ಸಾರಾಂಶ
ಸಂಚಾರಿ ನಿಯಮ ಪಾಲಿಸುವ ವಿಚಾರದಲ್ಲಿ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಂಚಾರ ನಿಯಮ ಉಲ್ಲಂಘಿಸುವ ಯಾವುದೇ ವಾಹನ ಸವಾರರ ವಿರುದ್ಧ ಕಠಿಣ ಕ್ರಮಕ್ಕೆ ಇಲಾಖೆ ಮುಂದಾಗಲಿದೆ ಎಂದು ಕಲಬುರಗಿ ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಕಿಲ್ಲೇರಿ ತಿಳಿಸಿದರು
ಕನ್ನಡಪ್ರಭ ವಾರ್ತೆ ಶಹಾಪುರ
ಸಂಚಾರಿ ನಿಯಮ ಪಾಲಿಸುವ ವಿಚಾರದಲ್ಲಿ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಂಚಾರ ನಿಯಮ ಉಲ್ಲಂಘಿಸುವ ಯಾವುದೇ ವಾಹನ ಸವಾರರ ವಿರುದ್ಧ ಕಠಿಣ ಕ್ರಮಕ್ಕೆ ಇಲಾಖೆ ಮುಂದಾಗಲಿದೆ ಎಂದು ಕಲಬುರಗಿ ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಕಿಲ್ಲೇರಿ ತಿಳಿಸಿದರು.
ನಗರದ ವೈಷ್ಣವಿ ಹಾಲ್ ಪ್ರಾದೇಶಿಕ ಸಾರಿಗೆ ಇಲಾಖೆ ಯಾದಗಿರಿ ಮತ್ತು ವಾಹನ ಚಾಲನಾ ತರಬೇತಿ ಸ್ಕೂಲ್ ಅಸೋಶಿಯೇಷನ್ ಯಾದಗಿರಿ ಸಹಯೋಗದಲ್ಲಿ ನಡೆದ ಒಂದು ದಿನ ವಾಹನ ಚಾಲನಾ ಕೌಶಲ್ಯ ಕುರಿತು ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ಮದ್ಯಪಾನ ಸೇವನೆ, ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆಯಿಂದ ಅಪಘಾತ ಸಂಭವಿಸಿ, ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಹೀಗಾಗಿ ಬೈಕ್ ಸವಾರರು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದರಿಂದ ಆಕಸ್ಮಿಕವಾಗಿ ಅಪಘಾತ ಸಂಭವಿಸಿದರೂ ತಲೆಗೆ ಏಟು ಬೀಳದಂತೆ ಸುರಕ್ಷತೆ ಕಾಪಾಡಿಕೊಳ್ಳಬಹುದು. ಜ.16ರಿಂದ ಫೆ.14ರವರೆಗೆ ಕಲಬುರಗಿ ವಿಭಾಗೀಯ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಂಡ್ದಿದ್ದು, ಜಾಗೃತಿ ಮೂಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದರು.
ಯಾದಗಿರಿ ಆರ್‌ಟಿಒ ಮಿಲಿಂದಕುಮಾರ ಮಾತನಾಡಿ, ವಾಹನ ಓಡಿಸುವ ಮುನ್ನ ಪರವಾನಗಿ, ವಿಮೆ, ದಾಖಲಾತಿ ಹೊಂದಿರಬೇಕು. ಅಲ್ಲದೆ, ದ್ವಿಚಕ್ರ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದರು.
ಈ ವೇಳೆ ಸಂಚಾರಿ ನಿಯಮಗಳ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು. ಅತ್ಯುತ್ತಮ ವಾಹನ ಚಾಲಕರಿಗೆ ಗೌರವಿಸಲಾಯಿತು. ವಾಹನ ಚಾಲಕರ ಸ್ಕೂಲ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಯಲ್ಲಪ್ಪ ದೊಡ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋಟಾರ ವಾಹನ ಚಾಲಕರ ತರಬೇತಿ ಶಾಲೆ ಮಾಲೀಕರ ಸಂಘದ ಅಧ್ಯಕ್ಷ ಆನಂದ ಪಾಟೀಲ್, ಉಪಾಧ್ಯಕ್ಷ ಬಸವರಾಜ ಕಡ್ಲಿ, ನಿವೃತ್ತ ವಾಹನ ಚಾಲನ ಬೋಧಕರ ತರಬೇತಿ ಸಂಸ್ಥೆ ಹಗರಿಬೊಮ್ಮನಹಳ್ಳಿ ಮರುಳಸಿದ್ದಯ್ಯ ಹಿರೇಮಠ, ನಗರಸಭೆ ಸದಸ್ಯ ಸಿದ್ದು ಸಾಹು ಆರಬೋಳ, ಎಸ್.ಎಂ.ಜೈನ್ ಸ್ಕೂಲ್ ಅಧ್ಯಕ್ಷ ಮಂಗೀಲಾಲ ಜೈನ್, ಎಸ್.ಕೆ. ಪಬ್ಲಿಕ ಸ್ಕೂಲ್ ಕಾರ್ಯದರ್ಶಿ ಭೀಮನಗೌಡ ಬಿರಾದಾರ ಸೇರಿ ಇತರರಿದ್ದರು.