ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ ವತಿಯಿಂದ 2026 ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭ ಬೆಂಗಳೂರಿನ ನಾಗಸಂದ್ರ ಕರಿಓಬನಹಳ್ಳಿ ‘ಶಬರಿಗಿರಿ’ಯಲ್ಲಿ ಶನಿವಾರ ನಡೆಯಿತು.
ಮಂಗಳೂರು: ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ ವತಿಯಿಂದ 2026 ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭ ಬೆಂಗಳೂರಿನ ನಾಗಸಂದ್ರ ಕರಿಓಬನಹಳ್ಳಿ ‘ಶಬರಿಗಿರಿ’ಯಲ್ಲಿ ಶನಿವಾರ ನಡೆಯಿತು.ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ. ಶ್ಯಾಮ ಭಟ್ ದಿನದರ್ಶಿಕೆ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ ಯಕ್ಷಗಾನ ಕಲಾವಿದರನ್ನು ಪ್ರೋತ್ಸಾಹಿಸುವ ಜತೆಗೆ ಅಗಲಿದ ಕಲಾವಿದರ ಭಾವಚಿತ್ರ, ವಿವರವನ್ನು ದಿನದರ್ಶಿಕೆಯಲ್ಲಿ ಮುದ್ರಿಸುವ ಮೂಲಕ ಯಕ್ಷಗಾನ ಹಾಗೂ ಕಲಾವಿದರಿಗೆ ಗೌರವ ಸಲ್ಲಿಸಿದೆ. ಕಳೆದ ಮೂರು ವರ್ಷಗಳಿಂದ ಇಂತಹಾ ದಿನದರ್ಶಿಕೆ ಹೊರತರುತ್ತಿರುವುದು ಶ್ಲಾಘನೀಯ. ಯಕ್ಷಗಾನ ಅಭಿಮಾನಿಗಳು ಈ ದಿನದರ್ಶಿಕೆಯನ್ನು ಇನ್ನಷ್ಟು ಪ್ರಚಾರ ಮಾಡಿ ಎಲ್ಲ ಮನೆಗಳಿಗೆ ತಲುಪಿಸಬೇಕು ಎಂದರು.
ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ ಕಾರ್ಯದರ್ಶಿ ಶ್ಯಾಮ ಸೂರ್ಯ ಮುಳಿಗದ್ದೆ ಮಾತನಾಡಿ, ಕ್ಯಾಲೆಂಡರ್‌ನಲ್ಲಿ ಅಗಲಿದ ಮಹಾನ್ ಯಕ್ಷಗಾನ ಕಲಾವಿದರ ಸ್ಮರಣೆಯ ಭಾವಚಿತ್ರಗಳು ಹಾಗೂ ಸಂಕ್ಷಿಪ್ತ ಪರಿಚಯವನ್ನು ಸೇರಿಸುವ ಮೂಲಕ ಅವರು ಕೇವಲ ನೆನಪುಗಳಾಗಿ ಉಳಿಯದೆ, ಕಲಾಸಕ್ತರ ಮನೆಯಲ್ಲೂ ಮನದಲ್ಲೂ ಸದಾ ಇರಲಿ ಎಂಬ ಆಶಯವನ್ನು ಟ್ರಸ್ಟ್ ಹೊಂದಿದೆ. ದಿನದಿನವೂ ಕ್ಯಾಲೆಂಡರ್ ನೋಡುವ ಕ್ಷಣದಲ್ಲಿ ಅವರ ಕಲಾಸಾಧನೆ ನಮ್ಮೊಳಗೆ ಮರುಜೀವ ಪಡೆಯಲಿ ಎಂಬುದು ಇದರ ಮೂಲ ಉದ್ದೇಶ ಎಂದರು.ಯಕ್ಷ ಮಿತ್ರರು ಬೆಂಗಳೂರು ಟ್ರಸ್ಟ್ ಗೌರವಾಧ್ಯಕ್ಷ ಆರ್.ಕೆ. ಭಟ್ ಬೆಳ್ಳಾರೆ ಅತಿಥಿಯಾಗಿದ್ದರು. ಟ್ರಸ್ಟ್ ಉಪಾಧ್ಯಕ್ಷ ಕಿರಣ್ ಕುಮಾರ್ ಇದ್ದರು. ಈ ಸಂದರ್ಭ ಡಾ.ಟಿ. ಶ್ಯಾಮ ಭಟ್ ಹಾಗೂ ಕಲಾಪೋಷಕ ಆರ್.ಕೆ. ಭಟ್ ಬೆಳ್ಳಾರೆ ಅವರನ್ನು ಗೌರವಿಸಲಾಯಿತು. ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ಮತ್ತು ಬಳಗದಿಂದ ಭರತನಾಟ್ಯ ಹಾಗೂ ಭವ್ಯಶ್ರೀ ಕುಲ್ಕುಂದ ಮತ್ತು ಸಂಪೂರ್ಣ ಮಹಿಳಾ ಕಲಾವಿದರನ್ನು ಒಳಗೊಂಡ ತಂಡದಿಂದ ಯಕ್ಷಗಾನ ವೈಭವ ನೆರವೇರಿತು.