ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ವುಶು ಕ್ರೀಡೆಯಾಗುವ ಜತೆಗೆ ಮಹಿಳೆಯರ ಆತ್ಮರಕ್ಷಣೆಗೆ ತುಂಬಾ ಸಹಕಾರಿಯಾಗಿದೆ ಎಂದು ರಾಜ್ಯ ವುಶು ಸಂಸ್ಥೆ ಅಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.ನಗರದ ವಿದ್ಯಾಗಿರಿಯ ಶ್ರೀ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ರಾಜ್ಯ ವುಶು ಸಂಸ್ಥೆ ಹಾಗೂ ರಾಷ್ಟ್ರೀಯ ವುಶು ಸಂಸ್ಥೆದಿಂದ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ದಕ್ಷಿಣ ಭಾರತದ ಖೇಲೋ ಇಂಡಿಯಾ ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಸಿನಿಯರ್ ಮಹಿಳಾ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವುಶು ಕೇವಲ ಒಂದು ಕ್ರೀಡೆಯಾಗಿಲ್ಲ. ಪುರುಷ ಹಾಗೂ ಮಹಿಳೆಯರಿಗೆ ಆತ್ಮರಕ್ಷಣೆಯ ಒಂದು ದೊಡ್ಡ ಕ್ರೀಡೆಯಾಗಿದೆ. ಆದರೆ, ಈ ಕ್ರೀಡೆಗೆ ಬೇಕಾದಷ್ಟು ಜನಪ್ರೀಯತೆ ಇನ್ನೂ ಸಿಕ್ಕಿಲ್ಲ. ದೇಶ ಹಾಗೂ ರಾಜ್ಯದಲ್ಲಿ ವುಶುಗೆ ಹೆಚ್ಚಿನ ಪ್ರಚಾರ ಸಿಗುವ ಅವಶ್ಯಕತೆ ಇದೆ. ಅಂದಾಗ ಮಾತ್ರ ಇದರಲ್ಲಿ ಸಾಧನೆ ಮಾಡಿದ ಕ್ರೀಡಾಪಟುವನ್ನು ಜನರು ಗುರುತಿಸಲು ಸಾಧ್ಯವಾಗುತ್ತದೆ. ಜತೆಗೆ ಅನೇಕರಿಗೆ ಈ ಕ್ರೀಡೆಯ ಬಗ್ಗೆ ಜ್ಞಾನ ಬರುತ್ತದೆ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರ ಕ್ರೀಡಾಸಕ್ತಿಯಿಂದಲೇ ಖೇಲೋ ಇಂಡಿಯಾ ಸಂಸ್ಥೆ ಸ್ಥಾಪಿಸಲಾಗಿದೆ. ಖೇಲೋ ಇಂಡಿಯಾ ಸಂಸ್ಥೆಯ ಮೂಲಕ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ದೊರಕುತ್ತಿರುವುದರಿಂದಲೇ ದೇಶದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುತ್ತಿದ್ದಾರೆ. ಗ್ರಾಮೀಣ ಭಾಗದ ಕ್ರೀಡಾ ಪಟುಗಳು ಈ ಸಂಸ್ಥೆಯ ಮೂಲಕ ಪರಿಣತಿ ಹೊಂದಿದ ಕ್ರೀಡೆಯಲ್ಲಿ ತರಬೇತಿ ಪಡೆದು ರಾಜ್ಯ ಹೆಮ್ಮೆ ಪಡುವ ಸಾಧನೆ ಮಾಡಬೇಕು ಎಂದರು.
