ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮಾತೋಶ್ರೀ ಕಲ್ಯಾಣಿ ಸ್ಮಾರಕ ಶಿಕ್ಷಣ ಸಂಸ್ಥೆ(ರಿ) ಅಡಿಯಲ್ಲಿ ನಡೆಯುತ್ತಿರುವ ಶ್ರೀಗುರು ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ 2023-24ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭವನ್ನು ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಕಲಬುರಗಿ, ಉಪ ನಿರ್ದೇಶಕ ಪ್ರೊ. ಶಿವಶರಣಪ್ಪ ಮುಳೆಗಾಂವ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಶ್ರೀಗುರು ಕಾಲೇಜಿನ ಸಂಸ್ಥಾಪಕ ಪ್ರೊ. ಎ.ವೈ. ನಾಯ್ಕ ಅವರು ಶ್ರೀ ಗುರು ಪ.ಪೂ. ಕಾಲೇಜನ್ನು ಆರಂಭಿಸಿರುವುದರೊಂದಿಗೆ, ಶೈಕ್ಷಣಿಕ-ಸ್ಪರ್ಧಾತ್ಮಕ ಯುಗದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಶೈಕ್ಷಣಿಕ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಅವರ ನಂತರ ಸಂಸ್ಥೆಯನ್ನು ನಿತಿನ ನಾಯ್ಕ ಮುನ್ನಡೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಭವಿಷ್ಯದ ನಾಗರಿಕರಾದ ನೀವು ದ್ವಿತೀಯ ಪಿಯುಸಿ ಪಾಸಾಗುವುದು ಸುಲಭ. ಆದರೆ ಜೀವನದ ಪರೀಕ್ಷೆಯಲ್ಲಿ ಪಾಸಾಗುವುದು ಕಷ್ಟ. ಯಾರು ಧನಾತ್ಮಕವಾದ ಕೌಶಲ್ಯ ಅಳವಡಿಸಿಕೊಂಡು ಮುಂದುವರೆಯುತ್ತಾರೆಯೋ ಅವರು ಜೀವನದ ಪರೀಕ್ಷೆಯಲ್ಲಿಯೂ ಸಹ ಪಾಸಾಗುತ್ತಾರೆ ಎಂದು ಹೇಳಿದರು.
ಮುಂದುವರೆದು ಮಾತನಾಡುತ್ತಾ, ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವ ಮೂಲಕ ಭವ್ಯ ಭಾರತ ನಿರ್ಮಾಣದಲ್ಲಿ ನೀವೆಲ್ಲರೂ ಪಾಲ್ಗೊಳ್ಳಿರಿ ಎಂದು ಕರೆಯಿತ್ತರು. ಸಾಧನೆ ಹಾದಿಯಲ್ಲಿ ಶಕ್ತಿ ಹೀನರಾದವರಿಗೆ ದೇವರೂ ಸಹ ಕೈಹಿಡಿಯುವುದಿಲ್ಲ, ಯಾರೂ ಶಕ್ತಿವಂತರಾಗಿರುತ್ತಾರೋ ಅವರು ಯಶಸ್ಸು ಸಾಧಿಸುತ್ತಾರೆ, ಅದಕ್ಕಾಗಿ ಶಕ್ತಿಯೇ ಜೀವನ ಎಂಬ ತತ್ವವನ್ನು ಅರಿತು ಮುನ್ನುಗ್ಗಬೇಕು ಹಾಗೂ ತಂದೆ ತಾಯಿಗಳ ಶ್ರಮ ಮತ್ತು ತ್ಯಾಗಕ್ಕೆ ಗೌರವ ಕೊಡಬೇಕೆಂದು ಕಿವಿ ಮಾತು ಹೇಳಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ವಿದ್ಯಾಸಾಗರ ಎಂ.ಗೋಗಿ ಮಾತನಾಡಿ, ನೀವು ಕಲಿತ ಜ್ಞಾನ, ವಿದ್ಯೆ ಸಂದರ್ಭಕ್ಕನುಸಾರವಾಗಿ ಉಪಯೋಗಿಸಿಕೊಂಡು ನೀವು ಉತ್ತಮ ಬದುಕು ರೂಪಿಸಿಕೊಂಡು, ನಿಮ್ಮ ತಂದೆ ತಾಯಿಗಳ ಹಾಗೂ ನಿಮ್ಮ ಕನಸು ನನಸಾಗಿಸಲು ಸದಾ ಸ್ಪರ್ಧಾತ್ಮಕ ಪ್ರಯತ್ನ ಮಾಡಬೇಕೆಂದು ನುಡಿದರು.
ಸಂಸ್ಥೆಯ ಅಧ್ಯಕ್ಷರಾದ ನಳಿನಿ ಎ.ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಾದ ನೀವು ಏಕಾಗ್ರತೆಯಿಂದ ಓದಿ, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರಬೇಕು. ಅದಕ್ಕೆ ಪೂರಕವಾದ ಎಲ್ಲಾ ರೀತಿಯ ಶೈಕ್ಷಣಿಕ ಸಹಕಾರ ಸೌಲಭ್ಯ ನೀಡುವುದಾಗಿ ಭರವಸೆಯಿತ್ತರು.ಕಾರ್ಯದರ್ಶಿಗಳಾದ ನಿತಿನ್ ಎ.ನಾಯ್ಕ, ಆಡಳಿತಾಧಿಕಾರಿಗಳಾದ ನೆಹಾ ನಿತಿನ ನಾಯ್ಕ, ಆಡಳಿತ ಮಂಡಳಿ ಸದಸ್ಯರಾದ ಗುರುರಾಜ ಎ.ನಾಯ್ಕ ಹಾಗೂ ಭೋಧಕ-ಭೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕಂತಿಕ ಕಾರ್ಯಕ್ರಮಗಳು ನಡೆದವು.