2023ನೇ ವರ್ಷ ಯಾದಗಿರಿ ಜಿಲ್ಲೆಗೆ ಸಂ‘ಮಿಶ್ರ’ ಫಲ

| Published : Jan 01 2024, 01:15 AM IST

ಸಾರಾಂಶ

ಚುನಾವಣಾ ವರುಷ- ರಾಜಕೀಯ ಹರುಷ: ಏಳು-ಬೀಳು. ಗಿರಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಎಐಸಿಸಿ ಅಧ್ಯಕ್ಷರ ಕೈ ಹಿಡಿದ ತವರು । ಕಾಡಿದ ಸಾವು ನೋವುಗಳ ಸರಮಾಲೆ: ಪ್ರಶಸ್ತಿ- ಪುರಸ್ಕಾರಗಳ ಸಂತಸ

ಕನ್ನಡಪ್ರಭ ವಾರ್ತೆ ಯಾದಗಿರಿ

2023, ಗಿರಿ ಜಿಲ್ಲೆಯಲ್ಲಿ ಒಂದಿಷ್ಟು ಸಿಹಿ ಕಹಿಗಳ "ಸಂ "ಮಿಶ್ರಣಕ್ಕೆ ಸಾಕ್ಷಿಯಾಗಿತ್ತು. ಜಿಲ್ಲಾ ಕೇಂದ್ರವಾಗಿ 13 ವರ್ಷಗಳ ಸಂಭ್ರಮ ಹಾಗೂ ವಿಧಾನಸಭಾ ಚುನಾವಣಾ ವರ್ಷವಾದ 2023 ರಾಜಕೀಯ ಪಲ್ಲಟಗಳನ್ನೂ ಕಂಡಿದೆ. ಇನ್ನೇನು, ಗೆದ್ದೇ ಬಿಟ್ಟರು ಎಂಬ ಲೆಕ್ಕಾಚಾರದಲ್ಲಿದ್ದ ಕೆಲವರಿಗೆ ಸೋಲಿನ ಕಹಿಯುಣಿಸಿದ ಮತದಾರ, ಹೊಸ ನೀರಿಗೆ ಮಣೆ ಹಾಕುವ ಮೂಲಕ ಘಟಾನುಘಟಿಗಳಿಗೆ ವಿಶ್ರಾಂತಿ ನೀಡಿದಂತಿತ್ತು.

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಿರಿ ಜಿಲ್ಲೆಯ ಆಡಳಿತಕ್ಕೆ ಪ್ರಶಸ್ತಿ-ಪದಕಗಳ ಗರಿ ಸಿಕ್ಕ ಸಂತೋಷದ ಮಧ್ಯೆ, ವಿವಿಧ ರೀತಿಯ ಅಕ್ರಮಗಳ ತವರೂರು ಎಂಬ (ಕು)ಖ್ಯಾತಿ ಕಾಡಿದ್ದು ಸುಳ್ಳಲ್ಲ. ಎಲೆಮರೆಯ ಕಾಯಿಯಂತಿರುವ ಜಿಲ್ಲೆಯ ಸಾಧಕರ ಸಾಧನೆ ಖುಷಿ ಮೂಡಿಸಿತ್ತು. ಸುರಪುರ-ರಂಗಂಪೇಟೆ ಸಾಹಿತ್ಯ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಗರಿ ಮೂಡಿಸಿದ್ದುದು ಹೆಮ್ಮೆಯ ವಿಷಯವಾಗಿತ್ತು. ಇನ್ನು, ಗ್ರಾಮೀಣ ಭಾಗದಲ್ಲಿ ಅನೇಕರ ಜೀವಕ್ಕೆ ಕುತ್ತಾದ "ಜೀವಜಲ " ಆತಂಕ ಮೂಡಿಸಿತ್ತು. ಬರ ಮತ್ತೇ ರೈತರಲ್ಲಿ ಕಾಯ್ದ ಬರೆ ಮೂಡಿಸಿದಂತಿದ್ದರೆ, ನೀರಿಗಾಗಿ 2023 ವರ್ಷದ ಕೊನೆ ದಿನಗಳಲ್ಲಿ ನಡೆಯುತ್ತಿರುವ ಹೋರಾಟ ರೈತರ ಹೋರಾಟದ ಕಿಚ್ಚಿಗೆ ಸಾಕ್ಷಿಯಂತಿತ್ತು.

