ಸಾರಾಂಶ
ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ ಅವರು ದಾನವಾಗಿ ನೀಡಿದ ಕೊಡವೂರಿನ ಲಕ್ಷ್ಮೀನಗರ ಗರ್ಡೆ ಬಳಿಯ 50 ಸೆಂಟ್ಸ್ ಜಮೀನಿನಲ್ಲಿ 20 ಮನೆಗಳ ಗೃಹಸಮುಚ್ಚಯ ನಿರ್ಮಿಸಲಾಗುತಿದೆ.ಶನಿವಾರ ಬೆಳಗ್ಗೆ 10 ಗಂಟೆಗೆ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ, ಉಡುಪಿ
ಮಂಗಳೂರಿನ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗಾಗಿ 100 ಮನೆಗಳನ್ನು ನಿರ್ಮಿಸಿಕೊಡುವ ‘ಯಕ್ಷಧ್ರುವ ಪಟ್ಲಾಶ್ರಯ’ ಯೋಜನೆ ಹಾಕಿಕೊಳ್ಳಲಾಗಿದೆ. ಅದರಂತೆ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ ಅವರು ದಾನವಾಗಿ ನೀಡಿದ ಕೊಡವೂರಿನ ಲಕ್ಷ್ಮೀನಗರ ಗರ್ಡೆ ಬಳಿಯ 50 ಸೆಂಟ್ಸ್ ಜಮೀನಿನಲ್ಲಿ 20 ಮನೆಗಳ ಗೃಹಸಮುಚ್ಚಯ ನಿರ್ಮಿಸಲಾಗುತಿದೆ.ಶನಿವಾರ ಬೆಳಗ್ಗೆ 10 ಗಂಟೆಗೆ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.ಈ ಬಗ್ಗೆ ಗುರುವಾರ ಟ್ರಸ್ಟ್‌ನ ಉಡುಪಿ ಘಟಕದ ಅಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ ಅವರು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.
ಅಂದು ಬೆಳಗ್ಗೆ 9 ರಿಂದ ತೆಂಕು-ಬಡಗು ‘ನಾದವೈಕುಂಠ’ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಸ್ಥಳದಾನಿ ಪ್ರೋ.ಎಮ್ಎಲ್ ಸಾಮಗ ದಂಪತಿ, ಟ್ರಸ್ಟ್‌ನ ಗೌರವಾಧ್ಯಕ್ಷ ಡಾ.ಸದಾಶಿವ ಶೆಟ್ಟಿ ಕನ್ಯಾನ, ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮೊದಲಾದವರು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.ಪೌಂಡೇಶನ್ ನ ಯಕ್ಷದ್ರುವ ಪಟ್ಲಾಶ್ರಯ ಯೋಜನೆಯಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100 ಮನೆಗಳನ್ನು ನಿರ್ಮಿಸುವ ಗುರಿ ಇದೆ. ಅವುಗಳಲ್ಲಿ ಈಗಾಗಲೇ 54 ಮನೆಗಳನ್ನು ನಿರ್ಮಿಸಿ ಬಡ ಕಲಾವಿದರಿಗೆ ಹಸ್ತಾಂತರಿಸಲಾಗಿದೆ. ಉಡುಪಿಯಲ್ಲೀಗ 20 ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಹರಿಪ್ರಸಾದ್ ರೈ, ಮಹಿಳಾ ವಿಭಾಗದ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಡಾ. ವಿಟ್ಲ ಹರೀಶ್ ಜೋಷಿ, ಸಂಚಾಲಕ ಸುಧಾಕರ್ ಆಚಾರ್ಯ, ಸದಸ್ಯ ಅರುಣ್‌ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.