ಸಾರಾಂಶ
ಯಾದಗಿರಿ : ಯಾದಗಿರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಹಿಂದೆಂದೂ ಕಂಡರಿಯದಂತೆ ಬೀಸಿದ ಬಿರುಗಾಳಿ ಹಾಗೂ ಧಾರಾಕಾರ ಮಳೆಗೆ ಜನಜೀವನ ತತ್ತರಿಸಿದೆ. ಕಳೆದೊಂದು ವಾರದಿಂದ ಬಾರಿ ಬಿಸಿಲ ತಾಪದಿಂದ ಬಳಲಿದ್ದ ಜನತೆಗೆ ಇದು ಹಿತವೆನಿಸಿದೆಯಾದರೂ, ಅಸ್ತವ್ಯಸ್ತಗೊಂಡ ಜನಜೀವನದಿಂದಾಗಿ ಸೂರು ಕಳೆದುಕೊಂಡ ಕೆಲವರು ಬೀದಿಗೆ ಬಿದ್ದಂತಾಗಿ ಜನರ ಮತ್ತೇ ಕಂಗಾಲಾಗಿಸಿದೆ.
ಗುರುವಾರ ಸಂಜೆ ಏಕಾಏಕಿ ಬೀಸಿದ ಭಾರಿ ಬಿರುಗಾಳಿ ಆತಂಕ ಮೂಡಿಸಿತ್ತು. ಬೆನ್ನಲ್ಲೇ ಶುರುವಾದ ಮಳೆ ಇಡೀ ವಾತಾವರಣ ತಂಪೆರೆಗಿಸಿತು. ಈ ಮಧ್ಯೆ ಬಿರುಗಾಳಿಯಿಂದಾಗಿ ಅನೇಕ ಗಿಡ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗಪ್ಪಳಿಸಿದ್ದು, ನೋಡನೋಡುತ್ತಲೇ, ಬಿರುಗಾಳಿ-ಮಳೆಯಬ್ಬರಕ್ಕೆ ಜನ ನಲುಗುವಂತಾಯಿತು. ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದರಿಂದ ಸಂಪರ್ಕ ಕಡಿತಗೊಂಡರೆ, ರಸ್ತೆ ಮೇಲೆ ಹೆಮ್ಮರಗಳು ಬಿದ್ದು ಸಂಚಾರಕ್ಕೆ ಹರಸಾಹಸ ಪಡಬೇಕಾಯಿತು.
ಜೆಸ್ಕಾಂ ಇಲಾಖೆಯ ಸಿಬ್ಬಂದಿ ಇವುಗಳನ್ನು ತಹಬದಿಗೆ ತರಲು ರಾತ್ರಿವರೆಗೂ ಶ್ರಮಿಸುತ್ತಿರುವುದು ಕಂಡುಬಂತು.
ಸತತ ಒಂದು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದಿದ್ದು, ನಗರದ ಪಿಡಬ್ಲ್ಯೂಡಿ ಕಚೇರಿ ಬಳಿ ಹಾಗೂ ಶಿವನಗರ ಬಡಾವಣೆಯಲ್ಲಿ ಬಿದ್ದ ಬೃಹತ್ ಮರದ ಕೊಂಬೆಗಳು ನೆಲಕ್ಕರುಳಿದವು. ಪಿಡಬ್ಲ್ಯೂಡಿ ಕಚೇರಿ ಬಳಿ ಪಂಕ್ಚರ್ ಅಂಗಡಿ ಮೇಲೆ ಬಿದ್ದ ಮರದ ಕೊಂಬೆಗಳಿಂದಾಗಿ ಭಾರಿ ಪ್ರಮಾಣದ ಹಾನಿಯಾಗಿದೆ. ಮಳೆ ನೀರಿನಿಂದ ಪಿಡಬ್ಲ್ಯೂಡಿ ಕಚೇರಿ ಆವರಣ ಜಲಾವೃತಗೊಂಡಿತ್ತು.
ಬಿರುಗಾಳಿಗೆ ಮನೆ ಮೇಲಿನ ಟಿನ್ ಶೆಡ್‌ಗಳು ಹಾರಿಹೊಗಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಾ. ಅಂಬೇಡ್ಕರ್ ವೃತ್ತದ ಸಮೀಪದ ಹೆಮ್ಮೆರ ಬಿದ್ದಿದ್ದರಿಂದ ಲುಂಬಿನಿ ಪಾರ್ಕ್ ಮಾರ್ಗವಾಗಿ ರಸ್ತೆ ಸಂಚಾರ ಸ್ಥಗಿತಗೊಂಡು, ಏಕಮುಖ ಸಂಚಾರ ನಡೆಸಬೇಕಾಯಿತು.