ಕಳೆದೆರಡು ವರ್ಷಗಳ ಹಿಂದೆ ತೀವ್ರವಾಗಿ ಕಾಡಿದ್ದ ಕೋವಿಡ್‌ ಸೋಂಕಿನ ಆತಂಕ 2023 ರಲ್ಲಿ ಸಂಪೂರ್ಣ ಮರೆಯಾಗಿತ್ತಾದರೂ, ವರ್ಷಾಂತ್ಯದಲ್ಲಿ ಮತ್ತೇ ಕೋವಿಡ್‌ ತುಸು ಗಾಬರಿ ಮೂಡಿಸಿತ್ತಾದರೂ, ಜನಜೀವನ ಎಂದಿನಂತೆ ಎಲ್ಲವೂ ಸಾಗಿದೆ. ಜನವರಿ: ಕಾಲಜ್ಞಾನಿ ಕೊಡೇಕಲ್‌ ಬಸವಣ್ಣನ ನಾಡು, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್‌ಗೆ ದೇಶದ ಪ್ರಧಾನಿ ನರೇಂದ್ರ ಮೋದಿ ವರ್ಷಾರಂಭದಲ್ಲೇ ಭೇಟಿ ನೀಡಿದ್ದರು.

ಜ.19 ನಾರಾಯಣಪುರ ಜಲಾಶಯದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆ ಜಾಲದ ನವೀಕರಣದ ಬಳಿಕ ಅಳವಡಿಸಲಾಗಿರುವ ಸ್ವಯಂ ಚಾಲಿತ ಸ್ಕಾಡಾ ಗೇಟ್ ಗಳನ್ನು ಲೋಕಾರ್ಪಣೆಗೊಳಿಸಿದ ಹೆಮ್ಮೆಯೆ ಸಂಗತಿ ಇದಾಗಿತ್ತು.

ಸುಕ್ಷೇತ್ರ ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆ ಪ್ರತಿವರ್ಷದಂತೆ ವಿಜೃಂಭಣೆಯಿಂದ ನಡೆಯಿತು.

ಜ.25ರಂದು ಯಾದಗಿರಿ ಜಿಲ್ಲಾಧಿಕಾರಿ ಆರ್.ಸ್ನೇಹಲ್ ಅವರಿಗೆ ‘ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿ’ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜ.28 ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ಚುನಾವಣೆಯ ಪೂರ್ವ ತಯಾರಿಯ ವಾತಾವರಣ ಕಾವೇರಿಸಿದಂತಿತ್ತು. ಫೆಬ್ರವರಿ: ಫೆ.2 ರಂದು ಶಹಾಪುರ ತಾಲೂಕಿನ ಬೆನಕನಳ್ಳಿ (ಜೆ) ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ 16 ಜನರಿಗೆ ವಾಂತಿಬೇಧಿ ಪ್ರಕರಣಗಳು ಜನರ ಜೀವ ಹಿಂಡಿದವು. ಫೆ.15ರಂದು ಕಲುಷಿತ ನೀರು ಸೇವನೆಯಿಂದ ಸುಮಾರು 39 ಜನರು ಅಸ್ವಸ್ಥಗೊಂಡು, ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಗುರುಮಠಕಲ್‌ನ ಅನಪುರ ಗ್ರಾಮದಲ್ಲಿ ನಡೆದಿತ್ತು. ಫೆ16 ರಂದು ಮತ್ತೋರ್ವ ವೃದ್ಧೆ ಮೃತಪಟ್ಟಿದ್ದರು.ಮಾರ್ಚ್: ಮಾ.7 ರಂದು ಯಾದಗಿರಿ ನಗರದ ವನಕೇರಿ ಲೇಔಟ್ ನಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವ ವಹಿಸಿದ್ದರು. ಮಾ.20ರಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರ್ ಅವರು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ರಾಜೀನಾಮೆ ನೀಡಿದರು.

