ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಕಕ್ಕಬೆ ಪಾಡಿ ಶ್ರೀ ಇಗುತ್ತಪ್ಪ ದೇವಾಲಯಕ್ಕೆ ಭೇಟಿ ನೀಡಿದ ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಾಡಿನಲ್ಲಿಡೆ ಉತ್ತಮ ಮಳೆ, ಬೆಳೆ ಹಾಗೂ ಸುಭಿಕ್ಷೆಗಾಗಿ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭ ದೇವತಕ್ಕರು, ತಕ್ಕ ಮುಖ್ಯಸ್ಥರಾದ ಪರದಂಡ ಸುಮನ್ ಕಾವೇರಪ್ಪ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವಾಲಯದ ಮುಖ್ಯ ಅರ್ಚಕ ಕುಶ ಭಟ್ ಪೂಜಾ ವಿಧಿ ವಿಧಾನ ನೆರವೇರಿಸಿ ತೀರ್ಥ ಪ್ರಸಾದ ನೀಡಿ ಪ್ರಾರ್ಥಿಸಿ ಶುಭ ಹಾರೈಸಿದರು.
ಇದಕ್ಕೂ ಮೊದಲು ಕಕ್ಕಬೆ ಪಟ್ಟಣದಲ್ಲಿ ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖರು ಸಂಸದರನ್ನು ಹೂಮಲೆಯಾಗಿ ಆಧಾರದಿಂದ ಸ್ವಾಗತಿಸಿ ದೇವಾಲಯಕ್ಕೆ ಕರೆ ತರಲಾಯಿತು.ಇದೇ ಸಂದರ್ಭ ದೇವಾಲಯದಲ್ಲಿ ಭಕ್ತಾದಿಗಳಿಂದ ಮಾಮೂಲು ಜರಗುವ ತುಲಾಭರ ಸೇವೆ ಹಾಗೂ ದೇವರ ಪ್ರದರ್ಶನ ಬಲಿ ಉತ್ಸವದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಎಂಎಲ್ಸಿ ಮಂಡೆಪಂಡ ಸುಜಾ ಕುಶಾಲಪ್ಪ, ಮಾಜಿ ಶಾಸಕ, ಮಾಜಿ ವಿಧಾನಸಭಾ ಸ್ಪೀಕರ್ ಕೆ ಜಿ ಬೋಪಯ್ಯ, ಬಿಜೆಪಿ ಜಿಲ್ಲಾ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರೀನಾ ಪ್ರಕಾಶ್, ರಾಜ್ಯ ರೈತ ಮೋರ್ಚಾ ಕಾರ್ಯಕಾರಿ ಸಮಿತಿ ಯಮುನಾ ಚಂಗಪ್ಪ, ನೆಲ್ಲಚಂಡ ಕಿರಣ್ ಕಾರ್ಯಪ್ಪ, ಚಂಡಿರ ಜಗದೀಶ್, ಉಮಾ ಪ್ರಭು, ದಾಟಿ ಅಯ್ಯಪ್ಪ, ಪಂಚಾಯಿತಿ ಅಧ್ಯಕ್ಷ ಶಿಲ್ಪ ಲೋಕೇಶ್, ದೇವಾಲಯದ ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ, ಬಿಜೆಪಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.