ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಪೊಲೀಸ್ ಕಾನ್‌ಸ್ಟೇಬಲ್, ಸೇವಾನಿರತ ಮತ್ತು ಬ್ಯಾಕ್‌ಲಾಗ್ ೧೧೩೭ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಫೆ.೨೫ರಂದು ಬೆಳಗ್ಗೆ ೧೧ರಿಂದ ಮಧ್ಯಾಹ್ನ ೧೨.೩೦ರವರೆಗೆ ಜರುಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ತಿಳಿಸಿದ್ದಾರೆ.ಲಿಖಿತ ಪರೀಕ್ಷೆಯು ಪಾರದರ್ಶಕತೆ, ಗಣಕೀಕೃತ, ಸಂಪೂರ್ಣ ವಸ್ತುನಿಷ್ಠೆ, ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ನಡೆಯುತ್ತದೆ. ಯಾವುದೇ ಅಭ್ಯರ್ಥಿಗಳು ಇಲಾಖೆಯ ಹೊರಗಾಗಲಿ ಅಥವಾ ಒಳಗಾಗಲಿ ಉದ್ಯೋಗ ಪಡೆಯುವ ಸಲುವಾಗಿ ಯಾವುದೇ ವ್ಯಕ್ತಿಗೆ ಹಣ ನೀಡುವುದು ಅಥವಾ ಯಾವುದೇ ವಿಧವಾದ ಪಾರತೋಷಕ ನೀಡುವುದು ಮಾಡಬಾರದು. ಯಾವುದೇ ವಿಧವಾದ ಹಣ ವಸೂಲಾತಿಗೆ ಯಾರಿಗೂ ಅಧಿಕಾರ ನೀಡಿರುವುದಿಲ್ಲ. ಈ ದಿಶೆಯಲ್ಲಿ ಮಧ್ಯವರ್ತಿಗಳ ಭರವಸೆಗಳಿಗೆ ಮಾರು ಹೋಗಬಾರದೆಂದು ಅಭ್ಯರ್ಥಿಗಳಿಗೆ ತಿಳಿಸಿದ್ದಾರೆ.
ಲಿಖಿತ ಪರೀಕ್ಷೆಯ ಕರೆ ಪತ್ರವನ್ನು ಇಲಾಖೆಯ ವೆಬ್‌ಸೈಟ್ www.recruitment.ksp.gov.in ನಿಂದ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು.ವಸ್ತ್ರ ಸಂಹಿತೆ:
ಪುರುಷ ಮತ್ತು ತೃತೀಯಲಿಂಗ ಪುರುಷ ಅಭ್ಯರ್ಥಿಗಳು ಅರ್ಥ ತೊಳಿನ ಶರ್ಟ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್ ಧರಿಸಬೇಕು. ಜಿಪ್ ಪ್ಯಾಕೆಟ್‌ಗಳು, ದೊಡ್ಡ ಬಟನ್‌ಗಳು ಇರುವ ಶರ್ಟ್ಗಳು, ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್‌ಗಳನ್ನು ಧರಿಸುವಂತಿಲ್ಲ. ಪರೀಕ್ಷಾ ಕೇಂದ್ರದೊಳಗೆ ಶೂಗಳನ್ನು ನಿಷೇಧಿಸಲಾಗಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಭಾಗವಿರುವ ಪಾದರಕ್ಷೆಗಳನ್ನು(ಚಪ್ಪಲಿ) ಧರಿಸಿರಬೇಕು. ಕುತ್ತಿಗೆ ಸುತ್ತಾ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.ಮಹಿಳಾ ಮತ್ತು ತೃತೀಯ ಲಿಂಗ ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ. ಪೂರ್ಣತೊಳಿನ ಬಟ್ಟೆಗಳು, ಜೀನ್ಸ್ ಪ್ಯಾಂಟ್ ಧರಿಸಬಾರದು. ಬದಲಾಗಿ ಅರ್ಧ ತೋಳಿನ ಬಟ್ಟೆ ಧರಿಸುವಂತೆ ತಿಳಿಸಲಾಗಿದೆ. ಎತ್ತರವಾದ ಹಿಮ್ಮಡಿಯ ಶೂ, ಚಪ್ಪಲಿ ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂ ಅಥವಾ ಚಪ್ಪಲಿ ಧರಿಸುವಂತಿಲ್ಲ. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿ ಧರಿಸುವುದು ಕಡ್ಡಾಯವಾಗಿದೆ. ಮಹಿಳಾ ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣ ಧರಿಸುವುದನ್ನು ನಿಷೇಧಿಸಿದೆ. (ಮಂಗಳಸೂತ್ರ ಮತ್ತು ಕಾಲುಂಗರ ಹೊರತುಪಡಿಸಿ).
ಪರೀಕ್ಷಾ ಕೇಂದ್ರಗಳು:ಹಾವೇರಿ ನಗರದ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜ್, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಗುದ್ಲೆಪ್ಪ ಹಳ್ಳಿಕೇರಿ ಪಿಯು ಕಾಲೇಜ್, ಕೆರಿಮತ್ತಿಹಳ್ಳಿ ವಿಶ್ವವಿದ್ಯಾಲಯ, ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಎಸ್.ಎಂ.ಎಸ್. ಬಾಲಕಿಯರ ಪ್ರೌಢಶಾಲೆ, ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾ ವಿದ್ಯಾಲಯ ಹಾಗೂ ಇಜಾರಿಲಕಮಾಪೂರ ಟಿ.ಎಂ.ಎ.ಇ. ಸೊಸೈಟಿ ಬಿಪಿಇಡಿ ಮಹಾವಿದ್ಯಾಲಯದಲ್ಲಿ ಪರೀಕ್ಷೆ ಕೇಂದ್ರ ಸ್ಥಾಪಿಸಲಾಗಿದೆ. ೩೦೬೦ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿಸಿಕೊಂಡಿದ್ದಾರೆ.