ಸಾರಾಂಶ
ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ 16ನೇ ದಿನಕ್ಕೆ ಕಾಲಿಟ್ಟಿದೆ. ನಾರಾಯಣಪರ ಎಡದಂಡೆ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ, ಸರ್ಕಾರ ನೀರು ಬಿಡದೆ ರೈತರ ಬದುಕಿನ ಜೊತೆ ಆಟವಾಡುತ್ತಿದೆ ಎಂದು ರೈತ ಸಂಘ ಆರೋಪ ಮಾಡಿದೆ.
ಕನ್ನಡಪ್ರಭ ವಾರ್ತೆ ಶಹಾಪುರ
ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ತಾಲೂಕಿನ ಭೀಮರಾಯನ ಗುಡಿಯ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್ಎಲ್) ಆಡಳಿತ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆದಿರುವ ಅಹೋರಾತ್ರಿ ಪ್ರತಿಭಟನೆ ಸೋಮವಾರ 16ನೇ ದಿನಕ್ಕೆ ಕಾಲಿಟ್ಟಿದ್ದು, ನೀರು ಹರಿಸುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿರುವ ಪ್ರತಿಭಟನಾಕಾರರು, ಜ.2ರಂದು ಸಿಎಂ ಸಿದ್ದರಾಮಯ್ಯನವರ ಮನೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದಾರೆ.ರೈತರ ನಿಯೋಗವೊಂದು ಖುದ್ದಾಗಿ ನಾರಾಯಣಪುರ ಮತ್ತು ಆಲಮಟ್ಟಿ ಡ್ಯಾಂಗೆ ಭೇಟಿ ನೀಡಿ, ನೀರಿನ ಪ್ರಮಾಣ ಪರಿಶೀಲಿಸಿದೆ. ಆಲಮಟ್ಟಿ ಡ್ಯಾಂನಲ್ಲಿ 59ಟಿಎಂಸಿ ಮತ್ತು ನಾರಾಯಣಪುರ ಡ್ಯಾಂನಲ್ಲಿ 59.65 ಟಿಎಂಸಿ ನೀರಿದೆ. ಕುಡಿಯುವ ನೀರಿಗೆ, ಡೆಡ್ ಸ್ಟೋರೇಜ್ ಎಲ್ಲ ತೆಗೆದರೂ 8 ರಿಂದ 10 ಟಿಎಂಸಿ ನೀರು ಹೆಚ್ಚುವರಿ ಆಗಿ ಉಳಿಯುತ್ತದೆ. ಆದರೂ ಸರ್ಕಾರ ರೈತರ ಸಮಸ್ಯೆ ಬಗೆಹರಿಸಲು ಮುಂದಾಗದಿರುವುದನ್ನು ಖಂಡಿಸಿ, ಸೋಮವಾರ ಸಿಎಂ ಸಿದ್ದರಾಮಯ್ಯನವರ ಮನೆ ಮುತ್ತಿಗೆ ಹಾಕುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ ತಿಳಿಸಿದ್ದಾರೆ.
ಸರ್ಕಾರ ನೀರು ಬಿಡದೆ ರೈತರ ಬದುಕಿನ ಜೊತೆ ಆಟವಾಡುತ್ತಿದೆ. ರೈತರನ್ನು ಎದುರು ಹಾಕಿಕೊಂಡಿರುವ ಸರ್ಕಾರ ಉಳಿಯುವುದಿಲ್ಲ. ಅದು ಗೊತ್ತಿದ್ದರೂ ಕೂಡ ಸರ್ಕಾರ ಬದುಕಿನ ರೈತರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಘದ ಜಿಲ್ಲಾಧ್ಯಕ್ಷ ಶರಣು ಮಂದಾರವಾಡ, ಕಳೆದ 15 ದಿನಗಳಿಂದ ರೈತರು ತಾಳ್ಮೆ, ಶಾಂತಿಯಿಂದ ಹೋರಾಟ ಮಾಡಿದರೂ ಡ್ಯಾಂನಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದ್ದರೂ ಕೂಡ ನೀರು ಬಿಡದಿರುವುದನ್ನು ಗಮನಿಸಿದರೆ ರೈತರ ವಿರೋಧಿ ಸರ್ಕಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀರು ಬಿಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.ಬೆಳೆದು ನಿಂತ ಬೆಳೆಗೆ ಸರ್ಕಾರ ನೀರು ಬಿಡಲು ಮೀನಾಮೇಷ ಎಣಿಸುತ್ತಿದೆ. ನಮ್ಮ ಪ್ರಾಣ ಒತ್ತೆಯಿಟ್ಟಾದರೂ ನೀರು ಬರುವ ತನಕ ಹೋರಾಟ ಮಾಡುತ್ತೇವೆ.
ಶರಣು ಮಂದಾರವಾಡ, ರೈತ ಸಂಘದ ಜಿಲ್ಲಾಧ್ಯಕ್ಷ, ಯಾದಗಿರಿ.