ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯಲ್ಲಿ ಮಳೆಯ ಅರ್ಭಟ ಜನರು ತತ್ತರಿಸುವಂತೆ ಮಾಡಿದೆ. ಮೂರು ದಿನಗಳಲ್ಲಿ ಸರಾಸರಿ 07 ಮಿ. ಮೀ. ಮಳೆ ಸುರಿದಿದ್ದು, ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರಸ್ತಕ ಬೆಳೆಗೆ ಅನುಕೂಲವಾಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗುರು ಹೇಳಿದ್ದಾರೆ.ಜಿಲ್ಲೆಯಲ್ಲಿ ಈ ಮೂರು ದಿನಗಳಲ್ಲಿ ಸರಾಸರಿ 07 ಮಿ.ಮೀ. ಮಳೆಯಾಗಿದ್ದು, ಯಾದಗಿರಿ, ಗುರುಮಠಕಲ್ ತಾಲೂಕುಗಳಲ್ಲಿ ಉತ್ತಮ ಮಳೆಯಾದರೆ ಶಹಾಪುರ, ಗೋಗಿ ವ್ಯಾಪ್ತಿಯಲ್ಲಿ ಅಲ್ಪಮಳೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಜು.19 ರವರೆಗೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಸಾಧಾರಣ 234 ಮಿ.ಮೀ. ಹಾಗೂ ಗರಿಷ್ಠ 319 ಮಿ.ಮೀ. ಮಳೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನೂ ಒಂದು ವಾರ ನಿರಂತರ ಮಳೆಯಾಗುವ ಸಾಧ್ಯತೆಗಳಿವೆ ಎಂದಿದ್ದಾರೆ.ಬಬಲಾದ ಗ್ರಾಮಕ್ಕೆ ಜಲಕಂಟಕ : ಮಳೆ ಅಬ್ಬರಕ್ಕೆ ವಡಗೇರಾ ತಾಲೂಕಿನ ಬಬಲಾದ ಗ್ರಾಮಕ್ಕೆ ಜಲಕಂಟಕ ಎದುರಾಗಿದೆ. ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಬಬಲಾದ ಗ್ರಾಮ ಜಲಾವೃತಗೊಂಡಿದೆ. ಗ್ರಾಮದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇಲ್ಲಿನ ಸರಕಾರಿ ಶಾಲೆಯೊಳಗೆ ನುಗ್ಗಿದ ಮಳೆ ನೀರು ಅಸ್ತವ್ಯಸ್ತಕ್ಕೆ ಕಾರಣವಾಗಿದೆ. ಬಬಲಾದ ಗ್ರಾಮದ 15 ಕ್ಕೂ ಹೆಚ್ಚು ಮನೆಯೊಳಗೆ ಮಳೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ. ಮನೆಯೊಳಗೆ ಹೊಕ್ಕ ನೀರನ್ನು ಖಾಲಿ ಮಾಡಲು ಮಹಿಳೆಯರು ಹರಸಾಹಸ ಪಡುತ್ತಿದ್ದರು. ಗ್ರಾಮದ ಜಲಾಲ್ ಬೀ ಅವರ ಮನೆ ಸಂಪೂರ್ಣ ಜಲಾವೃತಗೊಂಡಿದೆ. ಅಪಾರ ಪ್ರಮಾಣದ ಧವಸ ಧಾನ್ಯ ಹಾಗೂ ಅಗತ್ಯ ವಸ್ತುಗಳು ಹಾನಿಗಳಾಗಿವೆ. ಮತ್ತೊಬ್ಬರ ಮನೆಯಲ್ಲಿ ಜಲಾಲಬೀ ಸ್ಥಳಾಂತರಗೊಂಡಿದೆ. ಕೃಷಿ ಜಮೀನುಗಳಲ್ಲಿ ನೀರು ನುಗ್ಗಿ, ಬೆಳೆಗಳು ಹಾನಿಗೊಳಗಾಗಿವೆ. ರೈತ ವಲಯ ಆತಂಕಕ್ಕೀಡಾಗಿದೆ.
* ತಾಲೂಕುವಾರು ವಿವರ :ಶಹಾಪುರ - 61.03 ಮಿಮೀ,
ಸುರಪುರ - 75.08 ಮಿಮೀ ,ಯಾದಗಿರಿ - 57.07 ಮಿಮೀ,
ಗುರುಮಠಕಲ್ - 66.08 ಮಿಮೀ,ವಡಗೇರಾ - 46.02 ಮಿಮೀ
ಮತ್ತು ಹುಣಸಗಿ - 39.09 ಮಿಮೀ ಮಳೆಯಾಗಿದೆ.