ಅಕ್ರಮ ಮರಳು ಗಣಿಗಾರಿಕೆ ತಡೆಯಲು ಆಗ್ರಹ

| Published : Feb 13 2024, 12:48 AM IST

ಸಾರಾಂಶ

ಅಕ್ರಮ ಮರಳು ದಂಧೆಯಲ್ಲಿ ಪ್ರಭಾವಿ ರಾಜಕೀಯ ಮುಖಂಡರ ಕೈವಾಡವಿದೆ. ರಾಜಾರೋಷವಾಗಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ವಡಗೇರಾ ತಾಲೂಕಿನ ಹಯ್ಯಾಳ ಬಿ., ಜೋಳದಡಗಿ, ಕೂಡಾಲ, ಎಂ. ಕೋಳೂರು, ಯಕ್ಷಂತಿ, ಟೂಣ್ಣೂರ, ಕೊಂಕಲ್, ಚನ್ನೂರ್, ಗೊಂದೆನೂರ, ಗೌಡುರು ಹಾಗೂ ಇನ್ನಿತರ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ತಡೆಯಬೇಕೆಂದು ಆಗ್ರಹಿಸಿ ಕರವೇ ವತಿಯಿಂದ ವಡಗೇರಾ ಗ್ರೇಡ್ -2 ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದು ಪೂಜಾರಿ, ಈ ಎಲ್ಲಾ ಗ್ರಾಮಗಳಲ್ಲಿ ಹಗಲು ಇರುಳು ಎನ್ನದೆ ಸರಕಾರದ ಕಣ್ಣಿಗೆ ಮಣ್ಣೆರಚಿ ಅಕ್ರಮ ಮರುಳುಗಾರಿಕೆ ನಡೆಯುತ್ತಿದೆ. ಜಿಲ್ಲಾ ಮತ್ತು ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.

ಈ ಅಕ್ರಮ ಮರಳು ದಂಧೆಯಲ್ಲಿ ಪ್ರಭಾವಿ ರಾಜಕೀಯ ಮುಖಂಡರ ಕೈವಾಡವಿದೆ. ರಾಜಾರೋಷವಾಗಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಈ ಅಕ್ರಮ ಮರಳು ದಂಧೆ ಮುಂದುವರೆದರೆ, ಅಂತರ್ಜಲಮಟ್ಟ ಕುಸಿಯುತ್ತದೆ. ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ವಡಗೇರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಭಾರತ್ ಮಾಲಾ ರಸ್ತೆಗೆ ಡಿ.ಬಿ.ಎಲ್ ಕಂಪನಿಯವರು ಅಕ್ರಮವಾಗಿ ಯಾವುದೇ ರಾಯಲ್ಟಿ ಪರವಾನಿಗೆ ಪಡೆಯದೆ ಅಧಿಕೃತವಾಗಿ ಮರಮ ಸಾಗಾಣಿಕೆ ಮಾಡುತ್ತಿದ್ದಾರೆ. ಇಷ್ಟೆಲ್ಲ ಅಕ್ರಮ ನೆಡೆಯುತ್ತಿದ್ದರೂ ಕೂಡ ಗಣಿ ಭೂ ವಿಜ್ಞಾನ ಇಲಾಖೆ ಮಾತ್ರ ತೀವ್ರ ನಿರ್ಲಕ್ಷ ವಹಿಸುತ್ತದೆ.

ಇವರು ಮಾಡುತ್ತಿರುವ ರಸ್ತೆಯ ಕೆಲಸದ ಧೂಳು ಅಕ್ಕಪಕ್ಕದ ರೈತರ ಜಮೀನಿಗೆ ತಾಗಿ ಬೆಳೆಗಳು ಹಾಳಾಗುತ್ತಿವೆ. ಬೆಳೆ ಹಾಳಾದ ಕೆಲವು ರೈತರಿಗೆ ಇಲ್ಲಿಯವರೆಗೂ ಯಾವುದೇ ಪರಿಹಾರ ನೀಡಿಲ್ಲ. ಅವರ ಲಾರಿಗಳು ಹೆಚ್ಚಿನ ಭಾರ ಹೊತ್ತು ಈ ಭಾಗದಲ್ಲಿ ಸಂಚರಿಸುತ್ತಿರುವುದರಿಂದ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಆದ್ದರಿಂದ ಈ ಎಲ್ಲಾ ಸಮಸ್ಯೆಗಳ ಕುರಿತು ಜಿಲ್ಲಾ ಮತ್ತು ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕರವೇ ಪ್ರಧಾನ ಸಂಚಾಲಕ ಮಹ್ಮದ್ ಕತಾಲಿ, ಉಪಾಧ್ಯಕ್ಷ ಪೀರ್ ಸಾಬ್ ಮರಡಿ, ಬಸವರಾಜ್ ಕೂದಡ್ಡಿ, ತುಮಕೂರ ಗ್ರಾಮ ಘಟಕ ಅಧ್ಯಕ್ಷ ವಿನೋದ್ ಸಾಹುಕಾರ, ವಿದ್ಯಾರ್ಥಿ ಘಟಕ ಅಧ್ಯಕ್ಷ ಮಹ್ಮದ್ ಜಾಫರ್, ಗ್ರಾಮ ಘಟಕ ಉಪಾಧ್ಯಕ್ಷ ಉಸ್ಮನ್ ಸಾಬ್ ಜಮಾದಾರ್, ಹಣಮಂತ ಮಡ್ಡಿ, ಬಸವರಾಜ್ ಬಾವುರ್ ಸೇರಿದಂತೆ ಇತರರಿದ್ದರು.