ಮಾ.23 ರಂದು ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಜೆಡಿಎಸ್‌ ಪಂಚರತ್ನ ರಥಯಾತ್ರೆಯ ನಡೆಯಿತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವ ವಹಿಸಿದ್ದರು.

ಮಾ.23 ರಂದು ಬೆಂಗಳೂರಿನ ಸದಾಶಿವನಗರದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಮಾ.24 ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಗುಂದಿ ಮಾತಾ ಮಾಣಿಕೇಶ್ವರಿ ಮಂದಿರಕ್ಕೆ ತೆರಳಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ನಂತರ ಯಾದಗಿರಿ ತಾಲೂಕಿನ ಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಮಲ್ಲಯ್ಯನ ದರ್ಶನ ಪಡೆದರು.

ಮಾ.27ರಂದು ಸೈದಾಪುರದಲ್ಲಿ ಬಟ್ಟೆ ವ್ಯಾಪಾರಿಯೊಬ್ಬರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ದಂಪತಿ ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ನಡೆದಿತ್ತು. ಏಪ್ರಿಲ್‌: ಏ.7 ರಂದು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ವಾಗ್ವಾದಲ್ಲಿ ಕಲ್ಲೆಸೆತ ಉಂಟಾಗಿ 10ಕ್ಕೂ ಹೆಚ್ಚು ಕಾರುಗಳು ಜಖಂಗೊಂಡಿದ್ದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ನಲ್ಲಿ ಸಂಭವಿಸಿತ್ತು. ಏ.13 ರಂದು ಶಹಾಪುರ ಮತಕ್ಷೇತ್ರದ ಮಾಜಿ ಶಾಸಕ ಗುರುಪಾಟೀಲ್ ಶಿರವಾಳ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

ಏ.22 ರಂದು ಯಾದಗಿರಿ ಜಿಲ್ಲೆಯು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶೇ 62.98 ಫಲಿತಾಂಶ ಪಡೆಯಿತು. ಏ.25 ರಂದು ಯಾದಗಿರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ. ಬಿಜೆಪಿ ಅಭ್ಯರ್ಥಿ, ಅಂದಿನ ಶಾಸಕ ವೆಂಕಟರೆಡ್ಡಿ ಮುದ್ನಾಳ ಪರ ಪ್ರಚಾರ.ಮೇ: ಮೇ 2ರಂದು ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಶಹಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗುರು ಪಾಟೀಲ್ ಶಿರವಾಳ, ಯಾದಗಿರಿ ಕ್ಷೇತ್ರದ ಡಾ.ಎ.ಬಿ.ಮಲಕರೆಡ್ಡಿ ಹಾಗೂ ಗುರುಮಠಕಲ್ ಕ್ಷೇತ್ರದ ಶರಣಗೌಡ ಕಂದಕೂರ ಅವರ ಪರವಾಗಿ ಎಚ್.ಡಿ. ಕುಮಾರಸ್ವಾಮಿ ಮತಯಾಚಿಸಿದ್ದರು. ಮೇ 3 ರಂದು ಚಲನಚಿತ್ರ ನಟ ಕಿಚ್ಚ ಸುದೀಪ್ ಸುರಪುರ ಮತ್ತು ಶಹಾಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ಮೂಲಕ ಅಬ್ಬರದ ಪ್ರಚಾರ ನಡೆಸಿ. ಮತಯಾಚಿಸಿದ್ದರು.

ಮೇ 4ರಂದು ಗುರುಮಠಕಲ್ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಕು.ಲಲಿತಾ ಅನಪೂರ್ ಪರ ಆಯೋಜಿಸಿದ್ದ ಪ್ರಚಾರ ಸಮಾವೇಶದಲ್ಲಿ ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಪ್ರಚಾರ ನಡೆಸಿದ್ದರು.

