ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ 10ನೇ ವರ್ಷದ ಪಟ್ಲ ಸಂಭ್ರಮ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಕುರಿತಾಗಿ ಫೌಂಡೇಶನ್‌ನ ಮಹಾದಾನಿಗಳ, ಮಹಾಪೋಷಕರ, ಟ್ರಸ್ಟಿಗಳ, ವಿವಿಧ ಪ್ರಾದೇಶಿಕ ಘಟಕಗಳ ಪದಾಧಿಕಾರಿಗಳ ಹಾಗೂ ಪಟ್ಲ ಅಭಿಮಾನಿಗಳ ಸಮಾಲೋಚನಾ ಸಭೆ ನಗರದ ಗೋಲ್ಡ್ ಪಿಂಚ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.ಯಕ್ಷಧ್ರುವ ಪಟ್ಲ ಫೌಂಡೇಶನಿನ ಮಹಾದಾನಿಗಳಾದ ಶಶಿಧರ ಶೆಟ್ಟಿ ಬರೋಡ ಮಾತನಾಡಿ, ಮುಂದಿನ ಕಾರ್ಯಕ್ರಮಗಳನ್ನು ನಿರಂತರವಾಗಿ ವ್ಯವಸ್ಥಿತ ರೀತಿಯಲ್ಲಿ ಮುಂದುವರಿಸುವ ನಿಟ್ಟಿನಲ್ಲಿ ಸುಮಾರು 10 ಕೋಟಿ ರು. ಮೊತ್ತದ ದೇಣಿಗೆಯನ್ನು ಮುಂಗಡವಾಗಿ ಸಂಗ್ರಹಿಸುವುದು ಉತ್ತಮ ಎಂದು ತಿಳಿಸಿದರು. ಪ್ರಥಮ ಹೆಜ್ಜೆಯಾಗಿ ತಾನು 1 ಕೋಟಿ ರು. ಮೊತ್ತವನ್ನು ದೇಣಿಗೆ ರೂಪದಲ್ಲಿ ನೀಡುವುದಾಗಿ ಘೋಷಣೆ ಮಾಡಿದರು.
ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರು ಇವತ್ತಿನ ವರೆಗೂ ಫೌಂಡೇಶನಿಗೆ ಸಹಕರಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದರು. ಈಗಾಗಲೇ ಟ್ರಸ್ಟಿಗೆ 1 ಕೋಟಿ ರು. ಮೊತ್ತವನ್ನು ನೀಡಿ ಮಹಾದಾನಿಯಾಗಿರುವ ಶಶಿಧರ ಶೆಟ್ಟಿಯವರು ದಶಮಾನೋತ್ಸವ ಕಾರ್ಯಕ್ರಮಕ್ಕೂ 1 ಕೋಟಿ ರು. ದೇಣಿಗೆ ಘೋಷಣೆಗೆ ಕೃತಜ್ಞತೆ ಸಲ್ಲಿಸಿದರು.ಯಕ್ಷಧ್ರುವ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ 2025ರ ಜೂನ್ 1ರಂದು ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದೆ. ದಶಮಾನೋತ್ಸವ ಸಂಭ್ರಮಕ್ಕೆ ರಚಿಸಲಾಗುವ ಸಮಿತಿಗೆ ಗೌರವಾಧ್ಯಕ್ಷರಾಗಿ ಕೊಡುಗೈದಾನಿ, ಫೌಂಡೇಶನಿನ ಮಹಾದಾನಿ ಡಾ. ಕೆ ಪ್ರಕಾಶ್ ಶೆಟ್ಟಿ ಹಾಗೂ ಅಧ್ಯಕ್ಷರಾಗಿ ಶಶಿಧರ ಶೆಟ್ಟಿ ಬರೋಡ ಇವರುಗಳ ಹೆಸರನ್ನು ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪೂರ್ಣಿಮಾ ಶಾಸ್ತ್ರಿ, ಲೋಕನಾಥ ಶೆಟ್ಟಿ, ವಿನಿತ್ ಕುಮಾರ್ ಶೆಟ್ಟಿ ಇವರು ಫೌಂಡೇಶನ್‌ನ ಟ್ರಸ್ಟಿಗಳಾಗಿ ಸೇರ್ಪಡೆಗೊಂಡರು. ಗೃಹ ನಿರ್ಮಾಣಕ್ಕಾಗಿ 15 ಲಕ್ಷ ರು. ಮೊತ್ತವನ್ನು 9 ಮಂದಿ ಕಲಾವಿದರಿಗೆ ವಿತರಿಸಲಾಯಿತು.
2025ರ ಜನವರಿ 8 ರಂದು ಶಾಸಕ ರಾಜೇಶ್ ನಾಯ್ಕ್ ಒಡೆತನದ ಒಡ್ಡೂರು ಫಾರ್ಮಿನಲ್ಲಿ ನಡೆಯಲಿರುವ ಯಕ್ಷ ಶಿಕ್ಷಣ ವಿದ್ಯಾರ್ಥಿ ಸಮ್ಮಿಲನದ ಬಗ್ಗೆ ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾಹಿತಿ ನೀಡಿದರು.ವೇದಿಕೆಯಲ್ಲಿ ಟ್ರಸ್ಟಿನ ಗೌರವಾಧ್ಯಕ್ಷರು /ಮಹಾದಾನಿಗಳಾದ ಶ್ರೀ ಕನ್ಯಾನ ಸದಾಶಿವ ಶೆಟ್ಟಿ, ಡಾ. ಕೆ ಪ್ರಕಾಶ್ ಶೆಟ್ಟಿ (ಎಂಆರ್‌ಜಿ ಗ್ರೂಪ್), ಟ್ರಸ್ಟಿನ ಸಂಚಾಲಕ ಐಕಳ ಹರೀಶ್ ಶೆಟ್ಟಿ, ಮಹಾ ಪೋಷಕ ಕೆ. ಎಂ. ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಅಶೋಕ್ ಶೆಟ್ಟಿ ಬೆಳ್ಳಾಡಿ, ಸಂತೋಷ್ ಶೆಟ್ಟಿ ಪೂನಾ, ಕರ್ನಿರೆ ವಿಶ್ವನಾಥ ಶೆಟ್ಟಿ, ಸವಣೂರು ಸೀತಾರಾಮ ರೈ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ ಇದ್ದರು.
ಪ್ರಧಾನ ಕಾರ್ಯದರ್ಶಿಗಳಾದ ಅಡ್ಯಾರ್ ಪುರುಷೋತ್ತಮ ಕೆ. ಭಂಡಾರಿ ನಿರೂಪಿಸಿದರು.