ಯಾದಗಿರಿ: ಮಲಮೂತ್ರ ತ್ಯಾಜ್ಯ ಮನೆಗಳಿಗೆ ನುಗ್ಗಿದ ಪ್ರಕರಣ

| Published : Jan 17 2024, 01:47 AM IST

ಸಾರಾಂಶ

ಜ.4ರಂದು ಈ ಕುರಿತಂತೆ ಕನ್ನಡಪ್ರಭ ಪ್ರಕಟಿಸಿದ್ದ ವರದಿ ಗಮನಿಸಿ ಉಪ ಲೋಕಾಯುಕ್ತರಿಂದ ಪುರಸಭೆ ಅಧಿಕಾರಿಗಳಿಗೆ ನೋಟಿಸ್‌ ಜಾರಿಮಾಡಿದ್ದಾರೆ. ಈ ಹಿನ್ನೆಲೆ ಎಚ್ಚೆತ್ತ ಅಧಿಕಾರಿಗಳಿಂದ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದರಿಂದ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಹುಣಸಗಿ

ಪಟ್ಟಣದ 1ನೇ ವಾರ್ಡಿನಲ್ಲಿರುವ ಸಾರ್ವಜನಿಕ ಮಹಿಳಾ ಶೌಚಾಲಯವು ಸೆಪ್ಟಿಕ್ ಟ್ಯಾಂಕ್ ಭರ್ತಿಯಾಗಿ ಮಲಮೂತ್ರದ ನೀರು ಸುತ್ತಮುತ್ತಲಿನ ಮನೆಗಳಿಗೆ ನುಗ್ಗುತ್ತಿರುವದರಿಂದ ನಿವಾಸಿಗಳ ತೊಂದರೆ ಕುರಿತು ಜ.4 ರಂದು "ಕನ್ನಡಪ್ರಭ " ವಿಸ್ತೃತವಾದ ವರದಿ ಪ್ರಕಟಿಸಿದ್ದನ್ನು ಗಮನಿಸಿದ ರಾಜ್ಯ ಉಪ ಲೋಕಾಯುಕ್ತ ಕೆ.ಎನ್‌.ಫಣೀಂದ್ರ ಅವರು, ಜ.10ರಂದು ಪಟ್ಟಣ ಪಂಚಾಯತ ಹಾಗೂ ಯಾದಗಿರಿ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಅಲ್ಲದೆ, ನೋಟಿಸ್ ಜಾರಿಯಾದ ನಾಲ್ಕು ವಾರಗಳ ಒಳಗೆ ತಮ್ಮ ಅಭಿಪ್ರಾಯ ಮತ್ತು ಕೈಗೊಂಡ ಕ್ರಮದ ಬಗ್ಗೆ ಉಪ ಲೋಕಾಯುಕ್ತ ಬೆಂಗಳೂರು ಅವರಿಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ನ್ಯಾ. ಫಣೀಂದ್ರ ಅವರು ನಿರ್ದೇಶನ ನೀಡಿದ್ದಾರೆ.

"ಕನ್ನಡಪ್ರಭ "ದಲ್ಲಿ ಪ್ರಕಟಗೊಂಡ ವರದಿ ಉಲ್ಲೇಖಿಸಿ, ಸ್ಯುಮೋಟೊ ಅಧಿಕಾರವನ್ನು ಚಲಾಯಿಸಲು ಮೂಲ ವಸ್ತುವಾಗಿ ಪರಿಗಣಿಸಿ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ರ 7(2) 9(3)(ಎ) ಪ್ರಕಾರ ನನ್ನ ಅಧಿಕಾರವನ್ನು ಚಲಾಯಿಸಿ ನಿರ್ದೇಶಿಸಲಾಗಿದೆ ಎಂದು ಅವರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಈ ನೋಟೀಸ್‌ ತಲುಪುತ್ತಲ್ಲೇ, ಎಚ್ಚೆತ್ತುಕೊಂಡು ಪಟ್ಟಣ ಪಂಚಾಯತ ಅಧಿಕಾರಿಗಳು ಅಲ್ಲಿನ ವಾತಾವರಣ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ. ಶೌಚಾಲಯದಿಂದ ಹರಿಯುತ್ತಿರುವ ಮಲಮೂತ್ರ ಸ್ಥಗಿತಗೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.