ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜ.22 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ, ಅಂದು ಮದ್ಯ ಮತ್ತು ಮಾಂಸ ಮಾರಾಟ ನಿಷೇಧ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಂದ್ರನಾಥ ನಾದ್ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 500 ವರ್ಷಗಳ ವನವಾಸದ ನಂತರ ಶ್ರೀರಾಮ ದೇವರಿಗೆ ಪಟ್ಟಾಭಿಷೇಕ ಆಗುತ್ತಿದೆ. ಈ ಪುಣ್ಯ ಕಾರ್ಯದಲ್ಲಿ ದೇಶ ವಿದೇಶ ಸೇರಿ ಜಗತ್ತೇ ಭಾಗಿಯಾಗುತ್ತಿದೆ. ಈ ವೇಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ, ಅಂದು ಮದ್ಯ ಮತ್ತು ಮಾಂಸ ಮಾರಾಟ ನಿಷೇಧ ಮಾಡಬೇಕು ಎಂದರು.
ಈಗಾಗಲೇ ಪ್ರಧಾನ ಮಂತ್ರಿಗಳು ಕರೆ ನೀಡಿದಂತೆ ವಿವಿಧ ದೇಗುಲದಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ ಇನ್ನು ನಡೆಯುತ್ತಿದೆ. ಅಲ್ಲದೇ ಜ. 22 ರಂದು ದೀಪಾರಾಧನೆ ಸೇರಿ ದೀಪಾವಳಿ ಹಬ್ಬದ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ಅಯೋಧ್ಯೆಯಲ್ಲಿ ಜ. 22 ರಂದು ಜರುಗುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಸಂದರ್ಭದಲ್ಲಿ ನಗರದ ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ ಅವರ ಕಾರ್ಯಾಲಯ ಬಳಿಯ ಹನುಮಾನ್ ದೇಗುಲದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಜಗತ್ತೇ ಎದುರು ನೋಡುತ್ತಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಯಾದಗಿರಿ ಹಾಗೂ ವಡಗೇರಿ ಹನುಮಾನ ದೇವಸ್ಥಾನದಲ್ಲಿ ವಿಶೇಷ ಬೃಹತ್ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಂದಿನ ಕಾರ್ಯಕ್ರಮದಲ್ಲಿ ಪೂಜೆ ಅನ್ನದಾಸೋಹದ ಜೊತೆಗೆ ಬೃಹತ್ ಎಲ್‌ಇಡಿ ಪರದೆಯ ವ್ಯವಸ್ಥೆ ಮಾಡಲಾಗಿದ್ದು ಶ್ರೀರಾಮನ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮುದ್ನಾಳ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಅಯೋಧ್ಯೆ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಶಂಕರ ಕರಣಗಿ ಮಾತನಾಡಿ, ಐತಿಹಾಸಿಕ ಕಾರ್ಯಕ್ರಮದ ಅಂಗವಾಗಿ ಎಲ್ಲೆಡೆ ಮಂತ್ರಾಕ್ಷತೆ ತಲುಪಿಸಲಾಗಿದೆ. ಅಲ್ಲದೇ ಜಿಲ್ಲೆಯಿಂದ ಇಬ್ಬರು ಸ್ವಾಮೀಜಿಯವರಿಗೆ ಶ್ರೀರಾಮ ಪ್ರಾಣ ಪ್ರತಿಷ್ಠೆ ದಿನದ ಆಹ್ವಾನ ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮದ ಜಿಲ್ಲಾ ಸಹ ಸಂಚಾಲಕ ಮತ್ತು ನಗರಸಭೆ ಸದಸ್ಯ ಹಣಮಂತ ಇಟಗಿ, ಮಾಧ್ಯಮ ಪ್ರಮುಖ ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಸೇರಿದಂತೆ ಇನ್ನಿತರರು ಇದ್ದರು.