ವಿಜಯಪುರದ ಮಹಿಳಾ ವಿವಿ ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ ಮಾತನಾಡಿ, ಕ್ರೀಡಾಪಟುಗಳು ಬದ್ಧತೆ ಹಾಗೂ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಿದಾಗ ಮಾತ್ರ ಗುರಿ ತಲುಪಲು ಸಾಧ್ಯ. ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸತತ ಪ್ರಯತ್ನ ಪಡುವುದು ಬಹುಮುಖ್ಯ. ಅಂದಾಗ ಮಾತ್ರ ನಾವು ಅಂದುಕೊಂಡಿರುವ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.ಖೇಲೋ ಇಂಡಿಯಾ ಸಂಸ್ಥೆಯ ಮೂಲಕ ಕ್ರೀಡಾಪಟುಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದು ಸಂತಸದ ವಿಷಯ. ಈ ಮೂಲಕ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಸಾಧನೆಗೆ ಅನಾನುಕೂಲವಾಗದ ರೀತಿಯಲ್ಲಿ ಈ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಕ್ರೀಡಾಪಟುಗಳಿಗೆ ಹೆಚ್ಚಿನ ಸಾಧನೆ ಮಾಡಲು ಬೇಕಿರುವ ತರಬೇತಿ ನೀಡುತ್ತಿದೆ. ಕ್ರೀಡಾಪಟುಗಳು ಈ ಸಂಸ್ಥೆಯ ಲಾಭ ಪಡೆದು ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ತೋವಿವಿ ಉಪಕುಲಪತಿ ಡಾ.ವಿಷ್ಣುವರ್ಧನ ಮಾತನಾಡಿದರು. ರಾಜ್ಯ ವುಶು ಸಂಸ್ಥೆಯ ಉಪಾಧ್ಯಕ್ಷರಾದ ಅಶೋಕ ಸಜ್ಜನ ಹಾಗೂ ಕುಮಾರಸ್ವಾಮಿ ಹಿರೇಮಠ, ಜಿಲ್ಲಾ ವುಶು ಸಂಸ್ಥೆ ಅಧ್ಯಕ್ಷ ರಾಜು ನಾಯ್ಕರ್, ಕರ್ನಾಟಕ ರಾಜ್ಯ ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಶೋಕ ಮೋಕಾಶಿ, ರಾಜ್ಯ ವುಶು ಸಂಸ್ಥೆಯ ಖಜಾಂಚಿ ಸಂಗಮೇಶ ಲಾಯದಗುಂದಿ ಸೇರಿದಂತೆ 10 ರಾಜ್ಯಗಳ ವುಶು ತರಬೇತುದಾರರು ಸೇರಿದಂತೆ ಅನೇಕರಿದ್ದರು.10 ರಾಜ್ಯಗಳ ಕ್ರೀಡಾಪಟುಗಳು ಭಾಗಿ:
ಬಾಗಲಕೋಟೆಯ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ 4 ದಿನಗಳ ದಕ್ಷಿಣ ಭಾರತ ರಾಜ್ಯಗಳ ಮಹಿಳಾ ವುಶು ಕ್ರೀಡಾಕೂಟದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳನಾಡು, ಪಾಂಡಿಚೇರಿ, ಓಡಿಸ್ಸಾ, ಗೋವಾ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಸೇರಿದಂತೆ 10 ರಾಜ್ಯಗಳ 500 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಸೆ.22 ರಿಂದ 30ರವರೆಗೆ ಬ್ರೂನಿ ದೇಶದಲ್ಲಿ ಆಯೋಜಿಸಲಾಗಿರುವ 9ನೇ ವಿಶ್ವ ಜ್ಯೂನಿಯರ್ ವುಶು ಕ್ರೀಡಾಕೂಟದಲ್ಲಿ ಭಾಗಿಯಾಗುವ ಭಾರತೀಯ ಜ್ಯೂನಿಯರ್ ವುಶು ತಂಡವನ್ನು ನಗರದಲ್ಲಿ ಆಯ್ಕೆ ಮಾಡಲಾಗುತ್ತಿದೆ.ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಸಂಸ್ಥೆ ಸ್ಥಾಪಿಸಿದ್ದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಈ ಸಂಸ್ಥೆಯ ಮೂಲಕ ತರಬೇತಿ ಪಡೆದ ಅನೇಕ ಕ್ರೀಡಾಪಟುಗಳು ಇಂದು ದೇಶದ ಜನರು ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ದಕ್ಷಿಣ ಭಾರತ ಮಹಿಳಾ ವುಶು ಕ್ರೀಡಾಕೂಟ ನಗರದಲ್ಲಿ ಹಮ್ಮಿಕೊಂಡಿರುವುದು ಸಂತಸದ ವಿಷಯ.-ಜಾನಕಿ ಕೆ.ಎಂ, ಜಿಲ್ಲಾಧಿಕಾರಿ