ಯಾದಗಿರಿ: ಮುಖ್ಯ ಶಿಕ್ಷಕ ಹಣಮೇಗೌಡ ಅಮಾನತು: ಪೋಕ್ಸೋ ಕಾಯ್ದಯೆಡಿ ಪ್ರಕರಣ

| Published : Jan 12 2024, 01:45 AM IST

ಯಾದಗಿರಿ: ಮುಖ್ಯ ಶಿಕ್ಷಕ ಹಣಮೇಗೌಡ ಅಮಾನತು: ಪೋಕ್ಸೋ ಕಾಯ್ದಯೆಡಿ ಪ್ರಕರಣ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ಜಿಲ್ಲೆ ಗುರುಮಠಕಲ್‌ ತಾಲೂಕು ಅನಪುರದ ಸರ್ಕಾರಿ ಹೈಸ್ಕೂಲಿನ ಮುಖ್ಯಶಿಕ್ಷಕ ಹಣಮೇಗೌಡರ ವಿರುದ್ಧ ಕಿರುಕುಳದ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ಸಿಇಒಗೆ ವರದಿ ಬಂದ ಹಿನ್ನೆಲೆ ಅಮಾನತುಗೊಳಿಸಿ ಜಿಪಂ ಸಿಇಒ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ/ಗುರುಮಠಕಲ್

ಶಾಲಾ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ, ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹಣಮೇಗೌಡ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಅನುಚಿತ ವರ್ತನೆ ಆರೋಪದಡಿ ಹಣಮೇಗೌಡನನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಸಿಇಓ ಬುಧವಾರ ಬೆಳಗ್ಗೆ ಅಮಾನತು ಆದೇಶ ಹೊರಡಿಸಿದ್ದರು. ಆದರೆ, ರಾಜಕೀಯ ಪ್ರಭಾವದಿಂದಾಗಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸುವಲ್ಲಿ ಹಿಂದೇಟು ಹಾಕಲಾಗುತ್ತಿದೆ ಎಂಬ ಆರೋಪಗಳು ಗ್ರಾಮಸ್ಥರಿಂದ ಮೂಡಿಬಂದಿದ್ದವು.

ಕಳೆದ 2-3 ವರ್ಷಗಳಿಂದ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಸುಮಾರು 29 ಮಕ್ಕಳು, ದೂರಿನ ವಿಚಾರಣೆಗೆ ಬಂದಿದ್ದ ತಹಸೀಲ್ದಾರರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೆದರು ನೋವನ್ನು ತೋಡಿಕೊಂಡಿದ್ದರು. ಈ ಕಿರುಕುಳ ತಾಳಲಾಗದೆ ಕೆಲವು ಮಕ್ಕಳು ಶಾಲೆಯಿಂದಲೇ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದರು.

ಮರ್ಯಾದೆ ಕಾರಣಕ್ಕೆ ದೂರು ನೀಡಲು ಹಿಂದೇಟು ಹಾಕುತ್ತಿದ್ದ ಪಾಲಕರು, ಮುಖ್ಯ ಶಿಕ್ಷಕನಿಂದ ಲೈಂಗಿಕ ಕಿರುಕುಳ ತಪ್ಪಿಸಲು ತಮ್ಮ ಮಕ್ಕಳಿಗೆ ಶಾಲೆಯನ್ನೇ ಬಿಟ್ಟುಬಿಡುವಂತೆ ಸೂಚಿಸಿ, ಶಿಕ್ಷಣದಿಂದ ದೂರ ಉಳಿಯುವಂತೆ ಮಾಡುವ ಸನ್ನಿವೇಶ ಎದುರಾಗಿದೆ ಎಂದು ವಿದ್ಯಾರ್ಥಿನಿಗಳು ಅಳಲು ತೋಡಿಕೊಂಡಿದ್ದರು.

ಮಕ್ಕಳ ಮೇಲಿನ ಇಂತಹ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೇವಲ ಅಮಾನತು ಮಾಡಿದರಷ್ಟೇ ಸಾಲದು, ಪೋಕ್ಸೋ ಕಾಯ್ದಯೆಡಿ ಪ್ರಕರಣ ದಾಖಲಿಸುವಂತೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಜಿಲ್ಲಾಧಿಕಾರಿ ಹಾಗೂ ಸಿಇಓ ಅವರಿಗೆ ಸೂಚಿಸಿದ್ದರು.

ಅಲ್ಲದೆ, ಈ ವಿಷಯ ಅರಿತ ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಅಧಿಕಾರಿಗಳನ್ನು ಅವರನ್ನು ಫೋನ್‌ ಮುಖಾಂತರ ಸಂಪರ್ಕಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆಯೋಗಕ್ಕೆ ವರದಿ ನೀಡುವಂತೆ ಎಂದು ಸೂಚಿಸಿದ್ದರು.

ಗುರುವಾರ ರಾತ್ರಿವರೆಗೂ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಇದ್ದ ಡಿಡಿಪಿಐ ಮಂಜುನಾಥ್, ಕೊನೆಗೂ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿದ್ದಾರೆ.