ಮೈಸೂರು ಅರಮನೆಯಲ್ಲಿ ಯದುವೀರ್‌ ಖಾಸಗಿ ದರ್ಬಾರ್‌

| Published : Oct 04 2024, 01:09 AM IST

ಮೈಸೂರು ಅರಮನೆಯಲ್ಲಿ ಯದುವೀರ್‌ ಖಾಸಗಿ ದರ್ಬಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ದಸರಾ ನವರಾತ್ರಿ ಹಿನ್ನೆಲೆಯಲ್ಲಿ ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆಯಲ್ಲಿ ಸಂಪ್ರದಾಯದಂತೆ ಖಾಸಗಿ ದರ್ಬಾರ್ ನಡೆಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ನವರಾತ್ರಿ ಹಿನ್ನೆಲೆಯಲ್ಲಿ ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆಯಲ್ಲಿ ಸಂಪ್ರದಾಯದಂತೆ ಖಾಸಗಿ ದರ್ಬಾರ್ ನಡೆಸಿದರು.

ಶರನ್ನವರಾತ್ರಿಯ ಆರಂಭದ ದಿನವಾದ ಗುರುವಾರ ರಾಜವಂಶಸ್ಥರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಂಪ್ರದಾಯದಂತೆ ಮೊದಲಿಗೆ ಯದುವೀರ್ ಒಡೆಯರ್‌ಗೆ ಎಣ್ಣೆಶಾಸ್ತ್ರ ನೆರವೇರಿಸಲಾಯಿತು. ಬೆಳಗ್ಗೆ 5.45 ರಿಂದ 6.10 ರ ಒಳಗಿನ ಶುಭ ಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಸಿಂಹದ ಮುಖ ಜೋಡಿಸಲಾಯಿತು. ಚಾಮುಂಡಿ ತೊಟ್ಟಿಯಲ್ಲಿ ಯದುವೀರ್‌ ಅವರಿಗೆ ಬೆಳಗ್ಗೆ 7.45ರ ಸುಮಾರಿನಲ್ಲಿ ಕಂಕಣ ಧಾರಣೆ ನೆರವೇರಿಸಲಾಯಿತು.

ಖಾಸಗಿ ದರ್ಬಾರ್ ಆರಂಭದ ಹಿನ್ನೆಲೆ ಅರಮನೆಯ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸು ಆಗಮಿಸಿತು. ಬೆಳಗ್ಗೆ 11ಕ್ಕೆ ಕಳಸ ಪೂಜೆ ಮತ್ತು ಸಿಂಹಾಸನ ಪೂಜೆ ನೆರವೇರಿಸಿದ ಯದುವೀರ್‌ ಅವರು 11.35 ರಿಂದ 12.05ರ ಒಳಗೆ ಸಿಂಹಾಸನಾರೋಹಣ ಮಾಡುವ ಮೂಲಕ ಖಾಸಗಿ ದರ್ಬಾರ್ ಆರಂಭಿಸಿದರು. ಇದಕ್ಕೂ ಮುನ್ನ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಹಾಕಿದರು.

ಯುದುವೀರ್‌ ಅವರಿಗೆ ಅರಮನೆಯ ಪುರೋಹಿತರು, ಆಗಮಿಕರು ವಿವಿಧ ದೇವಾಲಯಗಳಿಂದ ತಂದಿದ್ದ ಪ್ರಸಾದವನ್ನು ನೀಡಿದರು. ಪ್ರಸಾದ ಸ್ವೀಕರಿಸಿದ ಯದುವೀರ್‌, ಅರಮನೆ ಪುರೋಹಿತರಿಗೆ ಗೌರವ ಕಾಣಿಕೆ ಸಲ್ಲಿಸಿದರು. ಬಳಿಕ ಸಾರ್ವಜನಿಕರಿಗೆ ಗೌರವ ಸಲ್ಲಿಸಿ, ಸಿಂಹಾಸನದ ಮೇಲೆಯೇ ಎದ್ದು ನಿಂತು ಕಾಯೋ ಶ್ರೀಗೌರಿ ಹಾಡಿಗೆ ಗೌರವ ಸೂಚಿಸಿದರು. ಇದಕ್ಕೂ ಮುನ್ನ ಯದುವೀರ್‌ ಅವರ ಪತ್ನಿ ತ್ರಿಷಿಕಾ ಅವರು ಕಂಕಣ ಧರಿಸಿ ಬಂದ ಯದುವೀರ್‌ ಅವರ ಪಾದಪೂಜೆ ನೆರವೇರಿಸಿದರು.