ಸರ್ಕಾರಿ ಶಾಲಾ ಮಕ್ಕಳಿಗೆ ಯಕ್ಷಧ್ರುವ ಫೌಂಡೇಶನ್‌ ಯಕ್ಷ ಶಿಕ್ಷಣ: ಪಟ್ಲ

| Published : May 01 2024, 01:19 AM IST

ಸರ್ಕಾರಿ ಶಾಲಾ ಮಕ್ಕಳಿಗೆ ಯಕ್ಷಧ್ರುವ ಫೌಂಡೇಶನ್‌ ಯಕ್ಷ ಶಿಕ್ಷಣ: ಪಟ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಮಂಗಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸರ್ಕಾರಿ ಶಾಲೆಯ ಮಕ್ಕಳಿಗೆ ಯಕ್ಷ ಶಿಕ್ಷಣ ನೀಡಲು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮುಂದಾಗಿದೆ ಎಂದು ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ , ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಮಂಗಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ನಾಲ್ಕು ಸಾವಿರಕ್ಕೂ ಅಧಿಕ ಮಕ್ಕಳಿಗೆ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ವೇದಿಕೆ ಒದಗಿಸುವ ಪ್ರಯತ್ನವೂ ನಡೆಯಲಿದೆ ಎಂದರು. ಸರ್ಕಾರಿ ಶಾಲೆಯ ಮಕ್ಕಳಿಗೆ ಹೆಚ್ಚಿನ ಸೌಲಭ್ಯಗಳು ಇರುವುದಿಲ್ಲ. ಅವರಿಗೆ ಬಾಲ್ಯದಲ್ಲೇ ಯಕ್ಷಗಾನದ ಬಗ್ಗೆ ಜ್ಞಾನ ಹಾಗೂ ಅಭಿರುಚಿ ಮೂಡಿಸುವುದು ಟ್ರಸ್ಟ್ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.ದಶಕಗಳ ಹಿಂದೆ ಯಕ್ಷಗಾನ ಕಲಾವಿದರು ಕನಿಷ್ಠ ಸಂಬಳ ಪಡೆದು ಮೇಳದಲ್ಲಿ ಕೆಲಸ ಮಾಡುತ್ತಿದ್ದರು. ಆದರೂ ತಮ್ಮ ಕುಟುಂಬದ ನಿರ್ವಹಣೆಯ ಜತೆ ಕಲೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಕಲಾವಿದರು ಯಾವುದೇ ತೊಂದರೆಗೊಳಗಾದರೆ ಬದುಕು ಸಾಗಿಸುವುದೇ ಕಷ್ಟಕರವಾಗಿತ್ತು. ಇಂತಹ ಸ್ಥಿತಿಯನ್ನು ಕಂಡು ಕಲಾವಿದರಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಬೇಕೆನ್ನುವ ಆಶಯ ಉಂಟಾಯಿತು. ದೇವರ ದಯೆಯಿಂದ ನನ್ನನ್ನು ಪ್ರೀತಿಸುವ ಯಕ್ಷಗಾನ ಕಲೆಯನ್ನು ಗೌರವಿಸುವ ದೊಡ್ಡ ಜನ ಸಮೂಹದ ಬೆಂಬಲ ನನಗೆ ದೊರೆಯಿತು. ಇದರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪನೆ ಮಾಡಲಾಯಿತು ಎಂದು ಅವರು ಹೇಳಿದರು.12 ಕೋಟಿ ರು. ನೆರವು: ಕಳೆದ ಎಂಟು ವರ್ಷಗಳಲ್ಲಿ ಟ್ರಸ್ಟ್ ಮೂಲಕ 12 ಕೋಟಿ ರು. ನೆರವು ನೀಡಲು ಸಾಧ್ಯವಾಗಿದೆ. 27 ಅಶಕ್ತ ಕಲಾವಿದರಿಗೆ ಮನೆ ನಿರ್ಮಿಸಿ ಹಸ್ತಾಂತರಿಸಲಾಗಿದೆ. ಹಿರಿಯ ಯಕ್ಷಗಾನ ಕಲಾವಿದ ಪ್ರೊ.ಎಂ.ಎಲ್. ಸಾಮಗರು ಮಲ್ಪೆ ಬಳಿ ಸುಮಾರು ಅರ್ಧ ಎಕರೆ ಜಾಗ ದಾನ ನೀಡಿದ್ದು, ಅಲ್ಲಿ ಸುಮಾರು 2 ಕೋಟಿ ರು. ವೆಚ್ಚದಲ್ಲಿ ದಾನಿಗಳಾದ ಆರ್.ಎಸ್.ಶಾರದಾ ಪ್ರಸಾದ್- ನಳಿನಿ ಪ್ರಸಾದ್ ನೆರವಿನಿಂದ 20 ಮನೆಗಳನ್ನು ನಿರ್ಮಿಸಿ ಪಟ್ಲ ಯಕ್ಷಾಶ್ರ ಯಕ್ಷಾಶ್ರಯ ಯೋಜನೆಯಡಿ ಕಲಾವಿದರಿಗೆ ವಿತರಿಸುವ ಮಹತ್ವದ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಅವರು ತಿಳಿಸಿದರು.ಹಿರಿಯ ಪತ್ರಕರ್ತ ಯು. ಕೆ. ಕುಮಾರನಾಥ್ ಉದ್ಘಾಟಿಸಿದರು. ಮಂಗಳೂರು ಪ್ರೆಸ್‌ಕ್ಲಬ್ ನ ಅಧ್ಯಕ್ಷ ಪಿ. ಬಿ. ಹರೀಶ್ ರೈ ಅಧ್ಯಕ್ಷ ತೆ ವಹಿಸಿದ್ದರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಕಾರ್ಯಕ್ರಮ ಸಂಯೋಜಕ ದಯಾ ಕುಕ್ಕಾಜೆ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಇದ್ದರು.

ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಡಸ್ಥಳ ವಂದಿಸಿದರು. ಜಿತೇಂದ್ರ ಕುಂದೇಶ್ವರ ನಿರೂಪಿಸಿದರು.

ಕಾಲ ಮಿತಿ ಯಕ್ಷಗಾನ ಪ್ರಯೋಗಕ್ಕೆ ಪ್ರೇಕ್ಷಕರು ಹೊಂದಿಕೊಂಡಿದ್ದಾರೆ. ಬದಲಾದ ಕಾಲ ಘಟ್ಟದಲ್ಲಿ ಅದೊಂದು ಸಮಸ್ಯೆಯಾಗಿ ಕಂಡುಬಂದಿಲ್ಲ. ಪಾವಂಜೆ 2ನೇ ಮೇಳ ಯೋಜನೆ ಸದ್ಯಕ್ಕಿಲ್ಲ.

-ಪಟ್ಲ ಸತೀಶ್‌ ಶೆಟ್ಟಿ