ಸಾರಾಂಶ
ಶಿರಸಿ: ಯಜ್ಞ-ಯಾಗಾದಿಗಳ ಅನುಷ್ಠಾನದಿಂದ ಸಾಮೂಹಿಕ ರೋಗಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ತಾಲೂಕಿನ ರೇವಣಕಟ್ಟಾದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಲೋಕಣಲ್ಯಾಣಾರ್ಥವಾಗಿ ಸಹಸ್ರಾಧಿಕ (೧೦೦೮) ನಾರಿಕೇಲ ಗಣಹವನದ ನಿಮಿತ್ತ ಹಮ್ಮಿಕೊಂಡ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ಯಜ್ಞಗಳ ಅನುಷ್ಠಾನ ರೋಗಗಳಿಗೆ ಉತ್ತಮ ಪರಿಹಾರವಾಗಿದೆ. ಮನುಷ್ಯ, ಮೃಗ, ಮರಗಳಿಗೆ ರೋಗಗಳು ಬಂದಿವೆ. ಸಾಮೂಹಿಕ ರೋಗಗಳಿಗೆ ಯಜ್ಞಗಳ ಅನಿಷ್ಠಾನ ಸರಿಯಾದ ಪರಿಣಾಮ ಬೀರುತ್ತದೆ. ಕ್ಯಾನ್ಸರ್, ಹೃದಯಾಘಾತ ಸೇರಿದಂತೆ ಮಾರಣಾಂತಿಕ ರೋಗಗಳು ಹೆಚ್ಚಾಗುತ್ತಿವೆ. ಅಡಕೆ ಮರಗಳಿಗೆ ರೋಗ ನೋಡಿ ಕಂಗಾಲಾಗಿದ್ದಾರೆ. ಗೋವುಗಳಿಗೆ ರೋಗ ಬಂದಿವೆ. ಮೂರು ಮಕಾರಗಳಿಗೆ ರೋಗದಿಂದ ಹೆದರಿದ್ದಾರೆ. ವಿಜ್ಞಾನಿಗಳ ದೃಷ್ಟಿಯಲ್ಲಿ ಪರಿಹಾರವಿಲ್ಲ. ದೇವರಿಗೆ ಶರಣಾಗತಿ ಆಗುವುದು ಅನಿವಾರ್ಯ ಎಂದು ಹೇಳಿದರು. ಮನೆಗಳಲ್ಲಿ, ವ್ಯಕ್ತಿ ವ್ಯಕ್ತಿಗಳಲ್ಲಿ ತೀವ್ರವಾದ ಯಜ್ಞಗಳ ಅನುಷ್ಠಾನದ ಕೊರತೆ ಕಾಣುತ್ತಿದೆ. ಭಗವದ್ಗೀತೆಯಲ್ಲಿ ಸಾತ್ವಿಕ, ರಾಜಸ, ತಾಮಸ ಯಜ್ಞಗಳ ಉಲ್ಲೇಖವಿದೆ. ಭಗವದ್ಗೀತೆ ಓದುವುದರಿಂದ ಹಿಂದೂ ಧರ್ಮದ ಮರ್ಮ ಅರ್ಥ ಮಾಡಿಕೊಳ್ಳಬಹುದು. ತಿಳಿದು, ಶ್ರದ್ಧೆ, ಏಕಾಗ್ರತೆಯಿಂದ ಯಜ್ಞ ಮಾಡಿದಾಗ ಶಕ್ತಿ ಹೆಚ್ಚುತ್ತದೆ. ಭಗವದ್ಗೀತೆ ಪಠಿಸಿ, ಅರ್ಥ ಮಾಡಿಕೊಳ್ಳಬೇಕು. ಮನೆಗಳಲ್ಲಿ ಪಂಚ ಮಹಾಯಜ್ಞಗಳನ್ನು ಮಾಡಬಹುದು. ದೇವ ಯಜ್ಞ, ಪಿತೃ ಯಜ್ಞ, ಬ್ರಹ್ಮ ಯಜ್ಞ, ಭೂತ ಯಜ್ಞ, ಮನುಷ್ಯ ಯಜ್ಞಗಳು ಮನೆಗಳಲ್ಲಿ ಅನುಷ್ಠಾನವಾದರೆ ಅನೇಕ ಸಮಸ್ಯೆಗಳು ದೂರವಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ವೇದ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದರಿಂದ ವೇದಗಳ ಅನುಸಂಧಾನ ಕಡಿಮೆಯಾಗಿದ್ದು, ಸಮಗ್ರ ವೇದ ಪಾರಾಯಣ ಮಾಡಿಸುವುದರಿಂದ ಬ್ರಹ್ಮ ಯಜ್ಞದ ಅನುಷ್ಠಾನವಾಗುತ್ತದೆ. ಸ್ವದೇಶಿ ಗೋವುಗಳ ಸಾಕಾಣಿಕೆ ಬಗ್ಗೆ ಆಸಕ್ತಿ ವಹಿಸಬೇಕು. ದೇಸಿ ತಳಿಯ ಗೋವುಗಳ ಹಾಲಿನಲ್ಲಿ ಶಕ್ತಿಯಿದೆ. ಹಿಂದೂ ಧರ್ಮದಲ್ಲಿ ಒಂದೇ ಸಂತತಿಯಿಂದ ಜೀವನ ಕ್ರಮ ಹಾಳಾಗಿದೆ. ಆಧುನಿಕ ಜೀವನ ಕ್ರಮದಿಂದ ವೇದ, ಶಾಸ್ತ್ರ ಓದುವವರ ಸಂಖ್ಯೆ ಕಡಿಮೆಯಾಗಿದೆ. ಮನಸ್ಸು ಮಾಡಿದರೆ ಯಜ್ಞ-ಯಾಗಾದಿಗಳನ್ನು ಅನುಷ್ಠಾನ ಮಾಡಬಹುದು. ಉಪನಯನ ಸಂಸ್ಕಾರ ಆದವರು ಕಡ್ಡಾಯವಾಗಿ ಗಾಯತ್ರಿಮಂತ್ರ ಜಪ ಮಾಡಬೇಕು. ಮಾತೆಯರು ಸೋಸ್ತ್ರ ಹಾಗೂ ಬೇರೆ ಮಂತ್ರಗಳ ಜಪದಲ್ಲಿ ತೊಡಗಿಕೊಳ್ಳಬೇಕು. ಇದರಿಂದಲೂ ತಕ್ಕಮಟ್ಟಿನ ಕೊರತೆ ಪರಿಹಾರವಾಗುತ್ತದೆ. ಯಜ್ಞಗಳ ಜೀವನ ಕ್ರಮಕ್ಕೆ ಹೋಗಬೇಕು ಎಂದು ಹೇಳಿದರು.ಇದೇ ವೇಳೆ ಗಣಪತಿ ಹೆಗಡೆ ಬಪ್ಪನಕೊಡ್ಲು ಅವರನ್ನು ಶ್ರೀಗಳು ಸನ್ಮಾನಿಸಿದರು.
ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಸಂತ ಹೆಗಡೆ ಸಿರೀಕುಳಿ, ಕರೂರ ಸೀಮಾ ಅಧ್ಯಕ್ಷ ಉಮಾಪತಿ ಭಟ್ಟ ಮತ್ತಿತರರು ಇದ್ದರು. ಗಜಾನನ ಭಟ್ಟ ರೇವಣಕಟ್ಟಾ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಭಟ್ಟ ಬಳ್ಳಿ ಕಾರ್ಯಕ್ರಮ ನಿರೂಪಿಸಿದರು.ಆಧುನಿಕ ಶಿಕ್ಷಣದ ಭರಾಟೆಯಲ್ಲಿ ನಮ್ಮತನವನ್ನು ಮರೆಯುತ್ತಿದ್ದೇವೆ. ಇದು ತಪ್ಪು, ಆಧುನಿಕ ಜೀವನ ಪದ್ಧತಿಯಲ್ಲಿ ಅಪಾಯಕಾರಿ ಅಂಶಗಳಿವೆ. ವೇದಶಾಸ್ತ್ರಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು ಎನ್ನುತ್ತಾರೆ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ.