ಸಾರಾಂಶ
ಯಕ್ಷದೀವಿಗೆ ಸಂಸ್ಥೆಯು ಹ್ಯುಂಡೈ ಸಂಸ್ಥೆಯ ರಾಷ್ಟ್ರ ಮಟ್ಟದ ಪ್ರತಿಷ್ಠಿತ ‘ಆರ್ಟ್ ಫಾರ್ ಹೋಪ್’ ಪುರಸ್ಕಾರಕ್ಕೆ ಪಾತ್ರವಾಗಿದೆ.
ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಯಕ್ಷದೀವಿಗೆ ಸಂಸ್ಥೆಯು ಹ್ಯುಂಡೈ ಸಂಸ್ಥೆಯ ರಾಷ್ಟ್ರ ಮಟ್ಟದ ಪ್ರತಿಷ್ಠಿತ ‘ಆರ್ಟ್ ಫಾರ್ ಹೋಪ್’ ಪುರಸ್ಕಾರಕ್ಕೆ ಪಾತ್ರವಾಗಿದೆ. ನವದೆಹಲಿಯಲ್ಲಿ ನಡೆದ ಕಲಾ ಪ್ರದರ್ಶನದಲ್ಲಿ ಸಂಸ್ಥೆಯ ಅಧ್ಯಕ್ಷೆ ಆರತಿ ಪಟ್ರಮೆ ಹಾಗೂ ಕೋಶಾಧಿಕಾರಿ ಡಾ.ಸಿಬಂತಿ ಪದ್ಮನಾಭ ಕೆ.ವಿ. ಗೌರವ ಸ್ವೀಕರಿಸಿದರು. ಹ್ಯುಂಡೈ ಮೋಟಾರ್ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಉನ್ಸೂ ಕಿಮ್ ಹಾಗೂ ಹಿರಿಯ ಛಾಯಾಗ್ರಾಹಕ ಆದಿತ್ಯ ಆರ್ಯ ಪ್ರಶಸ್ತಿ ಪ್ರದಾನ ಮಾಡಿದರು.‘ಆರ್ಟ್ ಫಾರ್ ಹೋಪ್’ ಯೋಜನೆಯಡಿಯಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ಸಲ್ಲಿಕೆಯಾದ 520 ಪ್ರಸ್ತಾವನೆಗಳಲ್ಲಿ 10 ಸಂಸ್ಥೆಗಳನ್ನು ಹಾಗೂ 40 ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಹೀಗೆ ಆಯ್ಕೆಯಾದ ಸಂಸ್ಥೆಗಳಲ್ಲಿ ಯಕ್ಷದೀವಿಗೆಯೂ ಒಂದಾಗಿದೆ. ಈ ಅನುದಾನದಡಿಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ‘ಚಂದ್ರಮಂಡಲ ಚರಿತೆ’ ಎಂಬ ಯಕ್ಷಗಾನವನ್ನು ಯಕ್ಷದೀವಿಗೆ ತಂಡವು ಸಿದ್ಧಪಡಿಸಿತ್ತು. ಹಿರಿಯ ಕಲಾವಿದ ಗಣರಾಜ ಕುಂಬ್ಳೆ ಪ್ರಸಂಗವನ್ನು ರಚಿಸಿದ್ದರು. ನವದೆಹಲಿಯ ಟ್ರಾವಂಕೋರ್ ಪ್ಯಾಲೇಸ್‌ನಲ್ಲಿ ನಡೆದ ಕಲಾಮೇಳದಲ್ಲಿ ಯಕ್ಷಗಾನದ ಸಾಕ್ಷ್ಯಚಿತ್ರ ಹಾಗೂ ಆಯ್ದ ಭಾಗವನ್ನು ಪ್ರದರ್ಶಿಸಲಾಯಿತು.