ಯಾದಗಿರಿ: ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯ

| Published : Jan 19 2024, 01:47 AM IST

ಸಾರಾಂಶ

ಏಕೈಕ ಕೊಳವೆ ಬಾವಿಗೆ ಮುಗಿಬೀಳುವ ಮಹಿಳೆಯರು ನಿತ್ಯ ಜಗಳವಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ರೋಸಿದ ಸುತಾರ್ ಹೊಸಳ್ಳಿ ಗ್ರಾಮದ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಹೊನಿಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತಾರ್ ಹೊಸಳ್ಳಿ ಗ್ರಾಮದಲ್ಲಿ ಕುಡಿವ ನೀರಿಗೆ ಸಮಸ್ಯೆ ಎದುರಾಗಿದೆ. ಇಲ್ಲಿರುವ ಏಕೈಕ ಕೊಳವೆ ಬಾವಿಗೆ ಮುಗಿಬೀಳುವ ಮಹಿಳೆಯರು ನಿತ್ಯ ಜಗಳವಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ ಆಗ್ರಹಿಸಿದ್ದಾರೆ.

ಅವರು ಗ್ರಾಮಕ್ಕೆ ಭೇಟಿ ನೀಡಿದಾಗ ಸಮಸ್ಯೆ ಗಮನಕ್ಕೆ ಬಂದ ಹಿನ್ನೆಲೆ, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮಹಿಳೆಯರು ಹಲಗೆ ಮತ್ತು ಖಾಲಿ ಕೊಡಗಳನ್ನು ಪ್ರದರ್ಶಿಸಿ ನಡೆಸಿದ ಪ್ರತಿಭಟನೆಯನ್ನುದ್ಧೇಶಿಸಿ ಮಾತನಾಡಿದರು. ಜಿಲ್ಲಾ ಕೇಂದ್ರದಿಂದ 16ಕಿಮೀ ದೂರದಲ್ಲಿ ಹೊಸಳ್ಳಿ ಗ್ರಾಮವಿದ್ದು, 3000 ಮತದಾರರಿದ್ದಾರೆ. 5000 ಜನಸಂಖ್ಯೆ ಹೊಂದಿದೆ. ಸುಮಾರು 400ಕ್ಕೂ ಹೆಚ್ಚು ಮನೆಗಳಿವೆ. ಆದರೆ, ಕುಡಿವ ನೀರಿಗೆ ಪರದಾಡುವಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

2009ರಲ್ಲಿ ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ಮೇಲ್ತೊಟ್ಟಿ ನಿರ್ಮಿಸಲಾಗಿದೆ. ಇದಲ್ಲದೇ ಜೆಜೆಎಂ ಯೋಜನೆಯಡಿ ಕುಡಿವ ನೀರಿನ ಕಾಮಗಾರಿ ಆರಂಭವಾಗಿಯೇ ಇಲ್ಲ. ಇದೂ ಸಹ ಹಳ್ಳ ಹಿಡಿದಂತಾಗಿದೆ. ನಿತ್ಯ ಇಲ್ಲಿನ ಜನರಿಗೆ ನೀರಿಗೆ ಪರದಾಟ ತಪ್ಪುತ್ತಿಲ್ಲ. ಇಷ್ಟಿದ್ದರೂ ಸಹ 2009ರಿಂದ ಇಲ್ಲಿಯವರೆಗೆ ನೀರಿನ ಸಮಸ್ಯೆ ಪರಿಹರಿಸಲು ಯಾವ ಅಧಿಕಾರಿ, ಜನಪ್ರತಿನಿಧಿ ಮುಂದಾಗಿಲ್ಲ ಎಂದು ದೂರಿದರು.

ಗ್ರಾಮದಲ್ಲಿ ಮೇಲ್ತೊಟ್ಟಿಯನ್ನು ಭೂಮಿ ಸಮತಲದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಅವುಗಳ ಬಳಕೆ ಮಾಡದೇ ಜನತೆಗೆ ಕುಡಿವ ನೀರಿಗೆ ತೊಂದರೆಯಾಗಿದೆ.

ಗ್ರಾಪಂ, ತಾಪಂ, ಜಿಪಂ ಸೇರಿ ಕೆಡಿಪಿ ಸಭೆಗಳು ನಡೆದಿದ್ದರೂ ಇದರ ಬಗ್ಗೆ ಚರ್ಚೆ ಕೂಡ ಮಾಡಿಲ್ಲ. ಮೇಲಧಿಕಾರಿಗಳು ಈ ಬಗ್ಗೆ ಕ್ರಮ ಏಕೆ ಕೈಗೊಂಡಿಲ್ಲ. ಮೇಲ್ತೊಟ್ಟಿ ಆದ ಮೇಲೆಯೂ ಹಲವು ಬಾರಿ ಕುಡಿವ ನೀರಿಗೆ ಹಣ ಖರ್ಚು ಮಾಡಲಾಗಿದೆ. ಹಾಗಾದರೇ ಆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.

ಕೂಡಲೇ ಸಂಬಂಧಿಸಿದ ಜಿಲ್ಲಾಧಿಕಾರಿ, ಜಿಪಂ ಸಿಇಒ ಇಬ್ಬರು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ನೀರಿನ ಸಮಸ್ಯೆ ಆಲಿಸಿ, ಪರಿಹರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ದೊಡ್ಡಭೀಮವ್ವ, ನಾಗಮ್ಮ, ಗಂಗಮ್ಮ, ಬನ್ನಮ್ಮ, ಸರೋಜಮ್ಮ, ಸೌಭಾಗ್ಯಮ್ಮ, ಶಂಕ್ರಮ್ಮ, ಮರೆಮ್ಮ, ಮಲ್ಲಮ್ಮ, ಭೀಮಾಶಂಕರ, ಅವಿನಾಶ, ಸಾಬಣ್ಣ, ತಾಯಪ್ಪ, ವೆಂಕಟೇಶ ಕೆ. ಶಾಪುರ, ಮಲ್ಲಪ್ಪ, ಶೇಖಪ್ಪ, ಜಗದೀಶ, ಚೆನ್ನಬಸಪ್ಪ, ದೇವಪ್ಪ, ಮಕ್ತರ ಪಟೇಲ್, ಮಲ್ಲಪ್ಪ ಇತರರಿದ್ದರು.