ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸಮೀಪದ ಭೀಮರಾಯನಗುಡಿಯ ಕೆಬಿಜೆಎನ್ಎಲ್ ಆಡಳಿತ ಕಚೇರಿ ಮುಂದೆ ಕಳೆದ 19 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಮುಂದುವರೆದಿದೆ.ನೀರು ಕೊಡಿ ಇಲ್ಲ, ನಮ್ಮನ್ನು ಸಾಯಿಸಿ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ಪಾಟೀಲ್ ಮಾತನಾಡಿ, ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿರುವುದು ನಾಚಿಕೆಗೇಡಿನ ಸಂಗತಿ. ಚುನಾವಣೆಯಲ್ಲಿ ಗೆದ್ದು ಬಂದ ನಂತರ ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ, ಢಾಂಬಿಕವಾಗಿ ರೈತರ ಬಗ್ಗೆ ಕಾಳಜಿ ತೋರಿಸುವ ರಾಜಕಾರಣಿಗಳಿಗೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಕೊರತೆಯಿದ್ದು, ಡ್ಯಾಮಿನಲ್ಲಿ ನೀರಿದ್ದರೂ ರೈತರಿಗೆ ಕೊಡದೆ ಸತಾಯಿಸುತ್ತಿರುವುದು ಸರಿಯಲ್ಲ. ಸರ್ಕಾರ ತನ್ನ ಕರ್ತವ್ಯ ಮರೆತಿದೆ. ನಮಗೆ ನೀರು ಕೊಡಿ, ಇಲ್ಲ ಸಾಯಿಸಿ ಬಿಡಿ. ನೀರು ಬಿಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ ಮಾತನಾಡಿ, ಸಿಎಂ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದರೂ ಕೂಡ ನೀರು ಬರಲಿಲ್ಲ. ಹಾಗಾದರೇ, ಅವರ ಆದೇಶಕ್ಕೆ ಕವಡೆ ಕಿಮ್ಮತ್ತು ಇಲ್ಲ. ನಮ್ಮ ತಾಳ್ಮೆ ಕೈಮೀರುವ ಮುಂಚೆ ಸರ್ಕಾರ ಎಚ್ಚೆತ್ತು ಕೊಳ್ಳಬೇಕು. ಈಗ ನಾವು ಸಾವಿಗೂ ಸಹ ಸಿದ್ಧರಾಗಿ ಹೋರಾಟಕ್ಕೆ ಇಳಿದಿದ್ದೇವೆ. ವಿಷದ ಬಾಟಲಿ ಮತ್ತು ಕುಣಿ ತೋಡಲು ಜೆಸಿಬಿಯೊಂದಿಗೆ ಆಗಮಿಸಿದ್ದೇವೆ ಎರಡರಲ್ಲಿ ಒಂದು ತೀರ್ಮಾನ ಆಗುವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ಬಿಗಿ ಬಂದೋಬಸ್ತ್:ರೈತರು ಕೆಬಿಜೆಎನ್ಎಲ್ ಆಡಳಿತ ಕಚೇರಿಗೆ ಬೀಗ ಮುದ್ರೆ ಹಾಕುವ ಸುದ್ದಿ ತಿಳಿಯುತ್ತಿದ್ದಂತೆಯೇ, ಕಚೇರಿಗೆ ಹೆಚ್ಚು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೆ ಜೆಸಿಬಿಯಿಂದ ಕುಣಿ ತೋಡದಂತೆ ಮತ್ತು ಆತ್ಮಹತ್ಯೆಗೆ ಮುಂದಾಗುವ ರೈತರನ್ನು ತಡೆಯಲು ಪೊಲೀಸರು ಸರ್ಪಗಾವಲಾಗಿರುವುದು ಕಂಡುಬಂತು.
ಪ್ರತಿಭಟನೆಯಲ್ಲಿ ರೈತ ಅಸ್ವಸ್ಥ :ಸತತ 19 ದಿನಗಳಿಂದ ಧರಣಿ ಕೈಗೊಂಡಿರುವ ರೈತರು ಹಾಗೂ ಕೆಲ ರೈತ ಮುಖಂಡರಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿದೆ. ಪ್ರತಿಭಟನೆ ನಡೆಯುವ ವೇಳೆ ಸಂಘದ ಜಿಲ್ಲಾಧ್ಯಕ್ಷ ಶರಣ ಮಂದರವಾಡ ದಿಢೀರನೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲೇ ಇದ್ದ ಆರೋಗ್ಯ ಅಧಿಕಾರಿ ಅವರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ್, ಮಲ್ಲಣ್ಣ ಚಿಂತಿ, ಪ್ರಭು ಕೊಂಗಂಡಿ, ಮಲ್ಲಣ್ಣ ನೀಲಹಳ್ಳಿ, ಹಣಮಂತ ಕೊಂಗಂಡಿ, ಗುರಣ್ಣ ದೇಸಾಯಿ, ಸಿದ್ದಣ್ಣ, ಬೀರಪ್ಪ, ಮಲ್ಲಪ್ಪ, ಕಲ್ಲಪ್ಪ, ಶರಣಪ್ಪ, ಚಂದಪ್ಪ, ಶಾಂತಪ್ಪ ಸೇರಿ ಹಲವು ರೈತರು ಭಾಗವಹಿಸಿದ್ದರು.ಡ್ಯಾಂನಲ್ಲಿ ನೀರಿಟ್ಟುಕೊಂಡು ರೈತರಿಗೆ ನೀರು ಬಿಡದಿರುವ ಅಧಿಕಾರಿ ಮತ್ತು ರಾಜಕಾರಣಿಗಳಿಗೆ ರೈತರು ತಕ್ಕ ಪಾಠ ಕಲಿಸಬೇಕಾಗುತ್ತದೆ. ಮಹೇಶ್ ಗೌಡ ಸುಬೇದಾರ್, ರಾಜ್ಯ ಕಾರ್ಯಾಧ್ಯಕ್ಷ, ಹಸಿರು ಸೇನೆ.