ಸುರಪುರ, ಹುಣಸಗಿಯಲ್ಲಿಯೂ ಮಳೆ ಗಾಳಿ: ಸುರಪುರದ ದೇವಾಪುರದಲ್ಲಿಯೂ ಜೋರಾದ ಗಾಳಿಗೆ 70ಕ್ಕೂ ಹೆಚ್ಚು ಮನೆಗಳ ತಗಡುಗಳು
ಹಾರಿ ಹೋಗಿವೆ. ಮರಗಳು ವಿದ್ಯುತ್ ಕಂಬಗಳು ನೆಲಕಚ್ಚಿವೆ. ಇದರಿಂದಾಗಿ ಸಂಪರ್ಕ ಕಡಿತಗೊಂಡಿದೆ. ಮನೆಯೊಂದರಲ್ಲಿ ಸಿಮೆಂಟ್ ಶೀಟ್ ಒಡೆದು ಫ್ರಿಡ್ಜ್, ಎಲ್‌ಇಡಿ ಟಿವಿಗೆ ಹಾನಿಯಾಗಿದೆ.
ಹುಣಸಗಿಯಲ್ಲಿ ಗಾಳಿ ಮಳೆಗೆ ಹಾನಿ : ತಾಲೂಕಿನಲ್ಲಿ ಬುಧವಾರ ಸಂಜೆ ಮಳೆ ಗಾಳಿಗೆ ಕುಪ್ಪಿ ಗುಡ್ಡದ ಹತ್ತಿರದ ಗುರುಬಾಯಿ ಎಂಬವರ ಗುಡಿಸಲು ಕಿತ್ತಿ ಬಿದ್ದಿದ್ದು, ಮಹಿಳೆಯ ತಲೆಗೆ ಗಾಯವಾಗಿದೆ. ರೇಣುಕಾ ಸಂತೋಷ್ ರಾಠೋಡ ಅವರ ಶೆಡ್ ಮತ್ತು ಮಲ್ಲಪ್ಪರವರ ಶೆಡ್ ಪತ್ರಾಸ್ ಸಂಪೂರ್ಣ ಕಿತ್ತಿವೆ. ಭಾರೀ ಗಾಳಿ ಬೀಸಿದ ಪರಿಣಾಮ ಇದ್ದ ಒಂದು ಗುಡಿಸಲು ಮುರಿದು ಬಿದ್ದಿದ್ದು, ತೀವ್ರ ನಷ್ಟವಾಗಿದೆ.
ಕೆಂಚಗಾರಹಳ್ಳಿಯಲ್ಲಿ ಹಾನಿ : ಯಾದಗಿರಿ ಸಮೀಪದ ಕೆಂಚಗಾರಹಳ್ಳಿಯಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಸುರಿದ ಜೋರಾದ ಮಳೆಗೆ, ರಸ್ತೆ ಬದಿ, ಹೊಲಗಳಲ್ಲಿನ ಮರಗಳು ನೆಲಕ್ಕೆ ಅಪ್ಪಳಿಸಿವೆ. ಒಂದು ಗಂಟೆಗೂ ಹೆಚ್ಚು ಸುರಿದ ಮಳೆಯಿಂದಾಗಿ ಮಹಿಳೆ ಪ್ರಿಯಾಂಕ ಎನ್ನುವರ ಮನೆಯ ಮೇಲಿನ ಪತ್ರಾಸ್ ಬಿದ್ದು, ತಲೆಗೆ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ.
ಬಯಲಲ್ಲಿ ಕಟ್ಟಿದ ಎತ್ತಿನ ತಲೆಗೆ ಗಾಯವಾಗಿದ್ದು, ತಾಂಡಾ ನಿವಾಸಿಗಳಾದ ಜೈ ಸಿಂಗ್, ನಾಮದೇವ್ ಎನ್ನುವ ವ್ಯಕ್ತಿಗಳ ಮನೆಯ ಪತ್ರಾಸ್ ಗಳು ಹಾರಿ ಹೋಗಿವೆ. ಬೃಹದಾಕಾರದ ಬೇವಿನ ಮರಗಳು ಮನೆ ಮೇಲೆ ಬಿದ್ದು, ಗೋಡೆಗಳು ಬಿರುಕು ಬಿಟ್ಟಿವೆ ಅಲ್ಲದೆ ಜೋರಾದ ಮಳೆಯಿಂದಾಗಿ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.