಬರೆಸುವುದು ಅಗತ್ಯ. ಉಪಪಂಗಡಗಳಾದ ನೀರಗಂಟಿ, ತಳವಾರ, ಬೇಡ ಇತ್ಯಾದಿಗಳನ್ನು ಆದ್ಯತಾವಾರು ಬಳಸದೆ ನಾಯಕ ಎಂಬ ಶೀರ್ಷಿಕೆಯಡಿ ಸಮುದಾಯ ಒಗ್ಗೂಡಬೇಕು. ನಾಯಕ ಸಮುದಾಯದಲ್ಲಿನ ಉಪಜಾತಿಗಳು ಕೂಡ ಪ್ರಧಾನ ಜಾತಿಯನ್ನೇ ನಮೂದಿಸುವುದು ಅಗತ್ಯ ಎಂದರು.

ಸಮಾಜದಲ್ಲಿ ಪರಿಶಿಷ್ಟ ಸಮುದಾಯಗಳ ಮೀಸಲಾತಿಯ ಮೇಲೆ ಕೆಲವರು ಕಣ್ಣು ಹಾಕಿದ್ದು, ಕೆಲ ದೊಡ್ಡ ಸಮುದಾಯಗಳು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂಬ ಒತ್ತಾಯವನ್ನು ಮಾಡುತ್ತಿವೆ. ಇಂತಹ ಒತ್ತಾಯಗಳು ಅವೈಜ್ಞಾನಿಕ ಮತ್ತು ಈಗಾಗಲೇ ಆ ವರ್ಗದಲ್ಲಿ ಗುರುತಿಸಿಕೊಂಡಿರುವ ಜಾತಿಗಳಿಗೆ ಅನ್ಯಾಯವಾದಂತಾಗುತ್ತದೆ ಎಂದರು.

ಸಮುದಾಯದ ಮುಖಂಡರಾದ ಮುನಿಕೃಷ್ಣ ಮತ್ತು ಸಂಜೀವ್‌ನಾಯಕ್‌ ಮಾತನಾಡಿ, ರಾಜ್ಯ ಸರ್ಕಾರ ಅಸ್ತಿತ್ವದಲ್ಲಿ ಇಲ್ಲದ ಜಾತಿಗಳ ಹೆಸರುಗಳನ್ನು ಮುನ್ನೆಲೆಗೆ ತರುತ್ತಿರುವುದು ಖಂಡನೀಯ. ಧರ್ಮವೊಂದರ ಜೊತೆಗೆ ಉದ್ದೇಶಪೂರ್ವಕವಾಗಿ ಕೆಲ ಜಾತಿಗಳನ್ನು ಸೇರಿಸಿ ಹೊಸ ವರ್ಗವನ್ನು ಸೃಷ್ಟಿಸುವ ಹುನ್ನಾರ ಖಂಡನೀಯ. ಜಾತಿ ಗಣತಿ ಹಿಂದುಳಿದ ಸಮುದಾಯಗಳಿಗೆ ಹೊಸ ಶಕ್ತಿಯನ್ನು ತುಂಬಬೇಕೇ ಹೊರತು ಜಾತಿಗಳನ್ನು ವಿಘಟಿಸುವ ಪ್ರಯತ್ನಗಳು ನಡೆಯಬಾರದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರಾದ ಕುಮಾರ್‌, ನರಸಿಂಹಮೂರ್ತಿ, ಬಾಳಪ್ಪ, ರಾಮಚಂದ್ರು, ಬಸವರಾಜ್‌, ವೆಂಕಟೇಶ್‌ ಮತ್ತಿತರರು ಉಪಸ್ಥಿತರಿದ್ದರು.22ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.