ಯಾದಗಿರಿ: ಕಾಲುವೆ ನೀರಿಗಾಗಿ ರೈತರ ಅಹೋರಾತ್ರಿ ಧರಣಿ 18ನೇ ದಿನಕ್ಕೆ

| Published : Jan 04 2024, 01:45 AM IST

ಯಾದಗಿರಿ: ಕಾಲುವೆ ನೀರಿಗಾಗಿ ರೈತರ ಅಹೋರಾತ್ರಿ ಧರಣಿ 18ನೇ ದಿನಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಬಿಜೆಎನ್ಎಲ್ ಆಡಳಿತ ಕಚೇರಿ ಬೀಗ ಹಾಕುವ ಯತ್ನದಲ್ಲಿ ರೈತರು ಮುಂದಾದ ವೇಳೆ ಪೊಲೀಸ್‌ ಬೀಗ ಹಾಕದಂತೆ ತಡೆಯೊಡ್ಡಿರುವ ಘಟನೆ ಜರುಗಿತು. ರೈತರನ್ನು ಎದುರು ಹಾಕಿಕೊಂಡಿರುವ ಸರ್ಕಾರ ಉಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸಮೀಪದ ಭೀಮರಾಯನ ಗುಡಿಯ ಕೆಬಿಜೆಎನ್ಎಲ್ ಆಡಳಿತ ಕಚೇರಿ ಮುಂದೆ ಕಳೆದ 18 ದಿನಗಳಿಂದ ಅಹೋರಾತ್ರಿ ನಡೆಯುತ್ತಿರುವ ಧರಣಿ ಮುಂದುವರೆದಿದೆ.

ನೀರು ಬರುವವರಿಗೆ ಧರಣಿ ಹಿಂಪಡೆಯುವುದಿಲ್ಲವೆಂದು, ರೈತರು ಪ್ರತಿಭಟನೆ ಮುಂದುವರಿಸಿದ್ದು, ಸರ್ಕಾರ ನೀರು ಬಿಡದೆ ರೈತರ ಬದುಕಿನ ಜೊತೆ ಆಟವಾಡುತ್ತಿದೆ. ರೈತರನ್ನು ಎದುರು ಹಾಕಿಕೊಂಡಿರುವ ಸರ್ಕಾರ ಉಳಿಯುವುದಿಲ್ಲ. ಅದು ಗೊತ್ತಿದ್ದರೂ ಕೂಡ ಸರ್ಕಾರ ಬದುಕಿನ ರೈತರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರು ಬರುವುದಿಲ್ಲ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ರೈತರು ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್ಎಲ್) ಆಡಳಿತ ಕಚೇರಿ ಬೀಗ ಹಾಕಲು ಮುಂದಾದಾಗ ತಕ್ಷಣಕ್ಕೆ ಪೊಲೀಸರು ಮುಂದಾಗಿ ಬೀಗ ಹಾಕದಂತೆ ತಡೆಯೊಡ್ಡಿರುವ ಘಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ, ಕಳೆದ 18 ದಿನಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದೆ. ಕಚೇರಿಗೆ ಬೀಗ ಮುದ್ರೆ ಹಾಕಿದ್ದಾಯಿತು, ರಸ್ತೆ ತಡೆ ಮಾಡಿದ್ದು ಆಯ್ತು, ಪಾದಯಾತ್ರೆ ಮಾಡಿದ್ದಾಯಿತು. ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಕೆಬಿಜೆಎನ್ಎಲ್ ಅಧಿಕಾರಿಗಳು ರೈತರ ಜೊತೆ ಮಾತುಕತೆ ನಡೆಸಿ ನೀರು ಬಿಡುವುದಾಗಿ ಭರವಸೆ ಕೊಟ್ಟಿದ್ದರು. ಅಲ್ಲದೆ ಜ.2 ರಂದು ಬಿಜಾಪುರದಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿ ರೈತರ ಸಮಸ್ಯೆ ಹೇಳಿಕೊಂಡಾಗ ಅವರು ಸಹ ರೈತರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ನೀರಾವರಿ ಅಧಿಕಾರಿಗಳಿಗೆ ಕಾಲುವೆಗೆ ನೀರು ಬಿಡುವಂತೆ ಮೌಖಿಕ ಆದೇಶ ನೀಡಿದ್ದರು. ಆದರೂ ಕೂಡ ನೀರು ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರಾವರಿ ಸಭೆ ಅವೈಜ್ಞಾನಿಕ :

