ಲೇಖಕಿಯರು ಸಾಹಿತ್ಯಾಭಿರುಚಿ ಉಣಿಸಬೇಕು: ಜಿಲ್ಲಾಧಿಕಾರಿ ಮೀನಾ ನಾಗರಾಜ್‌

| Published : May 05 2025, 12:53 AM IST

ಲೇಖಕಿಯರು ಸಾಹಿತ್ಯಾಭಿರುಚಿ ಉಣಿಸಬೇಕು: ಜಿಲ್ಲಾಧಿಕಾರಿ ಮೀನಾ ನಾಗರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯ ಲೋಕದ ಜೀವಾಳವಾಗಿರುವ ಜಿಲ್ಲೆಯಲ್ಲಿ ಮಹಿಳಾ ಲೇಖಕಿಯರು, ಕವಿತ್ರಿಯರು, ಬರಹಗಾರ್ತಿಯರು ಮುಖ್ಯವಾಹಿನಿಗೆ ಬಂದು ಸಾಹಿತ್ಯಾಭಿರುಚಿ ಉಣಬಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅಭಿಪ್ರಾಯಪಟ್ಟರು.

ಜಿಲ್ಲಾ ಲೇಖಕಿಯರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಾಹಿತ್ಯ ಲೋಕದ ಜೀವಾಳವಾಗಿರುವ ಜಿಲ್ಲೆಯಲ್ಲಿ ಮಹಿಳಾ ಲೇಖಕಿಯರು, ಕವಿತ್ರಿಯರು, ಬರಹಗಾರ್ತಿಯರು ಮುಖ್ಯವಾಹಿನಿಗೆ ಬಂದು ಸಾಹಿತ್ಯಾಭಿರುಚಿ ಉಣಬಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವೈವಾಹಿಕ ಜೀವನದ ನಡುವೆಯು ಮಹಿಳೆಯರು ಸಮಾಜದ ಪ್ರತಿ ಕ್ಷೇತ್ರದಲ್ಲೂ ಹೆಜ್ಜೆ ಹಾಕುತ್ತಿದ್ದಾರೆ. ಜೊತೆಗೆ ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚು ಮುತುವರ್ಜಿ ತೋರಿ ಕಥೆ, ಕಾದಂಬರಿ, ಕವಿತೆಗಳನ್ನು ರಚಿಸುತ್ತಿರುವುದು ಶ್ಲಾಘನೀಯ. ಹೀಗಾಗಿ ಅರ್ಹ ಲೇಖಕಿಯರನ್ನು ಸಂಘವು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ಮಾಡಿದರು.

ಕನ್ನಡಾಂಬೆಯ ಸೇವೆಯಲ್ಲಿ ನೂತನ ಅಧ್ಯಕ್ಷೆ ಸಕುಟುಂಬವು ನಿಸ್ವಾರ್ಥದಿಂದ ಕಾರ್ಯಪ್ರವೃತ್ತವಾಗಿರುವುದು ಹೆಮ್ಮೆಯ ಸಂಗತಿ ಎಂದ ಅವರು, ಮುಂಬರುವ ದಿನಗಳಲ್ಲಿ ಲೇಖಕಿಯರ ಸಂಘ ಜಿಲ್ಲೆಯಾದ್ಯಂತ ಹೆಚ್ಚು ಮನ್ನಣೆ ಸಿಗಲಿ ಎಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಮಾತನಾಡಿ, ಜಾನಪದ ಸಾಹಿತ್ಯ ಅನೇಕ ಯುಗಗಳಿಂದ ಈ ಮಣ್ಣಿನಲ್ಲಿ ನೆಲೆಕಾಣಲು ಮಹಿಳೆಯರ ಶಕ್ತಿಯೇ ಮೂಲ ಕಾರಣ. ಆದರೆ, ಪುರುಷರಿಗೆ ದೊರೆತ ಅವಕಾಶ ಮಹಿಳಾ ಸಾಹಿತಿಗಳಿಗೆ ದೊರೆತಿಲ್ಲ ಎಂದರು.

ಜಿಲ್ಲೆಯ ಹಲವಾರು ಅಧಿಕಾರಿಗಳು ವರ್ಗಾವಣೆಯಾಗಿ ತೆರಳುವ ಮುನ್ನ ಪುಸ್ತಕ ರಚನೆ, ಕವಿಗಳಾಗಿ ಹೊರಹೊಮ್ಮಲು ಜಿಲ್ಲೆಯಲ್ಲಿನ ಆಳವಾದ ಸಾಹಿತ್ಯ ಪ್ರೇಮವೇ ಸಾಕ್ಷಿ. ಇದೀಗ ಲೇಖಕಿಯರ ತಂಡ ಜಿಲ್ಲೆಯಾದ್ಯಂತ ಕನ್ನಡಪ್ರೇಮ ಬೆಳೆಸಲು ಸಜ್ಜಾಗುತ್ತಿದ್ದು ಬರವಣಿಗೆಯಿಂದ ಸಮಾಜದ ಸ್ಥಿತಿಗತಿ ಬದಲಿಸಲು ಸಾಧ್ಯ ಎಂದು ಪರಿಚಯಿಸಬೇಕು ಎಂದರು.

ನೂತನ ಜಿಲ್ಲಾಧ್ಯಕ್ಷೆ ಅಜ್ಜಂಪುರ ಎಸ್.ಶೃತಿ, ಜಿಲ್ಲೆಯಲ್ಲಿನ ಲೇಖಕಿಯರು, ಬರಹಗಾರ್ತಿಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಥಾ ಕಮ್ಮಟ, ಕಾವ್ಯ ಕಮ್ಮಟ, ಕವಿಗೋಷ್ಠಿಗಳನ್ನು ಏರ್ಪಡಿಸುತ್ತೇವೆ. ಜತೆಗೆ ತಾಲೂಕಿನ ಅಧ್ಯಕ್ಷರು ತಮ್ಮ ವ್ಯಾಪ್ತಿಯಲ್ಲಿನ ಮಹಿಳಾ ಸಾಹಿತಿಗಳನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.

ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ.ಎಚ್.ಎಲ್.ಪುಷ್ಪ, ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ. ಅನೇಕ ಕವಿತೆ, ಕಾದಂಬರಿ, ಕಥೆಗಳನ್ನು ರಚಿಸುತ್ತಿದ್ದು ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಸಂಘವನ್ನು ಸ್ಥಾಪಿಸಿ ವೇದಿಕೆ ನಿರ್ಮಿಸಿಕೊಡಲಾಗಿದೆ ಎಂದರು.

ಮಹಿಳಾ ಲೇಖಕಿಯರನ್ನು ಸಂಘದ ಚೌಕಟ್ಟಿನೊಳಗೆ ತರುವ ಪ್ರಯತ್ನ ಮಾಡಲಾಗುತ್ತಿದ್ದು ಲೇಖಕಿಯರ ಕೃತಿಗಳಿಗೆ ಸಿಗಬೇಕಾದ ಮನ್ನಣೆ ದೊರಕಿಸಿಕೊಡುವುದು ಆದ್ಯತೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ಡಾ.ಮಂಜುಳಾ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್, ಮುಖ್ಯೋಪಾಧ್ಯಾಯಿನಿ ಬಿ.ಚೇತನ, ಕಸಾಪ ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಇದ್ದರು.

ಜಿಲ್ಲಾ ಪದಾಧಿಕಾರಿಗಳು

ಅಜ್ಜಂಪುರ ಎಸ್.ಶೃತಿ (ಅಧ್ಯಕ್ಷೆ), ಗೀತಾ ಹಸ್ಮಕಲ್, ಭಾಗ್ಯ ನಂಜುಂಡಸ್ವಾ ಮಿ (ಉಪಾಧ್ಯಕ್ಷರು), ಆಶಾ ರಾಜು, ಸುನೀತ ನವೀನಗೌಡ (ಕಾರ್ಯದರ್ಶಿ), ಸಿ.ಆರ್.ಶೀಲಾದೇವಿ (ಖಜಾಂಚಿ). ತಾಲೂಕು ಅಧ್ಯಕ್ಷರು: ವೈಷ್ಣವಿ ಎನ್.ರಾವ್ (ಚಿಕ್ಕಮಗಳೂರು), ಶೃತಿ ಲಿಂಗರಾಜು (ಕಡೂರು), ಟಿ.ಎಂ.ಮಂಜುಳಾ (ಅಜ್ಜಂಪುರ), ಡಾ.ನಾಗಜ್ಯೋತಿ (ತರೀಕೆರೆ), ಗೀತಾ (ಕಳಸ), ಎಸ್.ಎನ್.ಚಂದ್ರಕಲಾ (ಕೊಪ್ಪ), ಜಯಶ್ರೀ ಗಣೇಶ್ (ಶೃಂಗೇರಿ), ಪ್ರೇಮ (ಮೂಡಿಗೆರೆ), ಎ.ಆರ್.ಲತಾ (ನ.ರಾ.ಪುರ.)