ಮೇ 4ರಂದು ಯಾದಗಿರಿ ಜಿಲ್ಲೆಯ ಸುರಪುರ, ಯಾದಗಿರಿ, ಶಹಾಪುರ, ಗುರುಮಠಕಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಚಾರ ನಡೆಸಿದರು.

ಮೇ 6ರಂದು ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್‌ ಪರ ಹಮ್ಮಿಕೊಂಡಿದ್ದ ಚುನಾವಣೆ ಪ್ರಚಾರಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಗಮಿಸಿದ್ದರು.

ಮೇ 10ರಂದು ಯಾದಗಿರಿ ಜಿಲ್ಲೆಯಾದ ಬಳಿಕ ಮೂರನೇ ವಿಧಾನಸಭಾ ಚುನಾವಣೆ ಎದುರಿಸಿತು. ಶೇ.66.66ರಷ್ಟು ಮತದಾನವಾಗಿತ್ತು.

ಮೇ13 ರಂದು ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 4 ಕ್ಷೇತ್ರಗಳ ಫಲಿತಾಂಶ ಹೊರಬಂದಿದ್ದು, ಕಾಂಗ್ರೆಸ್ ಮೂರು ಸ್ಥಾನಗಳು ಹಾಗೂ ಜೆಡಿಎಸ್ ಒಂದು ಸ್ಥಾನ ಪಡೆದಿದ್ದು, ಬಿಜೆಪಿ ಖಾತೆ ತೆರೆಯುವಲ್ಲಿ ವಿಫಲವಾಯಿತು. 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 3, ಜೆಡಿಎಸ್ 1 ಸ್ಥಾನಗಳನ್ನು ಗೆಲ್ಲುವಂತಾಯಿತು. ಬಿಜೆಪಿ ಇಲ್ಲಿ ನೆಲೆ ಕಾಣಲಿಲ್ಲ.ಜೂನ್: ಜೂ.3ರಂದು ಶಹಾಪುರ ನಗರದ ಎಪಿಎಂಸಿ ಬಳಿ ನಿಲ್ಲಿಸಿದ್ದಾಗ ಲಾರಿ ಸಮೇತ ಅಕ್ಕಿ ಕಳವು ಮಾಡಲಾಗಿತ್ತು. 430 ಮೂಟೆಗಳ ಅಕ್ಕಿ ಕಳವು ಮಾಡಿ, ಖಾಲಿ ಲಾರಿ ಬಿಟ್ಟು ಕಳ್ಳರು ಪರಾರಿಯಾಗಿದ್ದರು. ಜೂ.6ರಂದು ರಸ್ತೆ ಪಕ್ಕ ನಿಲ್ಲಿಸಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ, ಐವರು ಸಾವನ್ನಪ್ಪಿದ ದುರ್ಘಟನೆ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ಬಳಿ ಬೆಳಗಿನ ಜಾವ ನಡೆದಿತ್ತು. ಜೂ.7 ರಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶರಣಬಸಪ್ಪ ದರ್ಶನಾಪುರ ಆಗಮಿಸಿದ್ದರು. ಜೂ.12 ರಂದು ಯಾದಗಿರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ‘ಶಕ್ತಿ’ ಯೋಜನೆಗೆ ಅವರು ಚಾಲನೆ ನೀಡಿದ್ದರು.

ಜೂ.28ರಂದು ಗುರುಮಠಕಲ್ ತಾಲೂಕಿನ ಹಿಮ್ಲಾಪೂರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಪ್ರಕರಣಗಳು ಕಾಣಿಸಿಕೊಂಡವು. ಜುಲೈ: ಜು.6ರಂದು ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದು ಟೀಕಾಚಾರ್ಯರೆಂದೇ ಹೆಸರುವಾಸಿ ಯಾದಂತಹ ಜಯತೀರ್ಥರ ಆರಾಧನಾ ಮಹೋತ್ಸವದ ನಡೆಯಿತು. ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದರು ಸಂಸ್ಥಾನ ಪೂಜೆ ನೆರವೇರಿಸಿದರು.