ರೈತರನ್ನು ಕೊಲ್ಲುವ ಉದ್ದೇಶದಿಂದಲೇ ನೀರಾವರಿ ಸಲಹಾ ಸಮಿತಿಯ ತುರ್ತು ಸಭೆ ನಡೆಸಿ ಬೇಸಿಗೆಯಲ್ಲಿ ನೀರಿನ ಪ್ರಮಾಣದ ಆಧಾರದ ಮೇಲೆ ಬೆಳೆದು ನಿಂತ ಬೆಳೆಗಳಿಗೆ ನೀರು ಹರಿಸದಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇಷ್ಟು ದಿನ ಸಭೆ ಮಾಡದೆ ಈಗ ಏಕಾಏಕಿ ತುರ್ತು ಸಭೆ ಮಾಡುವ ಅವಶ್ಯಕತೆ ಏನಿತ್ತು. ಈ ಸಭೆಯ ಮೂಲ ಉದ್ಧೇಶ ರೈತರನ್ನು ಸಾಯಿಸುವುದೇ ಆಗಿದೆ. ಕುಡಿಯುವ ನೀರು ಡೆಡ್ ಸ್ಟೋರೇಜ್ ಎಲ್ಲಾ ತೆಗೆದರೂ ಇನ್ನು 8, 10ಟಿಎಂಸಿ ನೀರು ಉಳಿಯುತ್ತದೆ. ಕೊನೆಗೆ 5 ಟಿಎಂಸಿ ನೀರಾದರೂ ಬಿಡಬಹುದಾಗಿತ್ತು. ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಈಗ ಉಲ್ಟಾ ಹೊಡೆದಿದ್ದಾರೆ. ನೀರು ಹರಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನಮ್ಮ ಪ್ರಾಣ ಹೋದರೂ ಸರಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ಪಾಟೀಲ್, ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ್, ಮಲ್ಲಣ್ಣ ಚಿಂತಿ, ಪ್ರಭು ಕೊಂಗಂಡಿ, ಮಲ್ಲಣ್ಣ ನೀಲಹಳ್ಳಿ, ಹಣಮಂತ ಕೊಂಗಂಡಿ, ಗುರಣ್ಣ ದೇಸಾಯಿ,ಶ್ರೀಮಂತಗೌಡ, ಬನಶಂಕರ ಗೌಡ, ಸಿದ್ದಣ್ಣ ಸೇರಿದಂತೆ ರೈತರು ಇದ್ದರು.

ಡ್ಯಾಂನಲ್ಲಿ 2.8 ಟಿಎಂಸಿ ನೀರು ಇದ್ದರು ಚೀಫ್ ಇಂಜಿನಿಯರ್ ಪ್ರೇಮ್ ಸಿಂಗ್ ನೀರು ಬಿಡಲಿಲ್ಲ. ಈಗ ರೈತನಿಗೆ ಸಾವಿನ ಹಾದಿ ಬಿಟ್ಟು ಬೇರೆ ದಾರಿ ಇಲ್ಲ.

ಭಾಸ್ಕರರಾವ್ ಮೂಡಬೂಳ, ಹಿರಿಯ ನ್ಯಾಯವಾದಿ ಹಾಗೂ ರೈತ ಮುಖಂಡ.

ಕಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಹರಿಸುವಂತೆ ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದರೂ ಕೂಡ ಅಧಿಕಾರಿಗಳು ನೀರು ಬಿಡಲಿಲ್ಲ. ಸಿಎಂ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ರೈತರನ್ನು ಒಕ್ಕಲೆಬ್ಬಿಸುವ ಕುತಂತ್ರ ಅಡಗಿದೆ.

ಶರಣು ಮಂದಾರವಾಡ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಯಾದಗಿರಿ.