ಸಾರಾಂಶ
ಯಾದಗಿರಿ ನಗರದ ಆರ್ಯಭಟ್ಟ ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ ಹೊನ್ನಪ್ಪ ಶೇ.98 ರಷ್ಟು ಅಂಕಗಳನ್ನು (587/600) ಪಡೆಯುವ ಮೂಲಕ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ಇಲ್ಲಿನ ಆರ್ಯಭಟ್ಟ ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ ಹೊನ್ನಪ್ಪ ಶೇ.98 ರಷ್ಟು ಅಂಕಗಳನ್ನು (587/600) ಪಡೆಯುವ ಮೂಲಕ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಹಿಂದಿಯಲ್ಲಿ 98 ಅಂಕಗಳು, ಇಂಗ್ಲಿಷ್‌ನಲ್ಲಿ 91, ಭೌತಶಾಸ್ತ್ರ-98, ರಸಾಯನಶಾಸ್ತ್ರ-100, ಜೀವಶಾಸ್ತ್ರ-100 ಹಾಗೂ ಗಣಿತಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾಳೆ.ಯಾದಗಿರಿ ನಿವಾಸಿಯಾಗಿರುವ ವಿದ್ಯಾರ್ಥಿನಿಯ ತಂದೆ ಹೊನ್ನಪ್ಪ ವೃತ್ತಿಯಲ್ಲಿ ಟೈಲರ್ ಆಗಿದ್ದು, ಈಕೆಯ ಸಾಧನೆ ಎಲ್ಲರ ಹುಬ್ಬೇರಿಸಿದೆ. ದಿನಕ್ಕೆ 10-11 ಗಂಟೆಗಳ ಕಾಲ ಅಭ್ಯಸಿಸುತ್ತಿದ್ದ ತನಗೆ ಪಾಲಕರು ಹಾಗೂ ಕಾಲೇಜು ಆಡಳಿತ ಮಂಡಳಿಯ ಸಹಕಾರ ಸಾಕಷ್ಟಿದೆ ಎಂದ ಸಾಕ್ಷಿ, ಅತ್ಯುತ್ತಮ ವೈದ್ಯಳಾಗುವ ಗುರಿ ಹೊಂದಿರುವುದಾಗಿ "ಕನ್ನಡಪ್ರಭ "ಕ್ಕೆ ತಿಳಿಸಿದಳು.
ಆರ್ಯಭಟ್ಟ ಸಂಸ್ಥೆಯ ಒಟ್ಟು 84 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ ಎಲ್ಲರೂ ಉತ್ತೀರ್ಣರಾಗಿರುವ ಮೂಲಕ ಶೇ. 100 ರಷ್ಟು ಫಲಿತಾಂಶ ಪಡೆದ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರಲ್ಲಿ 59 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಶೇ. 90ಕ್ಕಿಂತ ಹೆಚ್ಚಿಗೆ ಕಾಲೇಜಿನ ಶೇ.40 ರಷ್ಟು ವಿದ್ಯಾರ್ಥಿಗಳು ಅಂಕ ಪಡೆದಿದ್ದರೆ, ಶೇ.80ಕ್ಕಿಂತ ಮೇಲೆ ಶೇ.92 ರಷ್ಟು ವಿದ್ಯಾರ್ಥಿಗಳು ಅಂಕಗಳ ಪಡೆದಿದ್ದಾರೆ.ಇದೇ ಕಾಲೇಜಿನ ರಿಷಿತಾ ಬಾದಾಮಿ-576 ಅಂಕಗಳನ್ನು, ಫರೀಹಾ ನೂರೇನ್-575 ಅಂಕಗಳು, ಸಫೂರಾ ಬೇಗಂ-573, ಉತ್ತಿ ವೈಷ್ಣವಿ-571, ಸ್ಫೂರ್ತಿ ಟಿ, ತೇಜಸ್ವಿನಿ, ವಸುಧಾ ವಾಟಕರ್ ಅವರುಗಳು 562 ಅಂಕಗಳನ್ನು, ಎಚ್. ಎಂ. ವಿಕಾಸ ಹಾಗೂ ಅನಹಾ -560 ಅಂಕಗಳನ್ನು ಪಡೆಯುವ ಮೂಲಕ ಪಾಲಕರು, ಕಾಲೇಜು ಹಾಗೂ ಜಿಲ್ಲೆಗೆ ಹೆಮ್ಮೆ ಮೂಡಿಸಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ಸುಧಾಕರ ರೆಡ್ಡಿ ಹರ್ಷ ವ್ಯಕ್ತಪಡಿಸಿ, ಮಕ್ಕಳನ್ನು ಅಭಿನಂದಿಸಿದ್ಸಾರೆ.