ಜು.18 ರಂದು ಯಾದಗಿರಿ ನೂತನ ಜಿಲ್ಲಾಧಿಕಾರಿಯಾಗಿ ಡಾ.ಬಿ. ಸುಶೀಲಾ ಅವರು ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ ಆರ್. ಸ್ನೇಹಲ್ ಅಧಿಕಾರ ಹಸ್ತಾಂತರ ಮಾಡಿದರು.ಆಗಸ್ಟ್: ಆ.15ರಂದು ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರಿಂದ ರಾಷ್ಟ್ರಧ್ವಜಾರೋಹಣ ನೆವೇರಿಸಿದರು. ಆ.28 ರಂದು ಐದು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ಆಲಮಟ್ಟಿ ಹಾಗೂ ನಾರಾಯಣಪೂರ ಬಸವಸಾಗರ ಜಲಾಶಯಗಳ ನೀರು ನಿರ್ವಹಣೆ ಸಲಹಾ ಸಮಿತಿ ಸಭೆಯಲ್ಲಿ ಎಡದಂಡೆ-ಬಲದಂಡೆ ಕಾಲುವೆಗಳ ರೈತರ ಮುಂಗಾರು ಬೆಳೆಗೆ ಅವೈಜ್ಞಾನಿಕ ವಾರಾಬಂಧಿ ನಿಯಮ ಜಾರಿಗೆ ತರಲು ತೀರ್ಮಾನ ಕೈಗೊಂಡಿದ್ದು, ಇದರಿಂದ ರೈತರಿಗೆ ತೊಂದರೆಯಾಗಲಿದೆ. ಸರ್ಕಾರ ಕೂಡಲೇ ನಿಯಮ ರದ್ದುಪಡಿಸಬೇಕು ಎಂದು ಮಾಜಿ ಸಚಿವ ರಾಜುಗೌಡ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದರು.ಸೆಪ್ಟಂಬರ್: ರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸೇವೆಗೆ ಲಕ್ಷ್ಯ ಕಾರ್ಯಕ್ರಮದಡಿಯಲ್ಲಿ ನೀಡಲಾಗುವ ಪ್ರಶಸ್ತಿಗೆ ಯಾದಗಿರಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೋಳುರು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಭಾಜನವಾದವು.

ಸೆ.19 ರಂದು ಯಾದಗಿರಿ ನಗರದಲ್ಲಿ ಜೆಡಿಎಸ್ ಪಕ್ಷದ ಶಾಸಕರ ನೂತನ ಜನಸಂಪರ್ಕ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ ಲೋಕಾರ್ಪಣೆಗೊಳಿಸಿದರು.

ಸೆ.30ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಕ್ತಾಪುರ ಗ್ರಾಮದ ಕಸ್ತೂರ್ ಬಾ ವಸತಿ ನಿಲಯದಲ್ಲಿ ಕಲುಷಿತ ನೀರು ಸೇವಿಸಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.ಅಕ್ಟೋಬರ್‌: ಅ.1ರಂದು ಗುರುಮಠಕಲ್‌ನಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬಾಬುರಾವ್ ಚಿಂಚನಸೂರ್ ಅವರು, ಉಪ ಮುಖ್ಯಮಂತ್ರಿಯಾಗಿ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಹೇಳಿದರು. ಅ.3ರಂದು ಶಹಾಪುರ ನಗರದಲ್ಲಿ ನಡೆದ ಮಹಾ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿದರು. ಅ.9ರಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಹಿಂದೂ ಮಹಾಗಣಪತಿಯ ವಿಸರ್ಜನಾ ಮೆರವಣಿಗೆಯು ಬೃಹತ್ ಶೋಭಾಯಾತ್ರೆಯೊಂದಿಗೆ ಅದ್ಧೂರಿಯಾಗಿ ನಡೆಯಿತು.

