ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಶಹಾಪುರ ತಾಲೂಕಿನ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ವಿತರಣೆಯ ವೇಳೆ, ಅಲ್ಲಿನ ಪ್ರಾಂಶುಪಾಲರು ಅವುಗಳ ನೀಡುವ ಫೋಟೋ ತೆಗೆಸಿಕೊಳ್ಳುತ್ತಿದ್ದರಲ್ಲದೆ, ಅದನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಅಲ್ಲಿನ ಬಾಲಕರಿಂದ ಬಾಲಕಿಯರಿಗೆ ವಿವರಣೆ ನೀಡಿಸುತ್ತಿದ್ದ ಕುರಿತು ಮಕ್ಕಳ ದೂರನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಪ್ರಾಂಶುಪಾಲರು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಸೇರಿ ಐವರಿಗೆ ಸಮನ್ಸ್ ಜಾರಿ ಮಾಡಿ ವಿವರಣೆ ನೀಡುವಂತೆ ಸೂಚಿಸಿದೆ.ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ರವೀಂದ್ರ ಹೊನೊಲೆ ಅವರು ಜ.29 ರಂದು ಭೇಟಿ ನೀಡಿದ್ದ ವೇಳೆ ಮಕ್ಕಳು ಇಂತಹ ನೋವನ್ನು ವ್ಯಕ್ತಪಡಿಸಿದ್ದರು. ಅಲ್ಲಿನ ಅವ್ಯವಸ್ಥೆ ಕಂಡು ಆಯೋಗದ ಸದಸ್ಯ ಕೋಸಂಬೆ ಹಾಗೂ ನ್ಯಾ. ರವೀಂದ್ರ ಹೊನೊಲೆ ಅವರು ಆಘಾತ ವ್ಯಕ್ತಪಡಿಸಿದ್ದರು.
ತಮಗೆ ಸ್ಯಾನಿಟರಿ ಪ್ಯಾಡ್‌ಗಳ ವಿತರಣೆಯ ವೇಳೆ ಪ್ರಾಂಶುಪಾಲರು ಪ್ರತಿಯೊಬ್ಬರಿಗೆ ನೀಡುವ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಸ್ಯಾನಿಟರಿ ಪ್ಯಾಡ್‌ಗಳನ್ನು ಹೇಗೆ ಉಪಯೋಗಿಸಬೇಕು ಎಂಬ ಬಗ್ಗೆ ಬಾಲಕರಿಂದ ವಿವರಿಸಲಾಗುತ್ತಿದ್ದು, ಇದು ಭಾರಿ ಮುಜುಗರ ತರುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮಕ್ಕಳ ಆಯೋಗದ ಅಧ್ಯಕ್ಷ ನಾಗಣ್ಣಗೌಡ, ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ/ವಾರ್ಡನ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಉಪ ನಿರ್ದೇಶಕರು ಮತ್ತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಂಟಿ ನಿರ್ದೇಶಕರ ವಿರುದ್ಧ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಾಯಿದೆ-2005, ಸೆಕ್ಷನ್ 14 (1), (ಎ) ಅಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಫೆ. 7 ರಂದು ಆಯೋಗದ ಬೆಂಗಳೂರು ಕಚೇರಿಗೆ ಬಂದು ಹಾಜರಾಗಿ, ವಿವರಣೆ ನೀಡುವಂತೆ ಸೂಚಿಸಲಾಗಿದೆ.
ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಸ್ಯಾನಿಟರಿ ಪ್ಯಾಡ್ ವಿತರಣೆ ವೇಳೆ ಫೋಟೋ ತೆಗೆಯುತ್ತಿರುವ ಕುರಿತು ಮಕ್ಕಳು ನೋವು ತೋಡಿಕೊಂಡಿದ್ದರು. ಅಲ್ಲಿನ ಪರಿಸ್ಥಿತಿ ಹೀನಾಯವಾಗಿದೆ.ಶಶಿಧರ್ ಕೋಸಂಬೆ,