ಯಾದಗಿರಿ: ಸಂಭ್ರಮದ ಜರುಗಿದ ಮೈಲಾಪುರ ಜಾತ್ರೆ

| Published : Jan 15 2024, 01:49 AM IST

ಸಾರಾಂಶ

ಯಾದಗಿರಿ ಸಮೀಪದ ಮೈಲಾಪುರದ ಮೈಲಾರಲಿಂಗಶ್ವರ ಜಾತ್ರೆ ನಿನ್ನೆ ಸಡಗರದಿಂದ ನೆರೆವೇರಿತು. ಜಾತ್ರೆಯಲ್ಲಿ ಹರಕೆಯ ಕುರಿಗಳ ಎಸೆತಕ್ಕೆ ನಿಷೇಧ ಹೇರಿದ ಹಿನ್ನೆಲೆ ಕುರಿ ಉಣ್ಣೆ ಎಸೆದು ಭಕ್ತರು ಹರಕೆ ತೀರಿಸಿದ್ದಾರೆ. 400ಕ್ಕೂ ಹೆಚ್ಚು ಕುರಿಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರ ಈ ಜಾತ್ರೆಗೆ ಆಗಮಿಸುತ್ತಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಸಮೀಪದ ಮೈಲಾಪುರದ ಶ್ರೀಮೈಲಾರಲಿಂಗೇಶ್ವ ಜಾತ್ರೆ ಭಾನುವಾರ ಸಡಗರ ಸಂಭ್ರಮದಿಂದ ಜರುಗಿತು. ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧೆಡೆ ಭಾಗಗಳಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಿ, ಭಕ್ತಿ ಭಾವದಿ ಪಾಲ್ಗೊಂಡರು.

ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಸುಪ್ರಸಿದ್ಧ ಮಲ್ಲಯ್ಯನ ಜಾತ್ರೆ ಅಂಗವಾಗಿ ಕಳೆದೆರಡು ದಿನಗಳಿಂದ ಭಕ್ತಸಾಗರ ಮೈಲಾಪುರದತ್ತ ಹರಿದು ಬರತೊಡಗಿತ್ತು.

ಹೊನ್ನೆಕೆರೆಯಲ್ಲಿ ಮಿಂದೆದ್ದು ಬಂದ ಭಕ್ತರು, ಮಲ್ಲಯ್ಯನ ದರುಶನಕ್ಕೆ ಬೆಟ್ಟ ಏರಿ ಹರಕೆ ತೀರಿಸಿದರು. ಏಳು ಕೋಟಿಗೆ ಏಳು ಕೋಟಿ.. ಉಘೇ ಘೋಷಣೆಗಳು ಮುಗಿಲು ಮುಟ್ಟಿದ್ದವು. ಭಂಡಾರದ ಬಣ್ಣದಿಂದಾಗಿ ಇಡೀ ವಾತಾವರಣ ಅರಿಶನಮಯವಾಗಿತ್ತು, ಭಕ್ತರ ಜೈಕಾರಗಳು ಪ್ರತಿಧ್ವನಿಸುತ್ತಿದ್ದವು.

ಪ್ರತಿ ವರ್ಷ ಮಕರ ಸಂಕ್ರಾಂತಿ ಹಬ್ಬದ ದಿನದಂದು ನಡೆಯುವ ಅದ್ಧೂರಿ ಜಾತ್ರೆ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು. ಹೊನ್ನಕೆರೆಯಿಂದ ಉತ್ಸವ ಮೂರ್ತಿ ತೀರ್ಥಾಭಿಷೇಕದ ನಂತರ ಬರುವ ಪಲ್ಲಕ್ಕಿ ಮೇಲೆ ಹರಕೆ ಕುರಿಗಳ ಎಸೆಯುವದನ್ನು ತಡೆಯಲು ಆಡಳಿತ ಭಾರಿ ಬಂದೋಬಸ್ತ್‌ ಮಾಡಿದ್ದರಿಂದ ಇದಕ್ಕೆ ಕಡಿವಾಣ ಬಿದ್ದಂತಾಗಿತ್ತು. ಕುರಿ ಉಣ್ಣೆ, ಹಣ್ಣು ಹಾಗೂ ಜೋಳದ ತೆನೆಯ ದಂಟುಗಳ ಎಸೆದು ಭಕ್ತರು ತೃಪ್ತಿಪಟ್ಟುಕೊಂಡರು.

ಕೆಲವು ಭಕ್ತರು ತಂದಿದ್ದ 400ಕ್ಕೂ ಹೆಚ್ಚು ಕುರಿಮರಿಗಳನ್ನು ಜಪ್ತಿ ಮಾಡಿಕೊಳ್ಳಾಯಿತು. ಇದಕ್ಕೆಂದೇ ಮೈಲಾಪುರ ಪ್ರವೇಶದ ಐದು ಕಡೆಗಳಲ್ಲಿ ಚೆಕ್ಪೋಸ್ಟ್‌ಗಳ ನಿರ್ಮಿಸಲಾಗಿತ್ತು. ಕುರಿಮರಿಗಳನ್ನು ಕಾಣಿಕೆ ರೂಪದಲ್ಲಿ ಪಡೆದ ಜಿಲ್ಲಾಡಳಿತ, ಮರುದಿನ ಹರಾಜು ಮಾಡಿ, ಬಂದ ಹಣದಲ್ಲಿ ದೇವಸ್ಥಾನ ಅಭಿವೃದ್ಧಿಗೆ ಉಪಯೋಗಿಸಲಿದೆ.

ಮೂವರು ಡಿವೈಎಸ್ಪಿಗಳು, 17 ಜನ ಸಿಪಿಐಗಳು, 36 ಪಿಎಸ್ಐ, 600 ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆಂದು ನಿಯೋಜನೆ ಮಾಡಲಾಗಿತ್ತು. ಬಸ್, ರೈಲು ಹಾಗೂ ವಿವಿಧ ವಾಹನಗಳ ಮೂಲಕ ಜಾತ್ರೆಯಲ್ಲಿ ಪಾಲ್ಗೊಳ್ಳಲು ಭಕ್ತರು ಯಾದಗಿರಿಗೆ ಆಗಮಿಸಿದ್ದರು.

ಸರಪಳಿ ಹರಿಯುವುದು :

ಮೈಲಾಪುರದ ಜಾತ್ರೆ ಮತ್ತೊಂದು ವಿಶೇಷತೆ ಸರಪಳಿ ಹರಿಯುವುದು. ಅಲ್ಲಿ ಪೂಜಾರಿ ಸರಪಳಿ ಹರಿಯುವ ದೃಶ್ಯವನ್ನು ವೀಕ್ಷಿಸಲು ಭಕ್ತಸಾಗರ ಸೇರಿರುತ್ತದೆ. ಇದು ದೇಗುಲಕ್ಕೆ ಹೋಗುವ ಮಾರ್ಗಮಧ್ಯೆ ಬರುತ್ತದೆ. ಮಧ್ಯಾಹ್ನ ಸರಪಳಿ ಹರಿಯುತ್ತಲೇ ಜನರ ಹರ್ಷೋದ್ಗಾರಗಳು ಮುಗಿಲು ಮುಟ್ಟಿದ್ದವು.

ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು, ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ, ಎಸ್ಪಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ್‌, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್‌ ಸೇರಿದಂತೆ ಮುಂತಾದವರು ಜಾತ್ರೆಗೆ ಸಾಕ್ಷಿಯಾದರು.