ನವೆಂಬರ್: ನ.8ರಂದು ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿನ ದೇವಾಲಯಗಳ ಸಮುಚ್ಛಯಕ್ಕೆ ಪ್ರವಾಸೋದ್ಯಮ ಸಚಿವ ಎಚ್‌. ಕೆ. ಪಾಟೀಲ್ ಭೇಟಿ ನೀಡಿ, ನಮ್ಮ ಸ್ಮಾರಕ ದರ್ಶನ ಹಾಗೂ ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನ.18 ರಂದು ಉಪಲೋಕಾಯುಕ್ತ ನ್ಯಾ. ಕೆ. ಎನ್. ಫಣೀಂದ್ರ ಅವರಿಂದ ಯಾದಗಿರಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ಆಲಿಸುವಿಕೆ. ಮಕ್ಕಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಜಿಲ್ಲೆಯಲ್ಲಿ ಭೇಟಿ, ಮಕ್ಕಳ ದುಸ್ಥಿತಿ ಕಂಡು ದಂಗು. ಬಾಲಛೇಡದಲ್ಲಿ ಮಕ್ಕಳಿಗೆ ಚರ್ಮರೋಗ ಸಮಸ್ಯೆ, ಉಳಿದೆಡೆ ಅಸ್ತವ್ಯಸ್ತ ಅವರನ್ನು ಅಧಿಕಾರಿಗಳ ವಿರುದ್ಧ ಕಿಡಿ ಕಾರಿಸಿತ್ತು.ಡಿಸೆಂಬರ್: ಡಿ.4ರಂದು ಯಾದಗಿರಿಯಲ್ಲಿ ಆರ್ಮಿ ರಿಕ್ರೂಟಿಂಗ್ ವತಿಯಿಂದ ನಡೆಯುತ್ತಿರುವ ಭೂಸೇನಾ ನೇಮಕಾತಿ ರ್‍ಯಾಲಿ ಕುರಿತು ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಅವರು ಪರಿಶೀಲನೆ ನಡೆಸಿದರು. ಡಿ.5ರಂದು ಯಾದಗಿರಿ ನಗರಸಭೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಅಮಾನತುಗೊಳಿಸಿ ಪೌರಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಡಿ.14 ರಂದು ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿರುವ ಟಿಎಪಿಎಂಎಸ್ ಆಹಾರ ಉಗ್ರಾಣದಲ್ಲಿ 6,077 ಕ್ವಿಂಟಲ್, 2 ಕೋಟಿ ರು.ಗಳ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ ಪ್ರಕರಣ ನಡೆಯಿತು. ಡಿ.16 ರಂದು ಪಡಿತರ ಅಕ್ಕಿ ನಾಪತ್ತೆ ಪ್ರಕರಣವನ್ನು ಸಿಐಡಿ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ದೇವಿಕೇರಾ ಜಾತ್ರೆಯಲ್ಲಿ ಪೊಲೀಸ್ ಪಹರೆಯಲ್ಲಿ ಪ್ರಾಣಿಬಲಿ ತಡೆದ ಆಡಳಿತ. ಬೆಂಗಳೂರಿನಿಂದ ಪ್ರಾಣಿ ರಕ್ಷಣಾ ಸಂಘದ ದಯಾನಂದ ಸ್ವಾಮಿ ಗ್ರಾಮದಲ್ಲಿ ಜಾಗೃತಿ. ಡಿ.25 ರಂದು ಬೆಳೆದು ನಿಂತ ಮೆಣಸಿನಕಾಯಿ ಬೆಳೆಗೆ ಕಾಲುವೆ ನೀರು ಹರಿಸುವಂತೆ ಸಾವಿರಾರು ಸಂಖ್ಯೆಯಲ್ಲಿ ರೈತರು ಶಹಾಪುರ ನಗರದ ಬಸವೇಶ್ವರ ವೃತ್ತದ ಬಳಿ ರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.